
ಹುಬ್ಬಳ್ಳಿ: ನಗರದ ಹೃದಯಭಾಗದಲ್ಲಿ ನಡೆದಿರುವ ₹349.49 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿಯ ಯೋಜನೆಯ ವೆಚ್ಚದ ವರದಿಯಲ್ಲಿ ಸ್ವಾದೀನ ಆಗಲಿರುವ ಸರ್ಕಾರಿ ಜಾಗಗಳಿಗೆ ಪರಿಹಾರ ನೀಡುವ ಕುರಿತು ಮಾಹಿತಿ ಇರಲಿಲ್ಲ. ಹೀಗಾಗಿ, ಈಗ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯು ಕೇಂದ್ರ ಸಾರಿಗೆ ಇಲಾಖೆಗೆ ₹57 ಕೋಟಿ ನೀಡುವಂತೆ ವಿಸ್ತ್ರತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, ಸಲ್ಲಿಸಿದೆ.
ಈ ಪ್ರಸ್ತಾವದಲ್ಲಿ ಕಾಮಗಾರಿ ನಡೆಯುತ್ತಿರುವ 3.9 ಕಿ.ಮೀ. ಉದ್ದದ ಕಾಂಕ್ರಿಟ್ ರಸ್ತೆಗೆ ಬೇಕಾಗುವ ₹18 ಕೋಟಿ ಸೇರಿಸಲಾಗಿದ್ದು, ಒಟ್ಟು ₹75 ಕೋಟಿಗೆ ಬೇಡಿಕೆ ಇಟ್ಟಿದೆ. ಬೆಂಗಳೂರಿನಲ್ಲಿ ಇರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಿಂದ ಕೇಂದ್ರ ಸಾರಿಗೆ ಇಲಾಖೆಗೆ ಪ್ರಸ್ತಾವ ರವಾನೆಯಾಗಿದ್ದು, ಒಂದು ವಾರದಲ್ಲಿ ಒಪ್ಪಿಗೆ ಸಿಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಜಾಗಗಳನ್ನು ಸ್ವಾದೀನಪಡಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸರ್. ಸಿದ್ದಪ್ಪ ಕಂಬಳಿ ಹಾಗೂ ಲ್ಯಾಮಿಂಗ್ಟನ್ ರಸ್ತೆಯ ಅಕ್ಕಪಕ್ಕದಲ್ಲಿರುವ ಸರ್ಕಾರಿ, ಖಾಸಗಿ ಜಾಗಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಉಪನಗರ ಠಾಣೆ ಜಾಗ ಹಾಗೂ ಕಟ್ಟಡಕ್ಕೆ ₹5.32 ಕೋಟಿ ಪರಿಹಾರ ನೀಡಿಲ್ಲವೆಂದು, ಅಲ್ಲಿರುವ ಕಚೇರಿ ಹಾಗೂ ಠಾಣೆಗಳ ಸ್ಥಳಾಂತರಕ್ಕೆ ಇಲಾಖೆ ಮೂರು–ನಾಲ್ಕು ತಿಂಗಳು ವಿಳಂಬ ಮಾಡಿತ್ತು. ಇದೇ ರಸ್ತೆಯಲ್ಲಿ ಮಹಾನಗರ ಪಾಲಿಕೆ, ಕಂದಾಯ ಇಲಾಖೆಯ ಜಾಗಗಳೂ ಸ್ವಾದೀನವಾಗಲಿವೆ. ಅಕ್ಕಪಕ್ಕದಲ್ಲಿ 50ಕ್ಕೂ ಹೆಚ್ಚು ಖಾಸಗಿ ಆಸ್ತಿಗಳಿವೆ. ಪರಿಹಾರ ಹಣ ವಿತರಣೆಯಲ್ಲಿ ವಿಳಂಬದಿಂದ ಕಾಮಗಾರಿಯೂ ವಿಳಂಬವಾಗುತ್ತಿದೆ.
‘ಚನ್ನಮ್ಮ ವೃತ್ತದಿಂದ ಲ್ಯಾಮಿಂಗ್ಟನ್ ರಸ್ತೆಯ ಅಶೋಕಾ ಟಾವರ್ ಹೋಟೆಲ್‌ವರೆಗಿನ 370 ಮೀಟರ್ ರಸ್ತೆಯನ್ನು ಮೇಲ್ಸೇತುವೆ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಭಾಗದ ಕೊನೆಯ ಪಿಲ್ಲರ್ ರಾಯಣ್ಣ ವೃತ್ತದ ಬಳಿ ನಿರ್ಮಿಸಿ, ಒಂದು ತಿಂಗಳು ಸಮೀಪಿಸುತ್ತಿದೆ. ಟೈಟಾನ್ ಐ ಷೋ ರೂಂವರೆಗೆ ರ‍್ಯಾಂಪ್ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಪಾಲಿಕೆ ಎದುರಿನ ಬಿಆರ್‌ಟಿಎಸ್ ಬಸ್ ನಿಲ್ದಾಣ ಸಹ ತೆರವು ಆಗಬೇಕಿದೆ. ಒಂದು ತಿಂಗಳಿನಿಂದ ಉಪನಗರ ಪೊಲೀಸ್ ಠಾಣೆ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಶೇ 10ರಷ್ಟು ಸಹ ಪೂರ್ಣಗೊಂಡಿಲ್ಲ. ಕೆಲ ದಿನಗಳಿಂದ ಸ್ಥಗಿತಗೊಂಡಿದೆ’ ಎಂದು ಉದ್ಯಮಿ ಸಿ.ಎನ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
‘ಸರ್. ಸಿದ್ದಪ್ಪ ಕಂಬಳಿ ರಸ್ತೆಯ ಅಕ್ಕಪಕ್ಕದಲ್ಲಿರುವ ಖಾಸಗಿ ಆಸ್ತಿಗಳನ್ನು ಸ್ವಾದೀನಪಡಿಸಿಕೊಳ್ಳುತ್ತಿದ್ದು, ಪರಿಹಾರ ವಿತರಣೆ ನಡೆಯುತ್ತಿದೆ. ಯೋಜನೆಯ ಮೂಲ ವರದಿಯಲ್ಲಿ ಸರ್ಕಾರಿ ಆಸ್ತಿಗಳಿಗೆ ಪರಿಹಾರ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣದ ಕುರಿತು ಉಲ್ಲೇಖವಿಲ್ಲದ ಕಾರಣ ನೂತನ ಪ್ರಸ್ತಾವ ಸಲ್ಲಿಸಲಾಗಿದೆ. ಖಾಸಗಿ ಆಸ್ತಿಗಳಿಗೆ ಪರಿಹಾರ ನೀಡಲು ನಮ್ಮ ಬಳಿ ₹73 ಕೋಟಿಯಿದೆ’ ಎಂದು ‘ಪ್ರಜಾವಾಣಿ’ಗೆ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸತೀಶ ನಾಗನೂರು ತಿಳಿಸಿದರು.
ಗುತ್ತಿಗೆ ಪಡೆದ ಕಂಪನಿಗೆ 2026ರ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು –ಸತೀಶ ನಾಗನೂರು ಎಂಜಿನಿಯರ್ ಎನ್‌ಎಚ್ ಪಿಡಬ್ಲ್ಯೂಡಿ
ಚಿಗರಿ ಬಸ್ ನಿಲ್ದಾಣ ಪುನರ್ ನಿರ್ಮಾಣ
ಮೇಲ್ಸೇತುವೆ ಕಾಮಗಾರಿಗಾಗಿ ಹಳೇ ಬಸ್ ನಿಲ್ದಾಣದ ಎದುರು ತೆರವು ಮಾಡಲಾಗಿದ್ದ ಬಿಆರ್‌ಟಿಎಸ್ ಬಸ್ ನಿಲ್ದಾಣ ಶೀಘ್ರ ಪುನರ್ ನಿರ್ಮಾಣವಾಗಲಿದೆ. ‘ಬಿಆರ್‌ಟಿಎಸ್ ಅಧಿಕಾರಿಗಳು ನಿಲ್ದಾಣದ ವಿನ್ಯಾಸ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ್ದು ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಾಮಗಾರಿ ಆರಂಭಿಸಲಾಗುವುದು. ಹೊಸೂರು ವೃತ್ತದ ಬಳಿಯ ಹಾಗೂ ಪಾಲಿಕೆ ಎದುರಿನ ನಿಲ್ದಾಣವನ್ನು ತೆರವು ಮಾಡಿ ಮೇಲ್ಸೇತುವೆ ಕಾಮಗಾರಿಗೆ ಅನುಕೂಲ ಮಾಡಿಕೊಡಲಾಗುವುದು. ಉಪನಗರ ಪೊಲೀಸ್ ಠಾಣೆ ಕಟ್ಟಡ ತೆರವು ಕಾರ್ಯ ಗುತ್ತಿಗೆ ಪಡೆದವರು ವಿಳಂಬ ಮಾಡಿದ್ದರಿಂದ ಬೇರೆಯವರಿಗೆ ಗುತ್ತಿಗೆ ನಿಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸತೀಶ ನಾಗನೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.