ಹುಬ್ಬಳ್ಳಿ: ಸಾಂಪ್ರದಾಯಿಕ– ಹೊಸ ಭಕ್ಷ್ಯಗಳ ಸಮ್ಮೇಳನ... ಭೋಜನಪ್ರಿಯರಿಗೆ ತರಹೇವಾರಿ ಖಾದ್ಯಗಳ ರಸದೌತಣ... ಬಗೆ ಬಗೆಯ ರುಚಿ ಸವಿದು ತಣಿದ ತನು– ಮನ...
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಕರುನಾಡ ಸವಿಯೂಟ’ ಸ್ಪರ್ಧೆಯ 4ನೇ ಆವೃತ್ತಿಯು ನಳಪಾಕದ ನಿಜ ಲೋಕವನ್ನೇ ಅನಾವರಣಗೊಳಿಸಿತು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡಿನ ಅಸ್ಮಿತೆಯ ಆಹಾರಗಳು ಮೇಳೈಸಿತ್ತು.
ಸ್ಪರ್ಧೆ ಜೊತೆಗೆ ತಮ್ಮ ಕೈರುಚಿಯನ್ನು ಇತರರಿಗೂ ಉಣಬಡಿಸಬೇಕೆಂಬ ಉತ್ಸಾಹದಿಂದ ಸ್ಪರ್ಧಾಳುಗಳು ವಿವಿಧ ಬಗೆಯ ಭಕ್ಷ್ಯಗಳೊಂದಿಗೆ ಪಾಲ್ಗೊಂಡಿದ್ದರು. ತಮ್ಮ ಭಾಗದ ಸಾಂಪ್ರದಾಯಿಕ ಶೈಲಿಯ ಆಹಾರ, ತಾವೇ ಕಂಡುಕೊಂಡ ಹೊಸ ರುಚಿಯ ತಿನಿಸು, ಕೇಳಿ– ನೋಡಿ ಕಲಿತ ಹೊಸ ಪಾಕಗಳನ್ನು ಪ್ರಸ್ತುತಪಡಿಸಿದ ಶೈಲಿಯನ್ನು ತೀರ್ಪುಗಾರರು ಹಾಗೂ ಭೋಜನಪ್ರಿಯರು ಕಂಡು, ಸವಿದು, ಸೈ ಎಂದಾಗ ಸ್ಪರ್ಧಾಳುಗಳಲ್ಲಿ ಕಂಡಿದ್ದು ಧನ್ಯತಾ ಭಾವ.
ಘಮಿಸುತ್ತಿದ್ದ ಆಹಾರಕ್ಕೆ ಅಲಂಕಾರವಾಗಿ ಗಣೇಶ ಮೂರ್ತಿ, ದೀಪ, ಹಳ್ಳಿ ಸನ್ನಿವೇಶ, ಹಕ್ಕಿ ಗೂಡು, ಕಲಾಕೃತಿಯಾಗಿ ರೂಪ ತಳೆದಿದ್ದ ತರಕಾರಿ, ಹಣ್ಣು, ಸೊಪ್ಪು ವಿಶೇಷ ಆಕರ್ಷಣೆಯಾಗಿದ್ದವು. ತಾವು ಸಿದ್ಧಪಡಿಸಿದ ಖಾದ್ಯಗಳನ್ನು ಆಹಾರಪ್ರಿಯರಿಗೆ ಆತ್ಮೀಯವಾಗಿ ನೀಡಿ, ‘ರುಚಿ ಹೇಗಿದೆ’ ಎಂದು ಕೇಳಿ, ಅದನ್ನು ತಯಾರಿಸುವ ವಿಧಾನ, ಬಳಸಿದ ಪದಾರ್ಥಗಳು, ಅದರ ವೈಶಿಷ್ಟ್ಯವನ್ನು ವಿವರಿಸಿದ ಸ್ಪರ್ಧಾಳುಗಳ ‘ಪಾಕ ಪ್ರಾವೀಣ್ಯ’ ಮೆಚ್ಚುವಂತಿತ್ತು. ಪೌಷ್ಟಿಕ ಆಹಾರದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟನ್ನೂ ತಿಳಿಸಿದರು.
ತೀರ್ಪುಗಾರರಾಗಿದ್ದ ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ ಹಾಗೂ ಸುಚಿತ್ರಾ ಅವರು ಪ್ರತಿ ಖಾದ್ಯವನ್ನು ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.
70 ವರ್ಷ ಮೇಲ್ಪಟ್ಟ ನಾಲ್ವರು ಹಾಗೂ ಒಬ್ಬ ಪುರುಷ ಸ್ಪರ್ಧಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಖಾದ್ಯ ವೈವಿಧ್ಯ: ಪುಠಾಣಿ ಹೋಳಿಗೆ, ಸಕ್ಕರೆ ಹೋಳಿಗೆ, ಸಜ್ಜಕದ ಹೋಳಿಗೆ, ಬಿಳಿ ಹೋಳಿಗೆ, ಕಡ್ಲೆಬೇಳೆ ಹೋಳಿಗೆ, ರವಾ ಹೋಳಿಗೆ, ಗೆಣಸಿನ ಹೋಳಿಗೆ, ಅವಲಕ್ಕಿ ಪಾಯಸ, ಜೋಳದ ವಡೆ, ಸಿರಿಧಾನ್ಯ ವಡೆ, ಕೆಸುವಿನ ವಡೆ, ಜೋಳದಹಿಟ್ಟಿನ ಕಡುಬು, ಮೆಂತ್ಯ ಕಡುಬು, ಅರಿಸಿನಎಲೆ ಸಿಹಿಕಡುಬು, ಗುಳ್ಳಡಿಕೆ ಉಂಡೆ, ಕೊಬ್ಬರಿ ಗಿಣ್ಣು, ಚಕೋಲಿ, ಸಪ್ಪನ ಬೇಲೆ, ರೊಟ್ಟಿ ಸಂಡಿಗೆ, ಕೆಂಡದಲ್ಲಿ ಸುಟ್ಟ ರೊಟ್ಟಿ, ಸಿಂಧಿ ಶೈಲಿಯ ಕೊತ್ತಂಬರಿ– ಶುಂಠಿ ಆಲೂ ಮಸಾಲ, ಕುಂಬಳ ಗಾರ್ಗಿ, ಸಜ್ಜೆ ತಾಳಿಪಟ್ಟು, ಪಾನ್ ಕರ್ಜಿಕಾಯಿ, ಜೋಳದ ಉಪ್ಪಿಟ್ಟು, ವರ್ಷಗಟ್ಟಲೆ ಉಳಿಯುವ ಹುಂಚಿಕಾಯಿ ಚಟ್ನಿ, ಮೆಂತ್ಯ ಸೊಪ್ಪಿನ ಕಟ್ಲೆಟ್, ಸಬ್ಬಸಿಗೆ ಇಡ್ಲಿ, ಜವೆಗೋಧಿ ಹುಗ್ಗಿ, ಸಾಮೆ ಅಕ್ಕಿ ಇಡ್ಲಿ, ಕರ್ಬೂಜ ಸೀಕರಣೆ, ಗೋಕಾಕ ಕರದಂಟು, ತೆಂಗಿನಕಾಯಿ ಅನ್ನ, ರಾಗಿಯಿಂದ ಮಾಡಿದ ಚಕ್ಕುಲಿ, ಶಾವಿಗೆ, ಮಿಕ್ಸ್ಚರ್, ವೀಳ್ಯದೆಲೆಯಿಂದ ತಯಾರಿಸಿದ ಚಟ್ನಿಪುಡಿ, ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ, ಅಡಿಕೆ ಪುಡಿ, ಬಜ್ಜಿ, ಕಷಾಯ ಹೊಸ ರುಚಿ ನೀಡಿದವು.
ಸಾವಜಿ ಶಾಹಿ ಥಾಲಿ ಮಟನ್ ಚಟ್ನಿ, ಕೈಮಾ, ಮಟನ್ ಕರಡು, ಅಂಗಾರ ಲೆಮನ್ ಚಿಕನ್, ಕೈಮ ಎಡಮಿ, ಎಳ್ಳು ಚಿಕನ್, ಬಿರ್ಯಾನಿ, ಹರಾಭರಾ ಚಿಕನ್ ಕಬಾಬ್ ಸೇರಿದಂತೆ ಸಾವಜಿ ಶೈಲಿಯ ಥಾಲಿಯು ಮಾಂಸಾಹಾರಪ್ರಿಯರ ರುಚಿಮೊಗ್ಗುಗಳನ್ನು ತಣಿಸಿದವು.
ಸುಚಿತ್ರಾ– ಮುರಳಿ ಅವರು ಮಾಸ್ಟರ್ ಕ್ಲಾಸ್‌ನಲ್ಲಿ ಬಟರ್ ಗಾರ್ಲಿಕ್ ಪನೀರ್ ತಯಾರಿಸುವುದನ್ನು ಕಲಿಸಿದರು.
ಸಹಭಾಗಿತ್ವ: ಇಂಡೇನ್ (ಎಲ್‌ಪಿಜಿ ಪಾರ್ಟನರ್), ಟಿಟಿಕೆ ಪ್ರೆಸ್ಟಿಜ್ (ಕಿಚನ್ ಪಾರ್ಟನರ್), ಭೀಮಾ ಜೂವೆಲರ್ಸ್ (ಸ್ಪೆಷಲ್ ಪಾರ್ಟನರ್), ಲೇಸ್ (ಸ್ನ್ಯಾಕ್ಸ್ ಪಾರ್ಟನರ್), ಎಸ್‌ಬಿಐ ಕಾರ್ಡ್, ವೆನ್‌ಕಾಬ್ ಚಿಕನ್, ಎಕೊ ಕ್ರಿಸ್ಟಲ್ ವಾಟರ್, ಸಾಯಿರಾಮ ಡೆವಲಪರ್ ಮತ್ತು ಬಿಲ್ಡರ್ಸ್ (ಸಹ ಪ್ರಾಯೋಜಕರು).
ಐವರಿಗೆ ಸಮಾಧಾನಕರ ಬಹುಮಾನ ಎಲ್ಲ 96 ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಣೆ ಗದಗ, ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಿಗಳು
ರೂಪಾ ಶ್ರೀಹರಿ ಪ್ರಥಮ ರಾಗಿ ಬಳಸಿ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿದ್ದ ಇಲ್ಲಿನ ಸಾಯಿನಗರದ ನಿವಾಸಿ ರೂಪಾ ಶ್ರೀಹರಿ ಅವರು ಪ್ರಥಮ ಸ್ಥಾನದೊಂದಿಗೆ ₹10 ಸಾವಿರ ನಗದು ಬಹುಮಾನ ಪಡೆದರು. ಚಿಕನ್ ಕೈಮಾ ಹೋಳಿಗೆ ತಯಾರಿಸಿದ್ದ ಅಂಜನಾ ಕಠಾರೆ ದ್ವಿತೀಯ ಸ್ಥಾನ (₹5 ಸಾವಿರ) ಮತ್ತು ಮಟನ್ ಖಾದ್ಯ ಮತ್ತು ಚಟ್ನಿ ಸಿದ್ಧಪಡಿಸಿದ್ದ ರತ್ನಾ ಪೂಜಾರಿ ತೃತೀಯ ಸ್ಥಾನ (₹3 ಸಾವಿರ) ಪಡೆದರು. ನಾನ್‌ವೆಜ್ ಥಾಲಿ ತಯಾರಿಸಿದ್ದ ವಿದ್ಯಾ ಕಠಾರೆ ಹಾಗೂ ‘ಹಕ್ಕಿಗೂಡು’ ವಿಶೇಷ ಖಾದ್ಯ ಸಿದ್ಧಪಡಿಸಿದ್ದ ವಿಜಯಲಕ್ಷ್ಮಿ ಭೂಸೂನೂರಮಠ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ಶಿಲ್ಪಾ ಕಲಬುರ್ಗಿ ನೇತ್ರಾವತಿ ಕಿತ್ತೂರು ಲಕ್ಷ್ಮಿ ಸೋನಿಯಾ ಬೇವಿಕಟ್ಟಿ ಅವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಫ್ರೀಡಂ ಕುಕಿಂಗ್ ಆಯಿಲ್ ಪ್ರತಿನಿಧಿ ಕಲ್ಪೇಶ ಅವರು ಮೂವರಿಗೆ ವಿಶೇಷ ಬಹುಮಾನ ವಿತರಿಸಿದರು.
ಸಿಲಿಂಡರ್ ಬಳಕೆ ಪ್ರಾತ್ಯಕ್ಷಿಕೆ ಅಡುಗೆ ಅನಿಲದ ಸಿಲಿಂಡರ್ ಬಳಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಇಂಡೇನ್ ಗ್ಯಾಸ್ ಏಜೆನ್ಸಿಯ ಪ್ರತಿನಿಧಿಗಳು ತಿಳಿಸಿಕೊಟ್ಟರು. ‘ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಅಡುಗೆ ಅನಿಲ ಸೋರಕೆಯಾಗಿ ನಾಲ್ಕು ಅವಘಡಗಳು ನಡೆದಿವೆ. ಇಂಥ ಪ್ರಕರಣಗಳು ಆಗಾಗ ಮರುಕಳಿಸುತ್ತಿದ್ದು ಗ್ರಾಹಕರಲ್ಲಿರುವ ಅರಿವಿನ ಕೊರತೆಯೇ ಇದಕ್ಕೆ ಕಾರಣ’ ಎಂದು ಇಂಡೇನ್ ಗ್ಯಾಸ್ ಏಜೆನ್ಸಿಯ ಸಂಜೀವ್ ಹೇಳಿದರು. ಮತ್ತೊಬ್ಬ ಪ್ರತಿನಿಧಿ ಶಿವಕುಮಾರ ಬೊಮ್ಮಾಯಿ ‘ಐದು ವರ್ಷಕ್ಕೊಮ್ಮೆ ಒಲೆ ಸರ್ವಿಸ್ ಮಾಡಿಸಿ ಆಗಾಗ ರಬ್ಬರ್ ಪೈಪ್ ಬದಲಿಸಬೇಕು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರೆಗ್ಯುಲೇಟರ್ ಬಂದ್ ಮಾಡಬೇಕು. ಸಿಲಿಂಡರ್‌ಗಿಂತ ಮೇಲೆಯೇ ಸ್ಟೋವ್ ಇಟ್ಟು ಬಳಸಬೇಕು. ಗ್ಯಾಸ್ ಸೋರಿಕೆಯಾದಾಗ ಗಾಬರಿಯಾಗದೆ ಕಿಟಕಿ– ಬಾಗಿಲು ತೆರೆಯಬೇಕು. ವಿದ್ಯುತ್ ದೀಪಗಳ ಸ್ವಿಚ್ ಬಳಸಬಾರದು. ತುರ್ತು ಸಂದರ್ಭದಲ್ಲಿ ಬಳಸಲೆಂದು ಕೆಲವು ಸುರಕ್ಷತಾ ಸಾಧನಗಳನ್ನು ಪರಿಚಯಿಸಲಾಗಿದ್ದು ಅವುಗಳನ್ನು ಬಳಸಬೇಕು’ ಎಂದರು.
‘ಆಸೆ ಹುಟ್ಟಿಸುವಂತಿರಲಿ ಆಹಾರ’ ‘ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿ ತರಹೇವಾರಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದ್ದರು. ಅಡುಗೆಯ ರುಚಿ ಚೆನ್ನಾಗಿದೆ ಎನ್ನುವುದಕ್ಕಿಂತ ನೋಡಿದಾಗ ತಿನ್ನಬೇಕು ಎನ್ನುವ ಆಸೆ ಹುಟ್ಟಬೇಕು’ ಎಂದು ಮುರಳಿ– ಸುಚಿತ್ರಾ ಜೋಡಿ ಅಭಿಪ್ರಾಯಪಟ್ಟರು. ‘ಎಷ್ಟು ಪ್ರಮಾಣದಲ್ಲಿ ಎಷ್ಟು ಬಗೆಯಲ್ಲಿ ಆಹಾರ ಪದಾರ್ಥ ಸಿದ್ಧಪಡಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಬೇಗ ಎಷ್ಟು ಕಡಿಮೆ ಪದಾರ್ಥ ಬಳಸಿ ರುಚಿಯಾಗಿ ತಯಾರಿಸಿದ್ದಾರೆ ಎನ್ನುವಂಥ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ನಗದು ಬಹುಮಾನಕ್ಕೆ ಮೂವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬ ಸ್ಪರ್ಧಾಳು ತಯಾರಿಸಿದ ಅಡುಗೆಯೂ ರುಚಿಯಾಗಿತ್ತು. ಆಯ್ಕೆ ಮಾಡಲು ತುಸು ಕಷ್ಟಪಡಬೇಕಾಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.