ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಗ್ರಾಮಸ್ಥರ ಒತ್ತಾಯ

ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂ ವೀರಾಪುರದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಶಾಂತಿಸಭೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 20:32 IST
Last Updated 28 ಡಿಸೆಂಬರ್ 2025, 20:32 IST
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಶಾಂತಿಸಭೆ ನಡೆಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಸಂತ್ರಸ್ತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಹಾಜರಿದ್ದರು
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಶಾಂತಿಸಭೆ ನಡೆಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಸಂತ್ರಸ್ತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಹಾಜರಿದ್ದರು   

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ನಡೆದ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ  ಜಿಲ್ಲಾಡಳಿತದ ನೇತೃತ್ವದಲ್ಲಿ ಭಾನುವಾರ ಶಾಂತಿಸಭೆ ನಡೆಯಿತು. ಸಮಾಜದ ಮುಖಂಡರಿಗೆ ಕಾನೂನು ಅರಿವು ಮೂಡಿಸಿ, ಸೌಹಾರ್ದದಿಂದ ಬದುಕು ನಡೆಸುವಂತೆ ಸೂಚಿಸಲಾಯಿತು.

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಗುಣಮುಖರಾದ ಗ್ರಾಮದ ದೊಡಮನಿ ಕುಟುಂಬದವರನ್ನು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ಗ್ರಾಮಸ್ಥರು ಬರಮಾಡಿಕೊಂಡರು. ಸಹೋದರತ್ವ ಹಾಗೂ ಪ್ರೀತಿ ವಿಶ್ವಾಸದಿಂದ ಬದುಕುವುದಾಗಿ ಗ್ರಾಮಸ್ಥರು ಭರವಸೆ ನೀಡಿದರು.

‘ಇದು ಆಕಸ್ಮಿಕ ಘಟನೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬ, ಜಂಗಮ, ವೀರಶೈವ ಲಿಂಗಾಯತ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದೇವೆ. ದೊಡಮನಿ ಕುಟುಂಬದವರಿಗೆ ಮುಂದೆಯೂ ಯಾವುದೇ ತಾರತಮ್ಯ ಮಾಡದೆ ಸೌಹಾರ್ದದಿಂದ ಇರುತ್ತೇವೆ. ಇದು  ಅವರವರ ಕುಟುಂಬದ ಸಮಸ್ಯೆಯೇ ಹೊರತು, ಊರಿನದಲ್ಲ. ತಪ್ಪಿತಸ್ಥರಿಗೆ ಕ್ರಮವಾಗಬೇಕು’ ಎಂದು ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರು ಒತ್ತಾಯಿಸಿದರು.

ADVERTISEMENT

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ‘ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸ್‌ ಇಲಾಖೆಯಿಂದ ರಕ್ಷಣೆ ಒದಗಿಸಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದರು.

‘ಗ್ರಾಮದಲ್ಲಿ ಎಲ್ಲ ಸಮಾಜದವರು ಪ್ರೀತಿ, ವಿಶ್ವಾಸದಿಂದ ಸೌಹಾರ್ದದಿಂದ ಬದುಕಬೇಕು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು’ ಎಂದು ಹೇಳಿದರು.

ಕಠಿಣ ಶಿಕ್ಷೆಯಾಗಲಿ: ‘ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಒಂದು ವರ್ಷದೊಳಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ದಲಿತ ಸಂಘಟನೆಗಳ ಮುಖಂಡರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶುಭಾ ಪಿ., ತಹಶೀಲ್ದಾರ್‌ ಜೆ.ಬಿ.ಮಜ್ಜಗಿ, ಡಿವೈಎಸ್‌ಪಿ ವಿನೋದ ಮುಕ್ತೆದಾರ್, ಇಒ ರಾಮಚಂದ್ರ ಹೊಸಮನಿ, ಸಿಪಿಐ ಮುರುಗೇಶ ಚನ್ನಣ್ಣವರ, ಇನ್‌ಸ್ಪೆಕ್ಟರ್‌ ವೀರಭದ್ರಪ್ಪ ಕಡಿ, ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ ಖಾನಾಪುರ, ಪ್ರೇಮನಾಥ ಚಿಕ್ಕತುಂಬಳ, ಪರಮೇಶ ಕಾಳೆ, ಶ್ರೀಧರ ಕಂದಗಲ್ಲ, ಕೆಂಚಪ್ಪ ಮಲ್ಲಮ್ಮನವರ ಹಾಗೂ ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ, ಗುರುಸಿದ್ದಯ್ಯ ಹಿರೇಮಠ, ಲಲೀತಾ ಮಡ್ಲಿ, ಬಸವರಾಜ ಇದ್ದರು.

ಸಲೀಂ ಅಹ್ಮದ್‌ ಭೇಟಿ: ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಭಾನುವಾರ ಬೆಳಿಗ್ಗೆ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ದೊಡಮನಿ ಕುಟುಂಬದವರ ಆರೋಗ್ಯ ವಿಚಾರಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರು, ಅನೀಲಕುಮಾರ್ ಪಾಟೀಲ, ಎಂ.ಡಿ. ಮಕಾಂದರ, ಚಂದ್ರಶೇಖರ ಜುಟ್ಟಲ್, ಷಹಜಾನ್ ಇನಾಯಿತ್‌, ಸುಜಾತಾ ಹುರಕಡ್ಲಿ ಇದ್ದರು.  

ಪಂಜಿನ ಮೆರವಣಿಗೆ: ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಘಟನೆ ಖಂಡಿಸಿ, ದೇಶಪಾಂಡೆನಗರದ ವಿವೇಕಾನಂದ ಆಸ್ಪತ್ರೆಯಿಂದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೆ ಭಾನುವಾರ ಪಂಜಿನ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.  

‘ಬೃಹತ್‌ ಪ್ರತಿಭಟನಾ ಸಮಾವೇಶ’

ಮರ್ಯಾದೆಗೇಡು ಹತ್ಯೆ ಖಂಡಿಸಿ ನಗರದಲ್ಲಿ ಜನವರಿ ಮೊದಲ ವಾರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸುವ ಕುರಿತು ವಿವಿಧ ದಲಿತ ಸಂಘಟನೆಗಳ ಮುಖಂಡರು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಿದರು. ಒಳಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ ನೇತೃತ್ವದಲ್ಲಿ ಸಭೆ ನಡೆಯಿತು. ಜ.5 ರಂದು ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸಲು ತೀರ್ಮಾನ ತೆಗೆದುಕೊಂಡಿರುವುದಾಗಿ ಮುಖಂಡರು ತಿಳಿಸಿದ್ದಾರೆ. ಮುಖಂಡರಾದ ವೀರಭದ್ರಪ್ಪ ಹಾಲಹರವಿ ಆಲ್ಕೋಡ ಹನುಮಂತಪ್ಪ ಮೋಹನ ಹಿರೇಮನಿ ಇದ್ದರು.

ಎಸ್‌ಐಟಿ ರಚನೆ ಅಗತ್ಯವಿಲ್ಲ; ಬೆಲ್ಲದ

‘ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಈ ಕುರಿತು ತನಿಖೆಗೆ ಎಸ್ಐಟಿ ರಚಿಸುವ ಅಗತ್ಯ ಇಲ್ಲ‌. ಇಲ್ಲಿನ ಪೊಲೀಸರೇ ಸರಿಯಾಗಿ ತನಿಖೆ‌ ನಡೆಸಿದರೆ ಸಾಕು’ ವಿಧಾನಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಬೇಕಿತ್ತು. ಜಿಲ್ಲಾಡಳಿತ ತಾಲ್ಲೂಕು ಆಡಳಿತ ತಕ್ಷಣ ಸ್ಪಂದಿಸಬೇಕಿತ್ತು.  ತಡವಾಗಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಗೆ ಹೋಗಿದ್ದಾರೆ. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು’ ಎಂದರು. ‘ಗ್ರಾಮದಲ್ಲಿ‌ ಮನಸ್ಸುಗಳು ಒಡೆದಿವೆ. ಅವುಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕು. ಮರ್ಯಾದೆಗೇಡು ಹತ್ಯೆ ತಡೆಗೆ ಈಗ ಇರುವ ಕಾನೂನುಗಳು ಸಶಕ್ತವಾಗಿದ್ದು ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಸಾಕು. ಪ್ರತ್ಯೇಕ ಕಾನೂನಿನ ಅಗತ್ಯ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.