ADVERTISEMENT

ಹುಬ್ಬಳ್ಳಿ | ಗಣಪನ ವಿಸರ್ಜನೆ: 17 ತಾಸು ಮೆರವಣಿಗೆ, ಕಿಕ್ಕಿರಿದ ಜನತೆ

ಶನಿವಾರ ಮಧ್ಯಾಹ್ನ ಹೊರಟ ಗಣಪನ ವಿಸರ್ಜನೆ ಆಗಿದ್ದು ಭಾನುವಾರ ಬೆಳಿಗ್ಗೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:00 IST
Last Updated 8 ಸೆಪ್ಟೆಂಬರ್ 2025, 3:00 IST
ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ಭಾನುವಾರ ಬೆಳಿಗ್ಗೆ ವಿಸರ್ಜನೆಯಾದ ಮರಾಠಗಲ್ಲಿಯ ಸಾರ್ವಜನಿಕ ಗಣೇಶಮೂರ್ತಿ
ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ಭಾನುವಾರ ಬೆಳಿಗ್ಗೆ ವಿಸರ್ಜನೆಯಾದ ಮರಾಠಗಲ್ಲಿಯ ಸಾರ್ವಜನಿಕ ಗಣೇಶಮೂರ್ತಿ   

ಹುಬ್ಬಳ್ಳಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ 11ನೇ ದಿನದ ಸಾರ್ವಜನಿಕ ಗಣೇಶಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಶನಿವಾರ ಮಧ್ಯಾಹ್ನದಿಂದ ಭಾನುವಾರ ಬೆಳಿಗ್ಗೆವರೆಗೆ ಪ್ರಮುಖ ಬೀದಿಗಳಲ್ಲಿ 17 ತಾಸಿಗೂ ಹೆಚ್ಚು ಅದ್ದೂರಿಯಾಗಿ ನಡೆಯಿತು.

ಮರಾಠಗಲ್ಲಿಯ 25 ಅಡಿ ಎತ್ತರದ ‘ಹುಬ್ಬಳ್ಳಿ ಚಾ ಮಹಾರಾಜ’ ಗಣೇಶಮೂರ್ತಿ ಹೊಸೂರು ಬಾವಿಯಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ವಿಸರ್ಜನೆಯಾಯಿತು. ಮೆರವಣಿಗೆ ಉದ್ದಕ್ಕೂ ಜನರು ಕಿಕ್ಕಿರಿದು ತುಂಬಿ, ಗಣೇಶನ ದರ್ಶನ ಪಡೆದರು. ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಗಣೇಶಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. 

ಪೆಂಡಾಲ್‌ನಲ್ಲಿ ಸಂಜೆ 6 ಗಂಟೆಗೆ ಗಣೇಶಮೂರ್ತಿಗೆ ವಿಶೇಷಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ರಾತ್ರಿ 10 ಗಂಟೆವರೆಗೂ ಶಿವಾಜಿ ವೃತ್ತದ ಬಳಿಯೇ ಇದ್ದ ಮೆರವಣಿಗೆ ನಿಧಾನವಾಗಿ ಸಾಗಿತ್ತು. ಡಿಜೆ ಬಂದ್‌ ಆದ ಬಳಿಕ, ಮಹಾರಾಷ್ಟ್ರದಿಂದ ಬಂದ ನಾಸಿಕ್ ಡೋಲು ವಾದ್ಯಮೇಳದ ತಂಡ ಬೆಳಕು ಹರಿಯುವವರೆಗೂ ಸಾರ್ವಜನಿಕರನ್ನು ರಂಜಿಸಿತ್ತು.

ADVERTISEMENT

ಮಧ್ಯರಾತ್ರಿ 3 ಗಂಟೆ ವೇಳೆಗೆ ತುಳಜಾ ಭವಾನಿ ವೃತ್ತದ ಬಳಿ ಬಂದ ಮೆರವಣಿಗೆ, ಅಲ್ಲಿಯೇ ಒಂದು ತಾಸು ನಿಂತಿತ್ತು. ಸಾಂಪ್ರದಾಯಿಕ ಕಲಾವಿದರ ವಾದ್ಯ ಮೇಳಗಳು, ಅವರ ನೃತ್ಯಭಂಗಿ ನೋಡುಗರನ್ನು ಆಕರ್ಷಿಸಿತ್ತು. ಕುಣಿದು ಕುಪ್ಪಳಿಸುತ್ತಿದ್ದ ಯುವಜನರು, ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನ ನೋಡಲು ಜಮಾಯಿಸಿದ್ದರು. ನಿಧಾನವಾಗಿ ಸಾಗಿದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ನೀಲಿಜಿನ್‌ ರಸ್ತೆ ಮಾರ್ಗವಾಗಿ ಮರುದಿನ (ಭಾನುವಾರ) ಬೆಳಿಗ್ಗೆ ಹೊಸೂರು ಬಾವಿಗೆ ಬಂದು ತಲುಪಿತ್ತು. ಬೃಹದಾಕಾರದ ಮೂರ್ತಿಯನ್ನು ಕ್ರೇನ್‌ ಬಳಸಿ ವಿಸರ್ಜಿಸಲಾಯಿತು.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಹಾಕಲಾಗಿದ್ದ ಕೆಲವು ಪೆಂಡಾಲ್‌ಗಳನ್ನು ತೆರವು ಮಾಡಲಾಗಿದೆ. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಪ್ರಸಾದ ಸೇವಿಸಿ ಬಿಸಾಡಿದ ಪ್ಲೇಟ್‌ಗಳು, ನೀರಿನ ಲೋಟಗಳು, ಸಿಡಿಮದ್ದುಗಳ ಅವಶೇಷಗಳು ಹಾಗೂ ಚಪ್ಪಲಿಗಳ ರಾಶಿ ಬಿದ್ದಿವೆ.

ಕರಗದ ಪಿಒಪಿ ಮೂರ್ತಿಗಳು ಹು– ಧಾ ಮಹಾನಗರ ಪಾಲಿಕೆ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಸ್ತುತ ವರ್ಷವೂ ಪಿಒಪಿ ಗಣೇಶಮೂರ್ತಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ವಿಫಲವಾಗಿದೆ. ನಗರದ ಇಂದಿರಾ ಗಾಜಿನ ಮನೆ ಹಿಂಭಾಗದ ಮತ್ತು ಹೊಸೂರು ಬಾವಿಯಲ್ಲಿ ವಿಸರ್ಜಿಸಲಾದ ಗಣೇಶಮೂರ್ತಿಗಳು ನೀರಿನಲ್ಲಿ ಕರಗಿಲ್ಲ. ಪ್ರಸ್ತುತ ವರ್ಷ ಮನೆಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳೆಲ್ಲ ಬಹುತೇಕ ಮಣ್ಣಿನದಾಗಿದ್ದು ಅವುಗಳೆಲ್ಲ ಕರಗಿದ್ದು ಐದು ಏಳು ಒಂಬತ್ತನೇ ದಿನ ವಿಸರ್ಜಿಸಿದ ಮೂರ್ತಿಗಳು ಯಥಾಸ್ಥಿತಿಯಲ್ಲಿಯೇ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.