ADVERTISEMENT

ಸ್ವಚ್ಛತೆಯಲ್ಲಿ ಹಿಂದುಳಿದ ಹು–ಧಾ ಮಹಾನಗರ: ಸುಭಾಷ ಅಡಿ

ಸ್ವಚ್ಛ ಹುಬ್ಬಳ್ಳಿ– ಧಾರವಾಡ ನಿರ್ಮಾಣದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:55 IST
Last Updated 11 ಡಿಸೆಂಬರ್ 2025, 5:55 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ಸುಭಾಷ ಅಡಿ ಉದ್ಘಾಟಿಸಿದರು. ಮೇಯರ್‌ ಜ್ಯೋತಿ ಪಾಟೀಲ, ಉಪ ಮೇಯರ್‌ ಸಂತೋಷ ಚವ್ಹಾಣ್‌, ಆಯುಕ್ತ ರುದ್ರೇಶ ಘಾಳಿ ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ಸುಭಾಷ ಅಡಿ ಉದ್ಘಾಟಿಸಿದರು. ಮೇಯರ್‌ ಜ್ಯೋತಿ ಪಾಟೀಲ, ಉಪ ಮೇಯರ್‌ ಸಂತೋಷ ಚವ್ಹಾಣ್‌, ಆಯುಕ್ತ ರುದ್ರೇಶ ಘಾಳಿ ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಮುಂಬೈ ಪ್ರಾಂತವಾಗಿದ್ದಾಗಲೂ ಉತ್ತರ ಕರ್ನಾಟಕ ಹಿಂದುಳಿದಿತ್ತು. ಈಗಲೂ ಅದು ಮುಂದುವರಿದಿದೆ. ನಗರದ ಅಭಿವೃದ್ಧಿಗೆ ಹಾಗೂ ಸೌಂದರ್ಯೀಕರಣಕ್ಕೆ ಏನು ಮಾಡಬೇಕೆನ್ನುವ ಕುರಿತು ಎಲ್ಲರೂ ಒಗ್ಗೂಡಿ ಯೋಜನೆ ರೂಪಿಸಬೇಕಿದೆ’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ಸುಭಾಷ ಅಡಿ ಅಭಿಪ್ರಾಯಪಟ್ಟರು.

ನಗರದ ಇಂದಿರಾ ಗಾಜಿನ ಮನೆ ಉದ್ಯಾನದ ಆವರಣದಲ್ಲಿ ಹು–ಧಾ ಮಹಾನಗರ ಪಾಲಿಕೆ ‘ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಹುಬ್ಬಳ್ಳಿ-ಧಾರವಾಡ ನಿರ್ಮಾಣದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ’ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.

‘ನಗರಾಭಿವೃದ್ಧಿ, ಸ್ವಚ್ಛತೆ ಹಾಗೂ ಸೌಂದರ್ಯೀಕರಣ ಪಾಲಿಕೆಯದ್ದಷ್ಟೇ ಜವಾಬ್ದಾರಿಯಲ್ಲ, ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಸ್ವಚ್ಛತೆ ಕುರಿತು ಈಗಾಗಲೇ ಸಾಕಷ್ಟು ನಿಯಮ, ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೂ ನಿರೀಕ್ಷಿತ ಗುರಿ ತಲುಪಿಲ್ಲ. ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಯಮಾವಳಿ ರೂಪಿಸಿದ್ದರೂ, ಸರಿಯಾಗಿ ಪಾಲನೆಯಾಗುತ್ತಿಲ್ಲ. ಬೆಂಗಳೂರಿಗೆ ಹೋಲಿಸಿದರೆ ಹುಬ್ಬಳ್ಳಿ ಯಾವ ಹಂತದಲ್ಲೂ ಅಭಿವೃದ್ಧಿಯಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಹಸಿ, ಒಣ ಹಾಗೂ ಹಾನಿಕಾರಕ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಎರಡು ತಿಂಗಳು ಕಠಿಣವಾಗಿ ನಿರ್ವಹಣೆ ಮಾಡಬೇಕು. ತಮ್ಮ ವಾರ್ಡಿನಲ್ಲಿ ಇಂತಹ ಕಸ ಎಷ್ಟು ಬರುತ್ತದೆ ಎಂದು ತಿಳಿದು, ಯೋಜನೆ ರೂಪಿಸಬೇಕು. ನಾಗರಿಕರ ಸಹಭಾಗಿತ್ವದಲ್ಲಿ 50 ಮನೆಗಳಿಗೆ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ನಿರ್ವಹಣೆ ಮಾಡಬೇಕು. ಜಾಗೃತಿ ನಂತರವೂ ತಪ್ಪು ಮಾಡಿದರೆ ದಂಡ ವಿಧಿಸಬೇಕು’ ಎಂದು ನಿರ್ದೇಶಿಸಿದರು.

ಗಣ್ಯ ವ್ಯಕ್ತಿಗಳು ಬರುವಾಗ ಮಾತ್ರ ಸ್ವಚ್ಛತೆ ಮಾಡುವುದಲ್ಲ ಅದು ನಿರಂತರ ಪ್ರಕ್ರಿಯೆಯಾಗಬೇಕು. ಬೇರೆ ರಾಜ್ಯದವರು ನಮ್ಮ ನಗರವವನ್ನು ಮಾದರಿಯನ್ನಾಗಿ ನೋಡುವಂತೆ ಕೆಲಸ ಮಾಡಬೇಕು
–ಜ್ಯೋತಿ ಪಾಟೀಲ, ಮೇಯರ್‌

ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ‘ಪಾಲಿಕೆ ಹಾಗೂ ಸಾರ್ವಜನಿಕರ ನಡುವಿನ ವಿಶ್ವಾಸ ಸಡಿಲವಾಗಿದೆ. ಹೀಗಾಗಿ ಪಾಲಿಕೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಾರ್ವಜನಿಕರಿಗೆ ತಲುಪುತ್ತಿಲ್ಲ. ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಭಾಗಿತ್ವ ಗಟ್ಟಿಯಾಗಬೇಕಿದೆ. ನಮ್ಮ ನಗರ ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕಿದೆ’ ಎಂದರು.

ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿದರು. ಉಪಮೇಯರ್ ಸಂತೋಷ ಚವ್ಹಾಣ, ಸಭಾನಾಯಕ ಈರೇಶ ಅಂಚಟಗೇರಿ, ಇಮ್ರಾನ್ ಎಲಿಗಾರ, ಮಹಾದೇವಪ್ಪ ನರಗುಂದ, ಸುರೇಶ ಬೇದ್ರೆ, ಶೀಲಾ ಕಾಟಕರ, ಮೀನಾಕ್ಷಿ ವಂಟಮುರಿ, ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಹೆಚ್ಚುವರಿ ಆಯುಕ್ತ ಆರ್.ವಿಜಯಕುಮಾರ, ಮುಖ್ಯಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಪರಿಸರ ಅಧಿಕಾರಿ ಐ.ಎಚ್. ಜಗದೀಶ, ಜಗದೀಶ ಹಿರೇಮನಿ ಸೇರಿದಂತೆ ಉದ್ಯಮಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಏಕಬಳಕೆ ಪ್ಲಾಸ್ಟಿಕ್‌: ಕಠಿಣ ಕ್ರಮಕ್ಕೆ ತಾಕೀತು

‘2016ರಿಂದ ಏಕ ಬಳಕೆ ಪ್ಲಾಸ್ಟಿಕ್‌ ನಿಷಿದ್ಧವಾಗಿದ್ದರೂ ಇಂದಿಗೂ ಮಾರುಕಟ್ಟೆಯಲ್ಲಿ ಮುಕ್ತವಾಗಿ ದೊರೆಯುತ್ತಿದೆ. ಅದರ ಸಂಪೂರ್ಣ ನಿಷೇಧಕ್ಕೆ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲೇಬೇಕು’ ಎಂದು ಸುಭಾಷ ಅಡಿ ತಾಕೀತು ಮಾಡಿದರು. ‘ಏಕ ಬಳಕೆ ಪ್ಲಾಸ್ಟಿಕ್‌ ಬಳಸಿದರೆ ಅಂಗಡಿ ಮಾಲೀಕರ ಪರವಾನಗಿ ರದ್ದುಪಡಿಸುವ ಅಥವಾ ಅಮಾನತ್ತು ಮಾಡುವ ಅಧಿಕಾರ ಪಾಲಿಕೆಗೆ ಇದೆ. ಈ ನಿರ್ಣಯವನ್ನು ಕಡ್ಡಾಯವಾಗಿ ಜಾರಿಗೆ ತಂದು ಕ್ರಮ ಕೈಗೊಳ್ಳಬೇಕು. ನಮ್ಮ ನಗರ ಎನ್ನುವ ಅಭಿಮಾನ ನಾಗರಿಕರಲ್ಲಿದೆ. ಆ ಅಭಿಮಾನವನ್ನೇ ಅಭಿವೃದ್ಧಿ ಹಾಗೂ ಸ್ವಚ್ಛ ನಗರವನ್ನಾಗಿಸಲು ಬಳಸಿಕೊಳ್ಳಬೇಕು. ಕಟ್ಟಡ ತ್ಯಾಜ್ಯ ಶುಲ್ಕ ಕಟ್ಟಿಸಿಕೊಂಡ ನಂತರ ಅದರ ನಿರ್ವಹಣೆ ಪಾಲಿಕೆಯ ಜವಾಬ್ದಾರಿ. ನಗರದ ಸಮಸ್ಯೆಗಳು ತಮ್ಮದು ಎನ್ನುವ ಚಿಂತನೆ ಜನಪ್ರತಿನಿಧಿಗಳಲ್ಲಿ ಮೂಡಬೇಕು’ ಎಂದರು.