ADVERTISEMENT

ಹುಬ್ಬಳ್ಳಿ: ನಿತ್ಯ ಜನಜೀವನ ಬಾಧಿಸಿದ ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:28 IST
Last Updated 20 ಆಗಸ್ಟ್ 2025, 5:28 IST
ಮಳೆಯಿಂದಾಗಿ ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ ರಸ್ತೆಯಲ್ಲಿ ಗುಂಡಿಗಳು ನಿರ್ಮಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ
ಮಳೆಯಿಂದಾಗಿ ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ ರಸ್ತೆಯಲ್ಲಿ ಗುಂಡಿಗಳು ನಿರ್ಮಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ   

ಹುಬ್ಬಳ್ಳಿ: ನಗರದ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಳೆ ಮುಂದುವರಿದಿದ್ದು, ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮುಖ್ಯವಾಗಿ ದಿನಗೂಲಿಗಳಿಗೆ ಯಾವುದೇ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೃಷಿ ಕಾರ್ಯ, ಕಟ್ಟಡ ನಿರ್ಮಾಣ ಕಾರ್ಯ, ಬಣ್ಣ ಬಳಿಯುವುದು, ಗಾರೆ ಕೆಲಸ.. ಹೀಗೆ ಅನೇಕ ರೀತಿಯ ಕೆಲಸಗಳು ಬಹುತೇಕ ಸ್ಥಗಿತಗೊಂಡಿವೆ. 

ಬೀದಿ ವ್ಯಾಪಾರಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಹೊರಗಡೆ ಬರುತ್ತಿಲ್ಲ. ಪ್ರತಿದಿನ ಸಂಜೆ ಕುಟುಂಬ ಸಮೇತ ಕುರುಕಲು ತಿನ್ನಲು ಮನೆಗಳಿಂದ ಹೊರಬರುತ್ತಿದ್ದ ರೂಢಿಗೆ ಮಳೆ ಅಡ್ಡಿಯಾಗಿದೆ.

ADVERTISEMENT

ನಿರಂತರ ಮಳೆ ಕಾರಣ ಹುಬ್ಬಳ್ಳಿಯ ಬಹುತೇಕ ರಸ್ತೆಗಳಲ್ಲಿ ಕೊಳೆ ಆವರಿಸಿಕೊಂಡಿದೆ. ಕೊಳೆ ಕಿತ್ತುಕೊಂಡು ಹೋಗುವ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತಿಲ್ಲ. ಮಳೆಯಿಂದಾಗಿ ತ್ಯಾಜ್ಯ ವಿಲೇವಾರಿ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. 

ನಗರದ ಗೋಕುಲ ಮಾರ್ಗದ ಗೋಕುಲ ಕೈಗಾರಿಕಾ ವಲಯದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಮಳೆಯಿಂದಾಗಿ ತ್ಯಾಜ್ಯವು ರಸ್ತೆ ಮೇಲೆ ಆವರಿಸಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. 

ಕಾಮಗಾರಿ ಅಪೂರ್ಣ: ಅಕ್ಷಯ ಕಾಲೊನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಅಪೂರ್ಣವಾಗಿವೆ. ಮನೆ ಬಾಗಿಲಿಗೆ ಹೊಂದಿಕೊಂಡಂತೆ ಚರಂಡಿ ನಿರ್ಮಿಸಲು, ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಹೀಗಾಗಿ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗಿವೆ. 

ಉರುಳಿದ ಮರಗಳು: ಹುಬ್ಬಳ್ಳಿಯ ಭಾಗ್ಯಲಕ್ಷ್ಮಿ ನಗರದ 2ನೇ ಕ್ರಾಸ್‌, ಧಾರವಾಡದ ಲಕ್ಷ್ಮೀನಗರ ಹಾಗೂ ಹುಬ್ಬಳ್ಳಿಯ ಗೋಕುಲ ರಸ್ತೆಯ ಮಂಜುನಾಥ ನಗರ ಸೇರಿ ಮೂರು ಮರಗಳು ಸೋಮವಾರ ತಡರಾತ್ರಿ ಉರುಳಿವೆ. 

ನಿರಂತರ ಮಳೆ 96 ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಶೇ 519ರಷ್ಟು ಹೆಚ್ಚು ಮಳೆಯಾಗಿದೆ. ಕಲಘಟಗಿ ಧಾರವಾಡ ನವಲಗುಂದ ಅಣ್ಣಿಗೇರಿ ಮತ್ತು ಕುಂದಗೋಳ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾದ ವರದಿಯಾಗಿದೆ. ಆಗಸ್ಟ್‌

1 ರಿಂದ 18 ರವರೆಗೆ ಶೇ‌ 67 ರಷ್ಟು ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.  ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 96 ಮನೆಗಳಿಗೆ ಹಾನಿಯಾಗಿವೆ. ಯಾವುದೇ ಜೀವಹಾನಿ ಜಾನುವಾರು ಹಾನಿ ಆಗಿಲ್ಲ. ಬೆಳೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಈಗಾಗಲೇ ಹೆಸರು ಬೆಳೆ ಕಟಾವಿಗೆ ಬಂದಿದ್ದು ಸಮಸ್ಯೆಯಾಗಿದೆ. ಮೆಕ್ಕೆಜೋಳ ಸೋಯಾಬಿನ್ ಹಾಗೂ ಹತ್ತಿ ಬೆಳೆಗಳಿಗೆ ಹಾನಿಯಾಗಿಲ್ಲ. ಬೆಳೆ ಹಾನಿ ಉಂಟಾದರೆ ನಿಯಮಾನುಸಾರ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.