ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ‘ನಗರದ ದುರ್ಗದ ಬೈಲ್ ಸುತ್ತಮುತ್ತ ಬೀದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಕುರಿತು ಆಯುಕ್ತರ ಜೊತೆ ಚರ್ಚಿಸಲಾಗುವುದು. ಅಲ್ಲಿಯವರೆಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಟೆಂಡರ್ ಪಡೆದವರು ಶುಲ್ಕ ವಸೂಲಿ ಮಾಡಬಾರದು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
‘ಟೆಂಡರ್ ಪಡೆದವರು ಬೀದಿ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಸಿ, ಪಾಲಿಕೆ ಆಯುಕ್ತರಿಗೆ ಹಾಗೂ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿ ಬೀದಿ ಬದಿ ವ್ಯಾಪಾರಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ನೀಡಿರುವ ಟೆಂಡರ್ ರದ್ದಾಗಬೇಕು ಎಂದು ಆಗ್ರಹಿಸಿ ಪಟ್ಟು ಹಿಡಿದಿದ್ದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ್,ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ದುರ್ಗದಬೈಲ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನಿಡಿ ವ್ಯಾಪಾರಸ್ಥರ ಅಳಲು ಆಲಿಸಿದರು.
‘ಒಂದು ವಾರದಲ್ಲಿ ಪೊಲೀಸ್ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಆಯುಕ್ತರ ಜತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಮಸ್ಯೆ ಇತ್ಯರ್ಥ ಆಗುವವರೆಗೂ ಹಣ ವಸೂಲಿ ಮಾಡಬಾರದು’ ಎಂದು ಮೇಯರ್ ಸೂಚಿಸಿದರು.
ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ವಿನಾಯಕ ಲದ್ವಾ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.