ADVERTISEMENT

ಹುಬ್ಬಳ್ಳಿ| ಪ್ರೀತಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ; ಇಬ್ಬರಿಗೆ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:06 IST
Last Updated 12 ನವೆಂಬರ್ 2025, 5:06 IST
   

ಹುಬ್ಬಳ್ಳಿ: ಪ್ರೀತಿ–ಪ್ರೇಮದ ವಿಚಾರದ ಕುರಿತು ಸ್ನೇಹಿತರ ಮಧ್ಯೆ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ, ಜಗಳ ಬಿಡಿಸಲು ಬಂದವರು ಚಾಕು ಇರಿತಕ್ಕೊಳಗಾದ ಪ್ರಕರಣ ಸೋಮವಾರ ತಡರಾತ್ರಿ ವಿದ್ಯಾನಗರದ ಶೆಟ್ಟರ್‌ ಕಾಲೊನಿಯಲ್ಲಿ ನಡೆದಿದೆ.

ದೇಶಪಾಂಡೆನಗರದ ಅಭಿಷೇಕ, ಮಾರುತಿ ಮತ್ತು ವರುಣ ಗಾಯಗೊಂಡಿದ್ದು, ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿಗಳಾದ ಮನೋಜ, ಮಣಿಕಂಠ, ಸುಬ್ರಹ್ಮಣ್ಯ, ಅನುಕ, ಪ್ರಜ್ವಲ್‌, ಶಂಕರ, ಅಭಯ ವಿರುದ್ಧ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಏನಿದು ಪ್ರಕರಣ?: ದೇಶಪಾಂಡೆ ನಗರದ ಪವನ ಮತ್ತು ಮಣಿಕಂಠ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ಶೆಟ್ಟರ್‌ ಕಾಲೊನಿಯಲ್ಲಿ ನಡೆಯಲಿರುವ ತನ್ನ ಜನ್ಮದಿನಾಚರಣೆಗೆ ಬರುವಂತೆ ಮಣಿಕಂಠನು, ಪವನನಿಗೆ ಆಹ್ವಾನ ನೀಡಿದ್ದ. ಅಲ್ಲಿ ಯುವತಿ ವಿಷಯ ಚರ್ಚೆಯಾದಾಗ, ಪರಸ್ಪರ ಜಗಳವಾಡಿಕೊಂಡು ಅವಾಚ್ಯವಾಗಿ ನಿಂದಿಸಿಕೊಂಡಿದ್ದಾರೆ. ಆಗ ಮನೋಜ ಮತ್ತು ಮಣಿಕಂಠ ಇಬ್ಬರು ಸೇರಿ ಅಭಿಷೇಕ ಮತ್ತು ಮಾರುತಿ ಅವರಿಗೆ ಬಲಭುಜಕ್ಕೆ ಹಾಗೂ ಸೊಂಟಕ್ಕೆ ಚಾಕು ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸರ ಕಿತ್ತು ಪರಾರಿ: ನಗರದ ಹೊಸೂರು ಬಸ್‌ ನಿಲ್ದಾಣದಿಂದ ಗಾಮನಗಟ್ಟಿಗೆ ತೆರಳಲು ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರದ ಅರ್ಪಿತಾ ಬೆಟಗೇರಿ ಅವರ ಕೊರಳಲ್ಲಿದ್ದ, ₹50 ಸಾವಿರ ಮೌಲ್ಯದ ಬಂಗಾರದ ಸರ ಕಿತ್ತು ಪರಾರಿಯಾಗಿದ್ದಾರೆ. ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಕೊಠಡಿಗೆ ಬೀಗ: ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯ ಕೊಠಡಿಗಳಿಗೆ ಬೀಗ ಹಾಕಿ, ಮಕ್ಕಳು ಹಾಗೂ ಶಿಕ್ಷಕರು ಎರಡು ತಾಸು ಹೊರಗೆ ಇರುವಂತೆ ಮಾಡಿದ ಗ್ರಾಮದ ಇಬ್ಬರು ವ್ಯಕ್ತಿಗಳ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗಯ್ಯ ಹಿರೇಮಠ ಮತ್ತು ಶಿವಪ್ಪ ಹರಿಜನ ವಿರುದ್ಧ ಶಾಲಾಭಿವೃದ್ಧಿ ಸಮಿತಿ ಸದಸ್ಯ ಮರಿಯಪ್ಪ ಹರಿಜನ ದೂರು ನೀಡಿದ್ದಾರೆ.

‘ಶಾಲೆಯಲ್ಲಿ 1 ರಿಂದ 9ನೇ ತರಗತಿವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಒಂಬತ್ತು ಮಂದಿ ಶಿಕ್ಷಕರು ಇದ್ದಾರೆ. ನ. 5ರ ರಾತ್ರಿ 11ರಿಂದ ನ. 6ರ ಮಧ್ಯಾಹ್ನ 12ರವರೆಗೆ ಗ್ರಾಮದ ಇಬ್ಬರು ಶಾಲೆಯ ಒಂಬತ್ತು ಕೊಠಡಿಗೆ ಬೀಗ ಹಾಕಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊರಗೆ ಇರುವಂತೆ ಮಾಡಿದ್ದರು. ಯಾವ ಕಾರಣಕ್ಕೆ ಹಾಗೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ದೂರು ನೀಡಿದ್ದೇನೆ’ ಎಂದು ಎಸ್‌ಡಿಎಂಸಿ ಸದಸ್ಯ, ದೂರುದಾರ ಮರಿಯಪ್ಪ ತಿಳಿಸಿದ್ದಾರೆ.

‘ಕೊಠಡಿಯ ಹಳೆಯ ಬೀಗಗಳನ್ನು ತೆಗೆದು, ಬೇರೆ ಬೇಗಗಳನ್ನು ಹಾಕಿರುವ ಕುರಿತು ದೂರು ನೀಡಿದ್ದಾರೆ. ಬೀಗ ಹಾಕಿದ್ದರೋ, ಇಲ್ಲವೋ ಸ್ಪಷ್ಟವಿಲ್ಲ. ತನಿಖೆ ಮುಂದುವರಿದಿದೆ’ ಎಂದು ಇನ್‌ಸ್ಪೆಕ್ಟರ್‌ ಮುರುಗೇಶ ಚನ್ನಣ್ಣವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.