
ರೇಣುಕಾ ನಗರದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಿ | ಮೊರಾರ್ಜಿ ನಗರ ಎರಡನೇ ಹಂತದಲ್ಲಿ ಖಾಲಿ ನಿವೇಶನ ಸ್ವಚ್ಛಗೊಳಿಸಿ | ಕೇಶ್ವಾಪುರದಲ್ಲಿ ಬೀದಿ ದೀಪ ಹಾಳಾಗಿದ್ದು, ಸರಿಪಡಿಸಿ
ಹುಬ್ಬಳ್ಳಿ: ‘ಅವಳಿ ನಗರದ ಕೆಲವು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಇಡಿ ಬೀದಿ ದೀಪ ಅಳವಡಿಸಲಾಗಿದ್ದು, ಅವು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಿಕೊಂಡು ಟೆಂಡರ್ ಪಡೆದ ಕಂಪನಿಗೆ ಕಾರ್ಯಾದೇಶ ನೀಡಲಾಗುತ್ತದೆ’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಇಲ್ಲಿನ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಬುಧವಾರ ನಡೆದ ‘ಮೇಯರ್ ಜತೆ ಮಾತುಕತೆ’ ಫೋನ್‌ಇನ್ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಗೋಕುಲ ರಸ್ತೆ, ತೋಳನಕೆರೆ ಮಾರ್ಗ ಸೇರಿ ಪ್ರಮುಖ ರಸ್ತೆಗಳು ಮತ್ತು ಮೂರ್ನಾಲ್ಕು ವಾರ್ಡ್‌ಗಳಲ್ಲಿ ಒಂದು ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲು ಸೂಚಿಸಲಾಗಿದ್ದು, ಟೆಂಡರ್ ಪಡೆದವರು 600 ದೀಪಗಳನ್ನು ಅಳವಡಿಸಿದ್ದಾರೆ’ ಎಂದರು.
‘ವಿವಿಧ ವೋಲ್ಟ್‌ನ ದೀಪಗಳನ್ನು ಅಳವಡಿಸುವಂತೆ ಹೇಳಲಾಗಿದೆ. ಬೆಳಕಿನ ಪ್ರಕಾಶಮಾನ ಸೇರಿದಂತೆ ಇನ್ನಿತರ ವಿಷಯಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಟೆಂಡರ್ ಪಡೆದ ಕಂಪನಿ 94 ತಿಂಗಳ ಬ್ಯಾಂಕ್ ಗ್ಯಾರಂಟಿ ನೀಡಲು ಒಪ್ಪಿದೆ’ ಎಂದರು.
‘ನೀರಿನ ಸಮಸ್ಯೆ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಗಮನ ಸೆಳೆದಿದ್ದರು. ಹೀಗಾಗಿ ಫೆ.10ರಂದು ನೀರಿನ ವಿಷಯಕ್ಕೆ ಸಂಬಂಧಿಸಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ’ ಎಂದು ಹೇಳಿದರು.
‘₹324 ಕೋಟಿ ನೀರಿನ ಕರ ಬಾಕಿ ಇದೆ. ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಮೂಲಕ ನೀರಿನ ಕರ ಪಾವತಿಗೆ ಅವಕಾಶ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ವಿಶೆಷ ಸಾಮಾನ್ಯ ಸಭೆಯಲ್ಲೂ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳಿಸಲಾಗುವುದು’ ಎಂದರು.
‘ನನ್ನ ವಾರ್ಡ್‌ನಲ್ಲಿ ಈಗಾಗಲೇ ‘ಸ್ವಚ್ಛ ಸಂಡೇ’ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಲಾಗಿದೆ. ಇದೇ ರೀತಿ ಎಲ್ಲ ವಾರ್ಡ್‌ಗಳಲ್ಲಿಯೂ ಸ್ವಚ್ಛತಾ ಕಾರ್ಯ ನಡೆಸಲಾಗುವುದು’ ಎಂದು ಹೇಳಿದರು.
‘24X7 ಕುಡಿಯುವ ನೀರಿನ ಯೋಜನೆಯ ಭಾಗವಾಗಿ 24 ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಸವದತ್ತಿ ಜಾಕ್‌ವೆಲ್‌ನಿಂದ ಅಮ್ಮಿನಬಾವಿವರೆಗೆ ಪೈಪ್‌ಲೈನ್ ಕಾಮಾರಿ ಪೂರ್ಣಗೊಂಡಿದೆ. ನೀರು ಶುದ್ಧೀಕರಣ ಘಟಕದಲ್ಲಿ ಫಿಲ್ಟರ್ ಬೆಡ್, ಎಲೆಕ್ಟ್ರಿಕ್ ಕಾಮಗಾರಿ ಬಾಕಿ ಇವೆ’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.
‘ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 25 ಕರೆಗಳು ಬಂದಿದ್ದು, ರಸ್ತೆ, ನೀರು, ಬೀದಿ ದೀಪಕ್ಕೆ ಸಂಬಂಧಿಸಿದಂತೆ 35 ದೂರುಗಳು ದಾಖಲಾಗಿವೆ.
ಅಧಿಕಾರಿಗೆ ತರಾಟೆ: ಫೋನ್ ಇನ್ ಕಾರ್ಯಕ್ರಮಕ್ಕೆ ಅರ್ಧ ಗಂಟೆ ತಡವಾಗಿ ಬಂದ ವಲಯ ಆಯುಕ್ತರನ್ನು ಪಾಲಿಕೆ ಕಮಿಷನರ್ ತರಾಟೆಗೆ ತೆಗೆದುಕೊಂಡರು.
‘ನೀರಿನ ಸಮಸ್ಯೆ ಬಗೆಹರಿಸಿ’
‘ಎಂಟತ್ತು ದಿನಗಳಿಂದ ನೀರು ಬಂದಿಲ್ಲ. ನೀರು ಬಿಟ್ಟರೂ ಅರ್ಧ ಗಂಟೆ ಮಾತ್ರ ನೀರು ಬರುತ್ತದೆ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಮ್ಮ ಬಡಾವಣೆ ಎತ್ತರ ಪ್ರದೇಶದಲ್ಲಿ ಇರುವುದರಿಂದ ನೀರಿನ ಟ್ಯಾಂಕರ್ ಸಹ ಬರುವುದಿಲ್ಲ. ಕೊಳವೆಬಾವಿ ನೀರು ಕುಡಿದು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕಸ ಸಂಗ್ರಿಸುವ ವಾಹನಗಳು ಸಹ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಶಿಮ್ಲಾ ನಗರದ ನಿವಾಸಿಯೊಬ್ಬರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.