ಹುಬ್ಬಳ್ಳಿ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಕೆಲವು ಕಾಮಗಾರಿಗೆ ಕಾಲಮಿತಿ ವಿಧಿಸಲಾಗಿತ್ತು. ಗುತ್ತಿಗೆ ಪಡೆದ ಕಂಪನಿ ಅದನ್ನು ಪೂರ್ಣಗೊಳಿಸಲು ವಿಫಲವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಭಾನುವಾರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಮಗಾರಿ ವಿಳಂಬ ಕುರಿತು ಆ.25ರಂದು ನಡೆಯಲಿರುವ ಜನಪ್ರತಿನಿಧಿಗಳ ಹಾಗೂ ವಿವಿಧ ಇಲಾಖೆಗಳ ಸಭೆಯಲ್ಲಿ ಚರ್ಚಿಸಲಾಗುವುದು. ಬಂದ್ ಮಾಡಿರುವ ರಸ್ತೆ ಮುಕ್ತಗೊಳಿಸುವ ಹಾಗೂ ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಕಾರ್ಯಾಚರಣೆಗೊಳಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದೇ ವೇಳೆ ಗುತ್ತಿಗೆ ಪಡೆದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು’ ಎಂದರು.
‘ಕಾಮಗಾರಿಗೆ ಕಾರ್ಮಿಕರ ಕೊರತೆ ಎದುರಾಗುತ್ತಿದ್ದು, ಎರಡು– ಮೂರು ದಿನ ಕೆಲಸ ಮಾಡಿ ಬಿಟ್ಟುಹೋಗುತ್ತಿದ್ದಾರೆ. ಕಾಮಗಾರಿ ವಿಳಂಬ ಕುರಿತು ಉಪ ಗುತ್ತಿಗೆದಾರರಿಗೆ ಒತ್ತಡ ಹಾಕಿದರೆ ಅವರು ಸಹ ಬಿಟ್ಟುಹೋಗುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿಪಡಿಸಿದ ಕಾಮಗಾರಿಯ ಪೈಕಿ ಶೇ 80ರಷ್ಟು ಅಪಾಯಕಾರಿ ಕಾಮಗಾರಿ ಮುಕ್ತಾಯವಾಗಿದೆ’ ಎಂದು ತಿಳಿಸಿದರು.
‘ಚನ್ನಮ್ಮ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗಿನ ರಸ್ತೆಯ ಮೇಲ್ಸೇತುವೆಗೆ ಐದು ಗರ್ಡರ್ ಹಾಗೂ ಬಸವ ವನ ಬಳಿ ಆರು ಗರ್ಡರ್ ಅಳವಡಿಕೆ ಬಾಕಿಯಿದೆ. ನಾಲ್ಕು ಪೋರ್ಟಲ್ ಕ್ಯಾಪ್ ಕಾಮಗಾರಿಯಲ್ಲಿ ಎರಡು ಮುಕ್ತಾಯವಾಗಿದೆ. ಇವುಗಳು ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳ ಕಾಲಾವಕಾಶ ಬೇಕಾಗಬಹುದು. ರಸ್ತೆ, ಗಟಾರ ಕಾಮಗಾರಿ ಸಹ ನಡೆಯಬೇಕಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಂದ್ ಮಾಡಿದ ರಸ್ತೆಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸುವ ಕುರಿತು ಚರ್ಚಿಸಲಾಗುವುದು’ ಎಂದರು.
ಬಂದ್ ಮಾಡಿರುವ ಬಸ್ ನಿಲ್ದಾಣದ ರಸ್ತೆ ಮುಕ್ತಗೊಳಿಸಬೇಕು ಎಂದು ಗಣೇಶ ಮಹಾಮಂಡಳ ಮನವಿ ಮಾಡಿದೆ. ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದು ಪರಿಶೀಲಿಸಲಾಗುವುದುಮಹೇಶ ಟೆಂಗಿನಕಾಯಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.