ADVERTISEMENT

ನವಲೂರು ಸೇತುವೆ ಬಳಿ ಚಿರತೆ ಓಡಾಟ: ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:55 IST
Last Updated 19 ಜನವರಿ 2026, 6:55 IST
   

ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ಗಾಮನಗಟ್ಟಿ ರಸ್ತೆ ಹಾಗೂ ವಿಮಾನ ನಿಲ್ದಾಣದ ಕಾಂಪೌಂಡ್‌ ಬಳಿ ಚಿರತೆ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಇದೀಗ ನವಲೂರು ಸೇತುವೆ ಮೇಲೆ ಚಿರತೆ ಕುಳಿತಿದೆ ಎನ್ನಲಾದ ವಿಡಿಯೊ ಹಂಚಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

‘ಎಚ್‌ಡಿ 24*7 ನ್ಯೂಸ್‌ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ 23 ಸೆಕೆಂಡ್‌ನ ರೀಲ್ಸ್‌ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ–ಧಾರವಾಡ ಹತ್ತಿರ ಚಿರತೆ ಕಂಡು ಬಂದಿದೆ. ಸತ್ತೂರು ಡೆಂಟಲ್‌ ಆಸ್ಪತ್ರೆ ಸುತ್ತಮುತ್ತಲಿನ (ಸತ್ತೂರು, ವನಶ್ರೀನಗರ, ಉದಯಗಿರಿ, ಎಸ್‌ಡಿಎಂ, ತಡಸಿನಕೊಪ್ಪ) ಕಾಣಿಸಿಕೊಂಡಿದ್ದು, ಸಾರ್ವಜನಿಕರೇ ಎಚ್ಚರ... ಎಚ್ಚರ....’ ಎಂದು ಶೀರ್ಷಿಕೆ ಬರೆಯಲಾಗಿದೆ.

ನವಲೂರು ಸೇತುವೆ ಮೇಲೆ ಚಿರತೆ ಕುಳಿತ ದೃಶ್ಯವನ್ನು, ಕಾರಿನಲ್ಲಿ ಹೋಗುತ್ತಿರುವವರು ಫೋಟೊಗ್ರಫಿ ಮಾಡಿರುವ ಹಾಗೆ ಬಿಂಬಿಸಲಾಗಿದೆ. ಈ ವಿಡಿಯೋ ಈಗಾಗಲೇ 63 ಸಾವಿರ ಮಂದಿ ನೋಡಿದ್ದು, ಸ್ಥಳೀಯರು ಸೇರಿ ಆ ಭಾಗದಲ್ಲಿ ಓಡಾಡುವ ಹಾಗೂ ಬೈಕ್‌ ಮೇಲೆ ಸಂಚರಿಸುವವರು ಭಯಭೀತರಾಗಿದ್ದಾರೆ. ‘ಇಷ್ಟು ದಿನ ಗಾಮನಗಟ್ಟಿ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು, ಇದೀಗ ಹುಬ್ಬಳ್ಳಿ–ಧಾರವಾಡ ಮಧ್ಯದ ರಸ್ತೆಗೆ ಬಂದಿದೆ’ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

‘ಗಾಮನಗಟ್ಟಿಯಲ್ಲಿ ಜಾನುವಾರು ಮೇಲೆ ಚಿರತೆ ದಾಳಿ ಮಾಡಿದೆ ಎಂದು ರೈತರೊಬ್ಬರು ತಿಳಿಸಿದ್ದು, ಪರಿಶೀಲನೆ ನಡೆಸಿದ್ದೇವೆ. ಕೋಡು ತುಂಡಾಗಿ ರಕ್ತ ಸೋರಿಕೆಯಾಗಿದ್ದು ಕಂಡು ಬಂದಿದೆಯೇ ಹೊರತು, ಮೈಮೇಲೆ ಎಲ್ಲಿಯೂ ದಾಳಿ ನಡೆದ ಗುರುತು ಕಂಡಿಲ್ಲ. ಆ ಭಾಗದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಸಹ ಪತ್ತೆಯಾಗಿಲ್ಲ. ಕ್ಯಾಮೆರಾ ಅಳವಡಿಸಿ ಚಿರತೆಯ ಚಲನ–ವಲನ ಗಮನಿಸಲಾಗುತ್ತಿದೆ. ಚಿರತೆ ಸೆರೆಗೆ ಹೆಚ್ಚುವರಿ ಬೋನ್‌ ಅಳವಡಿಸುವ ಕಾರ್ಯ ನಡೆದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.