ADVERTISEMENT

ಹೈಕೋರ್ಟ್‌ನಲ್ಲಿ ಅರ್ಜಿ ತಿರಸ್ಕೃತ; ಹೋರಾಟಕ್ಕೆ ಸಿಕ್ಕ ಜಯ: ಶಾಸಕ ಬೆಲ್ಲದ

ಈದ್ಗಾ'ದಲ್ಲಿ ಗಣೇಶೋತ್ಸವ: ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು; ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 8:24 IST
Last Updated 15 ಸೆಪ್ಟೆಂಬರ್ 2023, 8:24 IST
   

ಹುಬ್ಬಳ್ಳಿ: 'ನಗರದ ರಾಣಿ ಚನ್ನಮ್ಮ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬಾರದು ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಧಾರವಾಡ ಹೈಕೋರ್ಟ್'ನಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿದ್ದು, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ' ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಪಾಲಿಕೆ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಂಜುಮನ್ ಸಂಸ್ಥೆ ಸಲ್ಲಿಸಿದ ಅರ್ಜಿ ಕಳೆದ ವರ್ಷದಂತೆ ಈ ವರ್ಷವೂ ಕೋರ್ಟ್'ಲ್ಲಿ ತಿರಸ್ಕೃತಗೊಂಡಿದ್ದು, ಪಾಲಿಕೆ ಆಸ್ತಿ ಎಂದು ಘೋಷಿಸಿದೆ. ಪಾಲಿಕೆಗೆ ಸಂಪೂರ್ಣ ಅಧಿಕಾರ ನೀಡಿದ್ದು, ಆಯುಕ್ತರು ಕೂಡಲೇ ಅನುಮತಿ ನೀಡಬೇಕು' ಎಂದು ಆಗ್ರಹಿಸಿದರು.

ಅರ್ಜಿ ತಿರಸ್ಕಾರಗೊಂಡ ವಿಷಯ ಬೆಲ್ಲದ್ ಅವರು ಹೇಳುತ್ತಿದ್ದಂತೆ, ಬಿಜೆಪಿ ಹಾಗೂ ಹಿಂದೂ‌ ಸಂಘಟನೆ ಕಾರ್ಯಕರ್ತರ ಸಂಭ್ರಮ‌ ಮುಗಿಲುಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣೇಶಮೂರ್ತಿ ಹೊತ್ತು ಘೋಷಣೆ ಕೂಗಿದರು.

ADVERTISEMENT

ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, 'ಕೋರ್ಟ್'ಲ್ಲಿ ಅರ್ಜಿ ತಿರಸ್ಕಾರವಾಗಿದ್ದು ಹಿಂದೂ‌ ಸಂಸ್ಕೃತಿಗೆ ದೊರೆತ ಜಯ. ಮುಂದಿನ ಸಾವಿರ ವರ್ಷವೂ ನಾವು ರಾಣಿಚನ್ನಮ್ಮ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಅದನ್ನು ನಿಲ್ಲಿಸುವ ತಾಕತ್ತು ಯಾರಿಗೆ ಇದೆ ನೋಡೋಣ' ಎಂದರು.

'ವಿರೋಧಿಸುವುದಕ್ಕೂ ರೀತಿ, ನೀತಿಗಳಿವೆ. ಇಂದಿನ ಕೋರ್ಟ್ ನಿರ್ಧಾರ, ವಿರೋಧಿಗಳ ಕಪಾಳಕ್ಕೆ ಹೊಡೆದಂತಿದೆ. ಇನ್ನುಮುಂದೆ ಅವರ ಆಟ ನಡೆಯಲ್ಲ. ಮತ್ತೆ ವಿರೋಧಿಸಿದರೆ, ನಮ್ಮ ಪ್ರತಿಭಟನೆಯೇ ಬೇರೆಯದ್ದೇ ಸ್ವರೂಪ ಪಡೆಯುತ್ತದೆ' ಎಂದು ಎಚ್ಚರಿಸಿದರು.

ಶಾಸಕ‌ ಮಹೇಶ ಟೆಂಗಿನಕಾಯಿ ಮಾತನಾಡಿ, 'ಅಂಜುಮನ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿ‌ ಕೋರ್ಟ್ ತಿರಸ್ಕರಿಸಿದ್ದು, ಸತ್ಯಕ್ಕೆ ದೊರೆತ ಜಯ. ಈ ಕುರಿತು ಅಂಜುಮನ್ ಸಂಸ್ಥೆ ಪದೇಪದೇ ಅಡ್ಡಗಾಲು ಹಾಕುವುದು ಸರಿಯಲ್ಲ. ಇದೀಗ ಪಾಲಿಕೆ ಆಯುಕ್ತರು ವಿಳಂಬ ಮಾಡದೆ ಅನುಮತಿ ನೀಡಬೇಕು. ಅವರು ಅನುಮತಿ ನೀಡುವವರೆಗೂ ನಮ್ಮ‌ ಪ್ರತಿಭಟನೆ ಮುಂದುವರಿಯಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.