ADVERTISEMENT

ಮೇಲ್ಸೇತುವೆ: ಸರ್ಕಾರಿ ಇಲಾಖೆಯೇ ಅಡ್ಡಿ

ಉಪನಗರ ಠಾಣೆ ಸ್ಥಳಾಂತರ ವಿಳಂಬ; ಪರಿಹಾರ ದೊರೆತ ನಂತರ ತೆರವು: ಕಮಿಷನರ್‌

ಜಿ.ಎನ್.ನಾಗರಾಜ್
Published 21 ನವೆಂಬರ್ 2025, 7:39 IST
Last Updated 21 ನವೆಂಬರ್ 2025, 7:39 IST
ಹುಬ್ಬಳ್ಳಿಯ ಚನ್ನಮ್ಮ ವೃತ್ತ ಹಾಗೂ ಕಾಮತ್‌ ಹೋಟೆಲ್‌ ಎದುರು ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಫಿಲ್ಲರ್‌ ಕಾಮಗಾರಿ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಚನ್ನಮ್ಮ ವೃತ್ತ ಹಾಗೂ ಕಾಮತ್‌ ಹೋಟೆಲ್‌ ಎದುರು ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಫಿಲ್ಲರ್‌ ಕಾಮಗಾರಿ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ಅಗತ್ಯ ಭೂಸ್ವಾದೀನ ಪ್ರಕ್ರಿಯೆಗೆ ಸರ್ಕಾರದ ಜಾಗಗಳೇ ತೊಡಕಾಗಿ‌ದೆ. ಸ್ವಾದೀನವಾಗುವ ಕಟ್ಟಡ ಮತ್ತು ಭೂಮಿಗೆ ಪರಿಹಾರಧನ ಸಿಕ್ಕ ಬಳಿಕವಷ್ಟೇ ಉಪನಗರ ಠಾಣೆ ಕಟ್ಟಡ ತೆರವು ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

2021ರ ಜೂನ್‌ನಲ್ಲೇ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಆಗಬೇಕಿತ್ತು. ಕೋವಿಡ್‌, ಕಾರ್ಮಿಕರ ಕೊರತೆ, ಮಳೆಗಾಲ ಮತ್ತು ಇನ್ನಿತರ ಕಾರಣಗಳಿಂದ ವಿಳಂಬವಾಗಿತ್ತು. 2024ರ ಜೂನ್‌ನಲ್ಲಿ ಮುಕ್ತಾಯ ಮಾಡುವುದಾಗಿ ಹೇಳಿದ್ದ ಕಂಪನಿ, 2025ರ ಡಿಸೆಂಬರ್‌ವರೆಗೆ ಕಾಲಾವಕಾಶ ಪಡೆದಿತ್ತು. ಇದೀಗ 2026ರ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ. ಆದರೆ, ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ನಡೆಯಬೇಕಿದ್ದ ಭೂಸ್ವಾದೀನ ಪ್ರಕ್ರಿಯೆಯೇ ಇನ್ನೂ ತಾರ್ಕಿಕ ಹಂತಕ್ಕೆ ತಲುಪಿಲ್ಲ. ಹೀಗಾಗಿ  ನಾಲ್ಕನೇ ಬಾರಿಯ ಹೆಚ್ಚುವರಿ ಕಾಲಾವಕಾಶದ ಒಳಗೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ.

ಕಾಮಗಾರಿಗೆ ಸ್ವಾಧೀನಕ್ಕೊಳಗಾಗುವ ಉಪನಗರ ಠಾಣೆ ಕಟ್ಟಡದಲ್ಲಿರುವ ಕಚೇರಿಗಳನ್ನು ಜೂನ್ 30ರ ಒಳಗೆ ಸ್ಥಳಾಂತರಿಸಬೇಕು ಎಂದು ಪೊಲೀಸ್ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಪತ್ರ ಬರೆದು ಸೂಚಿಸಿತ್ತು. ಸ್ಥಳಾಂತರಕ್ಕೆ ಪರ್ಯಾಯ ಸ್ಥಳದ ಹುಡುಕಾಟ ನಡೆಸಿ ಕಟ್ಟಡವನ್ನೂ ಅಂತಿಮಗೊಳಿಸಲಾಗಿತ್ತು. ಗಣೇಶ ಚೌತಿ, ಮೊಹರಂ ಭದ್ರತೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಕಾಲಾವಕಾಶ ಕೇಳಿತ್ತು. ಇದೀಗ, ಕಟ್ಟಡದ ಹಾಗೂ ಜಾಗದ ಪರಿಹಾರ ದೊರೆತ ನಂತರ ಸ್ಥಳಾಂತರ ಮಾಡುವುದಾಗಿ ತೀರ್ಮಾನಿಸಿದೆ.

ADVERTISEMENT

‘ಉಪನಗರ ಠಾಣೆಯಲ್ಲಿನ ಕಚೇರಿ ಸ್ಥಳಾಂತರಕ್ಕೆ ಈಗಾಗಲೇ ಪತ್ರವ್ಯವಹಾರ ನಡೆದಿದೆ. ಪೊಲೀಸ್‌ ಇಲಾಖೆಗೆ ನೀಡಬೇಕಾದ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗಿದ್ದರಿಂದ, ಸ್ಥಳಾಂತರ ವಿಳಂಬವಾಗಿದೆ. ಭೂಸ್ವಾದೀನವಾಗಲಿರುವ ಖಾಸಗಿ ಆಸ್ತಿಗಳಿಗೆ ನೀಡಬೇಕಾದಷ್ಟು ಪರಿಹಾರ ನಮ್ಮಲ್ಲಿದೆ. ಆದರೆ, ಠಾಣೆ, ಮಹಾನಗರ ಪಾಲಿಕೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗೆ ನೀಡಬೇಕಾದ ಪರಿಹಾರ ಧನ ನಮ್ಮಲ್ಲಿ ಇಲ್ಲ. ಈ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಸತೀಶ ನಾಗನೂರ ಹೇಳಿದರು.

ಸರ್ಕಾರದ್ದೇ ಕಾಮಗಾರಿ ಆಗಿರುವುದರಿಂದ ಪರಿಹಾರ ತುಸು ವಿಳಂಬವಾದರೂ ಬರುತ್ತದೆ. ಒಂದು ವಾರದಲ್ಲಿ ಕಚೇರಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗುವುದು.
–ದಿವ್ಯಪ್ರಭು, ಜಿಲ್ಲಾಧಿಕಾರಿ
ಕಾಮಗಾರಿ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಕಚೇರಿಗಳನ್ನು ತೆರವು ಮಾಡುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದರು. ಆದರೆ ಪರಿಹಾರ ಧನ ಸಿಕ್ಕ ಬಳಿಕ ಮಾಡುವುದಾಗಿ ಹೇಳುತ್ತಿದ್ದಾರೆ. ಪರಿಶೀಲಿಸುವೆ.
– ಮಹೇಶ ಟೆಂಗಿನಕಾಯಿ, ಶಾಸಕ
ಮೇಲ್ಸೇತುವೆ ಕಾಮಗಾರಿಗೆ ಉಪನಗರ ಠಾಣೆ ಕಟ್ಟಡ ಭಾಗಶಃ ತೆರವಾಗಲಿದೆ. ಸ್ವಾದೀನ ಪ್ರಕ್ರಿಯೆಯಲ್ಲಿ ಜಾಗ ಮತ್ತು ಕಟ್ಟಡಕ್ಕೆ ₹5.32 ಕೋಟಿ ಪರಿಹಾರ ಅಂದಾಜಿಸಲಾಗಿದೆ. ಅದು ಸಿಕ್ಕ ತಕ್ಷಣ ಠಾಣೆ ಕಚೇರಿ ಸ್ಥಳಾಂತರಿಸುತ್ತೇವೆ.
– ಎನ್. ಶಶಿಕುಮಾರ್, ನಗರ ಪೊಲೀಸ್ ಕಮಿಷನರ್

‘ಸರ್ಕಾರಿ ಆಸ್ತಿಗೆ ₹65.78 ಕೋಟಿ ಪರಿಹಾರ’

‘ಸಿದ್ದಪ್ಪ ಕಂಬಳಿ ಹಾಗೂ ಲ್ಯಾಮಿಂಗ್ಟನ್‌ ರಸ್ತೆಯ ಪಕ್ಕದಲ್ಲಿನ ಪೊಲೀಸ್‌ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಒಡೆತನದಲ್ಲಿರುವ ಸುಮಾರು 15 ಗುಂಟೆ ಜಾಗ ಮೇಲ್ಸೇತುವೆ ಕಾಮಗಾರಿಗೆ ಸ್ವಾದೀನವಾಗಲಿದೆ. ಉಪನಗರ ಪೊಲೀಸ್‌ ಠಾಣೆ ಕಟ್ಟಡ ಮಿನಿ ವಿಧಾನಸೌಧ ಮಹಾನಗರ ಪಾಲಿಕೆ ಸರ್ಕಾರಿ ಕೇಂದ್ರ ಗ್ರಂಥಾಲಯ ಮತ್ತು ಲ್ಯಾಮಿಂಗ್ಟನ್‌ ಶಾಲೆಯ ಕಾಂಪೌಂಡ್‌ ತೆರವಾಗಲಿದ್ದು ಇವುಗಳಿಗೆ ಒಟ್ಟು ₹65.78 ಲಕ್ಷ ಪರಿಹಾರ ನೀಡಬೇಕಿದೆ’ ಎಂದು ಎಂಜಿನಿಯರ್‌ ಸತೀಶ ನಾಗನೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.