ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸ್ಥಳೀಯ ಯೋಜನಾ ಪ್ರದೇಶ (ಎಲ್‌ಪಿಎ) ವಿಸ್ತರಣೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಈ ಹಿಂದೆ 1988ರಲ್ಲಿ ಹುಡಾ ಗಡಿ ವಿಸ್ತರಣೆ ಆಗಿತ್ತು. ಈಗ ಎಲ್‌ಪಿಎ 407 ಚದರ ಕಿ.ಮೀ.ನಿಂದ 757 ಚದರ ಕಿ.ಮೀ.ಗೆ ವಿಸ್ತರಣೆ ಆಗಿದೆ’ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.
‘ಹುಡಾ ವ್ಯಾಪ್ತಿಯಲ್ಲಿ ಈ ಹಿಂದೆ 46 ಗ್ರಾಮಗಳು ಇದ್ದವು. ಈಗ ಹೊಸದಾಗಿ 46 ಗ್ರಾಮಗಳು ಸೇರ್ಪಡೆ ಆಗಿವೆ. ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ ಒಂದು, ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನಲ್ಲಿ 12, ಧಾರವಾಡ ತಾಲ್ಲೂಕಿನಲ್ಲಿ 27 ಮತ್ತು ಕಲಘಟಗಿ ತಾಲ್ಲೂಕಿನ ಆರು ಗ್ರಾಮಗಳು ಹೊಸದಾಗಿ ಸೇರಿವೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನೂತನವಾಗಿ ಸೇರ್ಪಡೆಯಾದ ಗ್ರಾಮಗಳ ಅಭಿವೃದ್ಧಿಗೆ ಪ್ರತ್ಯೇಕ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಸುಸಜ್ಜಿತ ರಸ್ತೆ, ನೀರು ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ಅಮೃತ್ ಯೋಜನೆಯಡಿ ನಾಲ್ಕನೇ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅದರಲ್ಲಿ, ಪ್ರತಿ ಗ್ರಾಮಗಳಿಗೆ ವರ್ತುಲ ರಸ್ತೆ ನಿರ್ಮಿಸಲಾಗುವುದು. ಅದಕ್ಕೆ ₹900 ಕೋಟಿ ವೆಚ್ಚವಾಗಲಿದೆ’ ಎಂದರು.
‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಪಿಡಿಒಗಳ ಸಭೆ ನಡೆಸಿ, ಗ್ರಾಮಗಳ ಸಮಸ್ಯೆ, ಭೂಮಿ ಲಭ್ಯತೆ ಕುರಿತು ಚರ್ಚಿಸಿ ಮಾಸ್ಟರ್ ಪ್ಲಾನ್‌ಗೆ ಅಂತಿಮ ರೂಪ ನೀಡಲಾಗುವುದು’ ಎಂದರು.
‘ರಿಯಲ್ ಎಸ್ಟೇಟ್‌ನಿಂದ ಲೇಔಟ್‌ಗಳ ದರ ಹೆಚ್ಚಾಗಿದೆ. ಈಗ ಹುಡಾ ಎಲ್‌ಪಿಎ ವಿಸ್ತರಣೆಯಿಂದ ನಿವೇಶನಗಳ ದರ ಕಡಿಮೆ ಆಗಲಿದೆ. ಅಲ್ಲದೆ, ಹುಡಾಗೆ ಸೇರಿದ ಗ್ರಾಮಗಳಲ್ಲಿ ಸಾರ್ವಜನಿಕರ ಜಮೀನಿಗೆ ಉತ್ತಮ ದರ ಸಿಗಲಿದೆ’ ಎಂದರು.
ಹುಡಾ ಆಯುಕ್ತ ಸಂತೋಷಕುಮಾರ ಬಿರಾದಾರ ಮಾತನಾಡಿ, ‘ಕುಸುಗಲ್‌ನಿಂದ ಧಾರವಾಡದ ಹೈಕೋರ್ಟ್ ಪೀಠದವರೆಗೆ ರಿಂಗ್ ರಸ್ತೆಗೆ ಪ್ರಸ್ತಾವ ಇದೆ. ಇದಕ್ಕೆ ಹುಡಾ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಿದ್ಧವಾಗಿದೆ. ಹುಡಾಗೆ ಸೇರ್ಪಡೆಯಾದ 46 ಗ್ರಾಮಗಳಲ್ಲಿ ಆಡಳಿತಾತ್ಮಕವಾಗಿ ಯಾವುದೇ ಬದಲಾವಣೆ ಆಗುವುದಿಲ್ಲ. ಅವು ಗ್ರಾಮ ಪಂಚಾಯಿತಿ ಮತ್ತು ಮಹಾನಗರ ಪಾಲಕೆಯಡಿ ಮುಂದುವರಿಯುತ್ತವೆ’ ಎಂದರು.
ಸದಸ್ಯರಾದ ವಿಜಯಾನಂದ ಶೆಟ್ಟಿ, ಸುನಿತಾ ಹುರಕಡ್ಕಿ, ಮಂಜುನಾಥ ಭೋವಿ, ಫೈಜ್ ಅಹ್ಮದ್ ಎನ್.ಕಲಘಟಗಿ, ನಗರ ಯೋಜನೆ ವಿಭಾಗದ ಮಹಾಂತೇಶ ಪೂಜಾರ, ಪ್ರಾಧಿಕಾರದ ಎಂಜಿನಿಯರ್‌ಗಳಾದ ಬಸವರಾಜ ದೇವಗಿರಿ, ಮುಕುಂದ ಜೋಶಿ, ಕಾರ್ಯದರ್ಶಿ ನರಸಪ್ಪನವರ, ವ್ಯವಸ್ಥಾಪಕ ಮಂಜುನಾಥ ಗೂಳಪ್ಪನವರ ಇದ್ದರು.
ಎಲ್‌ಪಿಎ ವಿಸ್ತರಣೆಯಿಂದ ಕಡಿಮೆ ದರಕ್ಕೆ ಭೂಮಿ ಸಿಗಲಿದೆ. ಹೀಗಾಗಿ 500 ಎಕರೆಯಲ್ಲಿ ಧಾರವಾಡ ಹುಬ್ಬಳ್ಳಿ ಮತ್ತು ಕುಂದಗೋಳ ಮಾರ್ಗದಲ್ಲಿ ಲೇಔಟ್ ನಿರ್ಮಾಣ ಮಾಡುವ ಚಿಂತನೆ ಇದೆ.– ಶಾಕೀರ ಸನದಿ, ಹುಡಾ
ಅನಧಿಕೃತ ಲೇಔಟ್; ನೋಟಿಸ್
ಹುಡಾ ವ್ಯಾಪ್ತಿಯಲ್ಲಿ 176 ಅನಧಿಕೃತ ಲೇಔಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ 88 ತೆರವು ಮಾಡಲಾಗಿದೆ. ನೋಟಿಸ್ ನೀಡಿದ ನಂತರ ಅವುಗಳ ಮಾಲೀಕರು ನಿಯಮಾನುಸಾರ ಕಾನೂನುಬದ್ಧಗಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಶಾಕೀರ ಸನದಿ ಹೇಳಿದರು.
‘ಅನಧಿಕೃತ ಲೇಔಟ್ ತೆರವಿಗೆ ಹೋದಾಗ ಯಾವುದೇ ಉದ್ದೇಶ ಇಟ್ಟುಕೊಂಡು ಸ್ವಹಿತಾಸಕ್ತಿಗೆ ತೆರವು ಮಾಡುತ್ತಿದ್ದಾರೆ ಎಂಬ ಟೀಕೆಗಳು ಬಂದವು. ಈ ವಿಷಯದಲ್ಲಿ ನಾನು ಜೇಮ್ಸ್ ಬಾಂಡ್ ಆಗಲು ಸಾಧ್ಯವಾಗಲಿಲ್ಲ. ಆದರೆ ಪದೇ ಪದೇ ಅಕ್ರಮ ಲೇಔಟ್ ಮಾಡುವುದು ಕಂಡು ಬಂದರೆ ಅಂತಹ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆ. ಹೀಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಿಂದಾಗಿ ಅಕ್ರಮ ಲೇಔಟ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗಾಗಲೇ ಎರಡು ಅಕ್ರಮ ಲೇಔಟ್‌ಗಳ ಜಾಗ ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.