
ಹುಬ್ಬಳ್ಳಿ: ಬೆಳಕಿನ ಮಹತ್ವ ಸಾರುವ ದೀಪಾವಳಿ ಹಬ್ಬವನ್ನು ನಗರ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಸಡಗರದಿಂದ ಆಚರಿಸಲಾಯಿತು.
ದೀಪಾವಳಿ ಹಬ್ಬದ ಮೂರನೇ ದಿನವಾದ ಬುಧವಾರ, ಬೆಳಿಗ್ಗೆ ಮನೆ ಮಂದಿ ಅಭ್ಯಂಜನ ಸ್ನಾನ ಮಾಡಿದರು. ಜಾನುವಾರುಗಳಿಗೂ ಸ್ನಾನ ಮಾಡಿಸಿ, ಅಲಂಕಾರ ಮಾಡಿದರು. ನಂತರ, ದೇವರಿಗೆ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮನೆಯ ಹಿರಿಯರಿಗೂ ಪೂಜೆ ಸಲ್ಲಿಸಲಾಯಿತು.
ಕೆಲವರು, ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ದೇವಾಲಯಗಳನ್ನು ವಿದ್ಯುದ್ದೀಪ, ಬಗೆ ಬಗೆಯ ಹೂವು, ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ರೀತಿಯ ಪೂಜೆ, ಅರ್ಚನೆ, ಆರಾಧನೆಗಳು ಜರುಗಿದವು. ನಂತರ, ಪ್ರಸಾದ ವಿತರಿಸಲಾಯಿತು.
ಪಟಾಕಿ ಖುಷಿ: ಮಕ್ಕಳು, ಯುವಜನರು ಬೆಳಿಗ್ಗೆಯಿಂದಲೇ ಪಟಾಕಿ ಹೊಡೆದು ಖುಷಿಪಟ್ಟರು. ತರಹೇವಾರಿ ಮಾದರಿಯ, ಶಬ್ದದ, ಬೆಳಕಿನ ಪಟಾಕಿಗಳು ನೋಡುಗರನ್ನೂ ಸೆಳೆದವು. ರಾತ್ರಿ, ಬಣ್ಣ ಬಣ್ಣದ ಚಿತ್ತಾರ ಬಾನಂಗಳದಲ್ಲಿ ಮೂಡಿತು. ತಡರಾತ್ರಿವರೆಗೂ ಪಟಾಕಿಗಳ ಶಬ್ದ ಕೇಳಿಬರುತ್ತಿತ್ತು.
ಗೌಳಿ ಸಮುದಾಯದವರು ಹಾಗೂ ತಾಂಡಾಗಳಲ್ಲಿ ಲಂಬಾಣಿ ಸಮಾಜದವರು ತಮ್ಮ ವಿಶಿಷ್ಟ ಪರಂಪರೆಯಂತೆ ದೀಪಾವಳಿ ಆಚರಿಸಿ, ಸಂಭ್ರಮಿಸಿದರು.
ಹಣತೆ, ಪಟಾಕಿ ಹಂಚಿಕೆ: ನಗರದ ಅಮರಗೋಳದ ಎಪಿಎಂಸಿ ಹಮಾಲರ ವಸತಿ ಕಾಲೊನಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಹಮಾಲರ ಕುಟುಂಬಕ್ಕೆ ಹಣತೆ, ಪಟಾಕಿ ಮತ್ತು ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಗೋಕುಲ ರಸ್ತೆಯ ಹನುಮಂತ ನಗರದಲ್ಲೂ ದೀಪಾವಳಿ ಆಚರಿಸಿದರು.
ಬಿಜೆಪಿ ಹು–ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು, ವ್ಯಾಪಾರಸ್ಥರ ಸಂಘದ ಚೆನ್ನು ಹೊಸಮನಿ, ಹಮಾಲರ ಸಂಘದ ಅಧ್ಯಕ್ಷ ಹನುಮಂತಪ್ಪ ಪೂಜಾರಿ, ಶಿವು ಉಜಾರಾತಿ, ಸಿದ್ದು ಕೆಳಗಿನಮನಿ, ಚೆನ್ನಮ್ಮ ಅರಗನವರ್, ಲಕ್ಷ್ಮಿ ನ್ಯಾವನೂರ, ರೇಖಾ ಅಂಬಿಗೇರ ಇದ್ದರು.
ಗೋಪೂಜೆ: ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ಸಮರ್ಥ ರಾಮದಾಸರು ಪ್ರತಿಷ್ಠಾಪಿಸಿದ ಮಾರುತಿ ದೇವರಿಗೆ ದೀಪಾವಳಿ ಪಾಡ್ಯದ ಅಂಗವಾಗಿ ವಿಶೇಷ ಕುಂಕುಮಾರ್ಚನೆ ನೆರವೇರಿಸಲಾಯಿತು. ಅರ್ಚಕ ಹನುಮಂತ ಮ. ದೇಶಕುಲಕರ್ಣಿ ಅವರು ಗೋಪೂಜೆ ಮಾಡಿದರು.
ಸಗಣಿ ಪಾಂಡವರಿಗೆ ಪೂಜೆ: ಧಾರವಾಡ ನಗರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಬಲಿಪಾಡ್ಯದಂದು ಸಗಣಿಯಿಂದ ತಯಾರಿಸಿದ ಪಾಂಡವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮನೆಯ ಅಂಗಳ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಸಗಣಿಯಿಂದ ಪಾಂಡವರನ್ನು ತಯಾರಿಸಲಾಯಿತು. ಹೂವುಗಳಿಂದ ಅಲಂಕರಿಸಿ, ಸುತ್ತಲೂ ಜೋಳದ ದಂಟು, ಕಬ್ಬು ಇಟ್ಟು ಪೂಜೆ ಸಲ್ಲಿಸಲಾಯಿತು. ಪಾಂಡವರ ಪ್ರತಿಷ್ಠಾಪನೆ ಸ್ಥಳದಲ್ಲಿ ಕುಂಬಳಕಾಯಿ ಇಟ್ಟು ಪೂಜೆ ಮಾಡುವುದು ವಾಡಿಕೆ.
ನೂತನ ಮಹಾವೀರ ಶಕೆ ಆರಂಭ
‘ಜೈನ ಪರಂಪರೆಯಲ್ಲಿ 24ನೇ ತೀರ್ಥಂಕರ ಭಗವಾನ್ ಮಹಾವೀರರ ನಿರ್ವಾಣ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಅವರ ನಿರ್ವಾಣ ಸಮಯದಿಂದ ಜೈನ ಸಮುದಾಯದಲ್ಲಿ ಮಹಾವೀರ ಶಕೆ ಬಳಕೆಯಲ್ಲಿದ್ದು ಈ ದೀಪಾವಳಿಗೆ ಮಹಾವೀರರ ನಿರ್ವಾಣದ 2551 ವರ್ಷಗಳು ಪೂರ್ಣಗೊಂಡಿವೆ’ ಎಂದು ದಿಗಂಬರ ಜೈನ ಸಮಾಜದ ಆಡಳಿತ ಮಂಡಳಿ ಸದಸ್ಯ ಶಾಂತಿನಾಥ ಕೆ. ಹೋತಪೇಟಿ ತಿಳಿಸಿದ್ದಾರೆ. ‘ಪಾಡ್ಯದಿಂದ ನೂತನ ಮಹಾವೀರ ಶಕೆ 2552 ಆರಂಭಗೊಳ್ಳುತ್ತದೆ. ಜೈನರ ಎಲ್ಲ ಮಂಗಲ ಕಾರ್ಯಗಳಲ್ಲಿ ಮಹಾವೀರ ಶಾಖೆಯನ್ನು ಬಳಸಲಾಗುತ್ತದೆ. ಮಹಾವೀರ ಶಕೆಯು ಪ್ರಾಚೀನ ಶಕೆ ಆಗಿದೆ. ಜೈನ ಧರ್ಮ ತತ್ವಗಳನ್ನು ಎಲ್ಲೆಡೆ ಪ್ರಸಾರ ಮಾಡಿದ ಮಹಾವೀರರು ಬಿಹಾರದ ಪಾವಾಪುರಿಯಲ್ಲಿ ನಿರ್ವಾಣ ಪಡೆದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.