ADVERTISEMENT

ಹುಬ್ಬಳ್ಳಿ | ಪ್ರಯಾಣಿಕರು ಹೆಚ್ಚಳ: 48 ನಗರ ಸಾರಿಗೆ ಹೊಸ ಬಸ್‌ಗಳ ಸಂಚಾರ

ಎಲ್‌.ಮಂಜುನಾಥ
Published 4 ಜನವರಿ 2025, 7:45 IST
Last Updated 4 ಜನವರಿ 2025, 7:45 IST
ಹುಬ್ಬಳ್ಳಿ ನಗರದ ಬಿಆರ್‌ಟಿಎಸ್‌ ಘಟಕದಲ್ಲಿ ಈಚೆಗೆ ನಗರ ಸಾರಿಗೆ ನೂತನ ಬಸ್‌ಗಳನ್ನು ಉದ್ಘಾಟಿಸಲಾಯಿತು
ಹುಬ್ಬಳ್ಳಿ ನಗರದ ಬಿಆರ್‌ಟಿಎಸ್‌ ಘಟಕದಲ್ಲಿ ಈಚೆಗೆ ನಗರ ಸಾರಿಗೆ ನೂತನ ಬಸ್‌ಗಳನ್ನು ಉದ್ಘಾಟಿಸಲಾಯಿತು   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರಗಳ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ ಆಧುನಿಕ ಸೌಲಭ್ಯ ಹೊಂದಿರುವ 48 ನಗರ ಸಾರಿಗೆ ಬಸ್‌ಗಳ ಸಂಚಾರವನ್ನು ಅವಳಿ ನಗರಗಳಲ್ಲಿ ಆರಂಭಿಸಿದೆ. 

‘ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿನ 129 ರೂಟ್‌ಗಳಲ್ಲಿ ನಿತ್ಯ 127 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಇವುಗಳೊಂದಿಗೆ 28 ಹೊಸ ಬಸ್‌ಗಳ ಸೇವೆಯನ್ನೂ ಆರಂಭಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಇನ್ನೂ ಹೆಚ್ಚುವರಿಯಾಗಿ ಹೊಸದಾಗಿ 20 ರೂಟ್‌ಗಳನ್ನು ಮಾಡುವ ಚಿಂತನೆಯೂ ಇದೆ. ಧಾರವಾಡ ನಗರದ ವ್ಯಾಪ್ತಿಯಲ್ಲಿ ಪ್ರಸ್ತುತ 59 ರೂಟ್‌ಗಳಿದ್ದು,‌ ಇಲ್ಲಿ 60 ನಗರ ಸಾರಿಗೆ ಬಸ್‌ಗಳ ಸಂಚಾರವಿದೆ. ಇವುಗಳೊಂದಿಗೆ ಹೊಸದಾಗಿ 20 ನಗರ ಸಾರಿಗೆ ಬಸ್‌ಗಳನ್ನು ಜನರ ಸೇವೆಗೆ ನೀಡಲಾಗಿದೆ. ಅವಳಿ ನಗರದಲ್ಲಿ ನಿತ್ಯ ಒಟ್ಟು 235 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ (ಹು–ಧಾ ನಗರ ಸಾರಿಗೆ) ಎಂ.ಸಿದ್ದಲಿಂಗೇಶ ಮಾಹಿತಿ ನೀಡಿದರು.

ವಾಣಿಜ್ಯ ನಗರವಾದ ಹುಬ್ಬಳ್ಳಿಗೆ ನಿತ್ಯ ಲಕ್ಷಕ್ಕೂ ಅಧಿಕ ಜನರು ಬಂದು ಹೋಗುತ್ತಾರೆ. ಇಷ್ಟು ಪ್ರಯಾಣಿಕರನ್ನು ನಗರ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ತಲುಪಿಸುವಲ್ಲಿ ಸಿಟಿ ಬಸ್‌ ನಿಲ್ದಾಣ (ಸಿಬಿಟಿ), ಹೊಸೂರು ಬಸ್‌ ಪ್ರಾದೇಶಿಕ ಬಸ್‌ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್‌ನಿಲ್ದಾಣಗಳ ಮೂಲಕ ಈ ಎಲ್ಲಾ ನಗರ ಸಾರಿಗೆ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. 

ADVERTISEMENT

‘ನಗರ ಸಾರಿಗೆಯ ಹೊಸ ಬಸ್‌ಗಳು ಪ್ರಸ್ತುತ ಸಿಟಿ ಬಸ್‌ ನಿಲ್ದಾಣ (ಸಿಬಿಟಿ), ಹುಬ್ಬಳ್ಳಿಯ ಹಳೇ ಬಸ್‌ನಿಲ್ದಾಣ ಹಾಗೂ ಧಾರವಾಡದ ಹೊಸ ಬಸ್‌ ನಿಲ್ದಾಣದಿಂದ ಕಾರ್ಯ ಆರಂಭಿಸಿವೆ. ಎಂದಿನಂತೆ ಹಳೆ ಬಸ್‌ಗಳು ಅವಳಿ ನಗರದ ಪ್ರಮುಖ ನಿಲ್ದಾಣಗಳಿಂದ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿವೆ’ ಎನ್ನುತ್ತಾರೆ ಅವರು. 

ನಗರ ಸಾರಿಗೆ ಹಳೆಯ ಬಸ್‌ಗಳ ಜೊತೆಯಲ್ಲಿ ಹೊಸ ಬಸ್‌ಗಳು ಹುಬ್ಬಳ್ಳಿ ನಗರ ವ್ಯಾಪ್ತಿಯ ಕೋರ್ಟ್‌ ಸರ್ಕಲ್‌, ಬಿವಿಬಿ ಕಾಲೇಜು, ಲಿಂಗರಾಜು ನಗರ, ಜಯನಗರ, ವಿದ್ಯಾನಗರ, ದೇಶಪಾಂಡೆ ನಗರ ಸೇರಿದಂತೆ ನಗರದಲ್ಲಿ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಧಾರವಾಡ ಹೊಸ ಬಸ್‌ ನಿಲ್ದಾಣದಿಂದ ಪಾವಟೆ ನಗರ, ರಾಮನಗರ, ನೆಹರೂ ನಗರ ಸೇರಿದಂತೆ ಧಾರವಾಡ ನಗರ ವ್ಯಾಪ್ತಿಯಲ್ಲಿನ ಪ್ರಮುಖ ರೂಟ್‌ಗಳಲ್ಲಿ ನೂತನ ಬಸ್‌ಗಳ ಸೇವೆ ಆರಂಭಿಸಲಾಗಿದೆ. 

ನಿತ್ಯ 2 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ:

‘ಹುಬ್ಬಳ್ಳಿ ನಗರದಲ್ಲಿ ನಿತ್ಯ 1.10ಲಕ್ಷ ಪ್ರಯಾಣಿಕರು, ಧಾರವಾಡ ನಗರ ವ್ಯಾ‍ಪ್ತಿಯಲ್ಲಿ 1ಲಕ್ಷ ಪ್ರಯಾಣಿಕರು ಸೇರಿದಂತೆ ಅವಳಿ ನಗರದಲ್ಲಿ ನಿತ್ಯ 2 ಲಕ್ಷಕ್ಕೂ ಅಧಿಕ ಜನರು 235 ನಗರ ಸಾರಿಗೆ ಬಸ್‌ಗಳಲ್ಲಿ ನಿತ್ಯ ಸಂಚರಿಸುತ್ತಾರೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ನಗರ ಸಾರಿಗೆ ಬಸ್‌ಗಳ ಸೇವೆಯನ್ನು ಕಲ್ಪಿಸಲಾಗುವುದು’ ಎನ್ನುತ್ತಾರೆ ಅವರು. 

‘ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅನುಷ್ಠಾನದ ನಂತರ ನಗರ ಸಾರಿಗೆ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಚಾರ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಸ್ವಲ್ಪ ತೊಂದರೆಯಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಗರ ಸಾರಿಗೆ ಬಸ್‌ಗಳ ಸೇವೆಯನ್ನು ಅವಳಿ ನಗರಗಳಲ್ಲಿ ಹೆಚ್ಚಿಸಲಾಯಿತು. ಜನವರಿ ಅಂತ್ಯದೊಳಗೆ ಹೆಚ್ಚುವರಿಯಾಗಿ ಇನ್ನೂ 10 ನಗರ ಸಾರಿಗೆ ಹೊಸ ಬಸ್‌ಗಳು ಸಂಚಾರ ಆರಂಭಿಸಲಿವೆ’ ಎನ್ನುತ್ತಾರೆ. 

‘ಎಂಜಿನ್‌ ಹಾಳಾದ ಹಾಗೂ 15 ವರ್ಷ ಹಳೆಯ ವಾಹನಗಳನ್ನು ಯಾವುದೇ ಕಾರಣಕ್ಕೂ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ. ಎಂಜಿನ್‌ ಸುಸ್ಥಿತಿಯಲ್ಲಿರುವ ಶೇ 40ರಷ್ಟು ಹಳೆಯದಾದ ಬಸ್‌ಗಳನ್ನು ನವೀಕರಣ ಮಾಡಿ, ಹೊಸ ಸ್ಪರ್ಶ ನೀಡುವ ಮೂಲಕ ಪ್ರಯಾಣಿಕರ ಸೇವೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಇದರಿಂದ ಸಂಸ್ಥೆಯ ಆರ್ಥಿಕ ಹೊರೆಯನ್ನೂ ನಿಭಾಯಿಸಿದಂತಾಗುತ್ತದೆ’ ಎನ್ನುತ್ತಾರೆ. 

ಸಂಸ್ಥೆಯ ನಗರ ಸಾರಿಗೆ ಬಸ್‌ಗಳ ಜೊತೆಗೆ ಬೇಂದ್ರೆ ನಗರ ಸಾರಿಗೆಯು ಹುಬ್ಬಳ್ಳಿ–ಧಾರವಾಡ ನಗರದ ಮಾರ್ಗದ ಜನರಿಗೆ ಮಾತ್ರ ಸೇವೆ ನೀಡುತ್ತಿದೆ.  

ಪ್ರಯಾಣಿಕ ಸ್ನೇಹಿ ಸೌಲಭ್ಯ: ‘ನೂತನ ನಗರ ಸಾರಿಗೆ ಬಸ್‌ಗಳನ್ನು ಪ್ರಯಾಣಿಕ ಸ್ನೇಹಿಯಾಗಿ ರೂಪಿಸಲಾಗಿದ್ದು, ಅವುಗಳಲ್ಲಿ ನಿಲ್ದಾಣಗಳ ಡಿಜಿಟಲ್‌ ಮಾಹಿತಿ ವಿವರ (ಎಲ್​​ಇಡಿ ಬೋರ್ಡ್‌), ಜಿಪಿಎಸ್‌ ವ್ಯವಸ್ಥೆ, ಬಸ್ಸಿನಲ್ಲಿ ಸಿಸಿ ಕ್ಯಾಮೆರಾ, ಡೋರ್‌ ಲಾಕ್‌ ವ್ಯವಸ್ಥೆ ಹಾಗೂ ಬಸ್‌ ನಿಲುಗಡೆ ಬಟನ್‌ ಸೌಲಭ್ಯಗಳಿವೆ’ ಎಂದು ಮಾಹಿತಿ ನೀಡಿದರು. 

ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ನಗರ ಸಾರಿಗೆ ಬಸ್‌ ಸೌಲಭ್ಯ ಜನವರಿಯೊಳಗೆ ಹೆಚ್ಚುವರಿಯಾಗಿ 10 ನಗರ ಸಾರಿಗೆ ಬಸ್‌ ಸೌಲಭ್ಯ
ಧಾರವಾಡಕ್ಕಿಂತ ಹುಬ್ಬಳ್ಳಿ ನಗರದಲ್ಲಿ ಹೆಚ್ಚು ಬಡಾವಣೆ ಪ್ರದೇಶಗಳಿವೆ. ಜನಸಂಖ್ಯೆಯೂ ಹೆಚ್ಚಿದೆ. ಆದರೆ ನಗರ ಸಾರಿಗೆ ಬಸ್‌ಗಳ ಕೊರತೆ ಇದೆ. ನಮ್ಮ ರೂಟ್‌ನಲ್ಲಿ ಹೆಚ್ಚುವರಿ ಬಸ್‌ಗಳನ್ನು ಬಿಟ್ಟರೆ ಅನುಕೂಲ.
–ಕೃಷ್ಣಮೂರ್ತಿ ಪವಾರ್ ಪ್ರಯಾಣಿಕ ಅಯೋಧ್ಯ ನಗರ ಚೆನ್ನಪೇಟೆ
‘ಹೆಚ್ಚುವರಿ ನಗರ ಸಾರಿಗೆ ಬಸ್‌ ಅವಶ್ಯ’
ಹುಬ್ಬಳ್ಳಿ ನಗರದಲ್ಲಿ ಕೆಎಂಸಿಆರ್‌ಐ ಆಸ್ಪತ್ರೆ (ಕಿಮ್ಸ್‌) ಇಸ್ಕಾನ್‌ ದೇವಸ್ಥಾನ ಕಾನೂನು ವಿಶ್ವವಿದ್ಯಾಲಯ ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಶಾಲೆ ಕಾಲೇಜುಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ 55 ಬಸ್‌ ಡಿಪೊ ಪ್ರಾದೇಶಿಕ ಕಾರ್ಯಾಗಾರ ಘಟಕ ಬಸ್‌ ತಯಾರಿಕಾ ಘಟಕ ಮತ್ತು ಪ್ರಾದೇಶಿಕ ತರಬೇತಿ ಕೇಂದ್ರ. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಪೋವನ ಸಾಧನಕೇರಿ ಉದ್ಯಾನ ಸೇರಿದಂತೆ ಪ್ರಮುಖ ಸ್ಥಳಗಳಿವೆ. ನಿತ್ಯ ಎರಡೂ ನಗರಗಳ ವ್ಯಾಪ್ತಿಯಲ್ಲಿಯೇ ಒಂದೂವರೆ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಎರಡೂ ನಗರಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ನಗರ ಸಾರಿಗೆ ಬಸ್‌ಗಳು ಬೇಕಿದೆ’ ಎಂದು ಹೆಸರು ಹೇಳಲು ಇಚ್ಛಿಸಿದ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ. 
ಸಿಬ್ಬಂದಿ ಕೊರತೆ: ನೇಮಕಾತಿಗೆ ಆದ್ಯತೆ
‘ಅವಳಿ ನಗರಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಬೇಡಿಕೆಯಂತೆ ಹೆಚ್ಚುವರಿ ರೂಟ್‌ಗಳನ್ನು ಮಾಡಬೇಕಿದೆ. ಬಸ್‌ಗಳಿಗೆ ಬೇಡಿಕೆಯೂ ಇದೆ. ಆದರೆ ನಮಲ್ಲಿ ನಿರ್ವಾಹಕ ಚಾಲಕ ಸಿಬ್ಬಂದಿಯ ಕೊರತೆ ಇದೆ. ಈ ಕಾರಣ ಈಗಾಗಲೇ ಚಾಲಕ/ ಚಾಲಕ ಕಂ ನಿರ್ವಾಹಕ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಚಾಲಕರ ಚಾಲನಾ ವೃತ್ತಿ ಪರೀಕ್ಷೆ ನಡೆಯುತ್ತಿದೆ. ಪ್ರಸ್ತುತ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಏಜೆನ್ಸಿಗಳ ಮೂಲಕ ಚಾಲಕ/ ನಿರ್ವಾಹಕರನ್ನು ನೇಮಿಸಿಕೊಳ್ಳಲಾಗಿದೆ‘ ಎಂದು ಎಂ.ಸಿದ್ದಲಿಂಗೇಶ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.