ADVERTISEMENT

ಕಟ್ಟಡ ಕಾಮಗಾರಿಗೆ 15 ತಿಂಗಳ ಗಡುವು: ಹೆಚ್ಚುವರಿ ತುರ್ತು ಚಿಕಿತ್ಸಾ ಘಟಕ

ಕೆಎಂಸಿ–ಆರ್‌ಐ ಆಸ್ಪತ್ರೆ ನಿರ್ದೇಶಕ ಡಾ.ಈಶ್ವರ ಹೊಸಮನಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:55 IST
Last Updated 19 ಅಕ್ಟೋಬರ್ 2025, 6:55 IST
   

ಹುಬ್ಬಳ್ಳಿ: ‘ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆ ಆವರಣದಲ್ಲಿ ₹16 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಈಶ್ವರ ಹೊಸಮನಿ ತಿಳಿಸಿದರು.

‘ಪ್ರಧಾನಮಂತ್ರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ಪಿಎಂ–ಅಭೀಮ್‌) ಯೋಜನೆಯಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಗರಿಷ್ಠ 15 ತಿಂಗಳ ಕಾಲಾವಕಾಶ ನೀಡಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂರು ಅಂತಸ್ತಿನ ಕಟ್ಟಡವು ಎರಡು ಆಪರೇಷನ್‌ ಥಿಯೇಟರ್‌ ಜೊತೆಗೆ ಎಲ್ಲ ಮೂಲಸೌಕರ್ಯ ಒಳಗೊಂಡಿರಲಿದೆ. ಈಗಾಗಲೇ 350 ಹಾಸಿಗೆಗಳ ಸೌಲಭ್ಯದ ತುರ್ತು ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

ADVERTISEMENT

‘ಪ್ರತಿದಿನ ಆಸ್ಪತ್ರೆಗೆ 2,500ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಾರೆ. ಈಗಿರುವ ಹೊರರೋಗಿ ವಿಭಾಗ (ಒಪಿಡಿ)ದಲ್ಲಿ ಎಂಟು ಕೌಂಟರ್‌ಗಳಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೂಕ್ತ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ತ್ವರಿತ ಚಿಕಿತ್ಸೆಗೆ ₹60 ಲಕ್ಷ ವೆಚ್ಚದಲ್ಲಿ ಏಳು ಕೌಂಟರ್‌ ಇರುವ ಮತ್ತೊಂದು ಒಪಿಡಿ ತೆರೆಯಲಾಗಿದೆ. ಅಲ್ಲಿ ಹೊಸ ಮತ್ತು ಹಳೇರೋಗಿಗಳ ಮತ್ತು ಹಿರಿಯ ನಾಗರಿಕರ ವಿಭಾಗವೆಂದು ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಮಾಹಿತಿಗೆ ಟಿವಿ ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲೇ ಪ್ರಥಮಬಾರಿಗೆ ಸರ್ಕಾರಿ ಸ್ವಾಮ್ಯದ ಐವಿಎಫ್‌ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರ ಆರಂಭವಾಗಲಿದ್ದು, ಯಂತ್ರೋಪಕರಣ ಖರೀದಿಗೆ ಕಲಬುರಗಿಯ ಮಾನವಿಯ ಎನ್​ಜಿಒ ಟ್ರಸ್ಟ್ ₹90 ಲಕ್ಷವನ್ನು ಸಿಎಸ್​ಆರ್ ನಿಧಿಯಿಂದ ನೀಡಿದೆ. ಆಸ್ಪತ್ರೆಯ ಕೆಲವು ವೈದ್ಯರು ತರಬೇತಿ ಪಡೆದುಕೊಂಡು ಬಂದಿದ್ದು, ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಎಷ್ಟು ಮಂದಿ ವೈದ್ಯರು ಬೇಕು, ವೆಚ್ಚ ಎಷ್ಟಾಗುತ್ತದೆ ಎನ್ನುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅನುಮೋದನೆ ದೊರೆತ ನಂತರ ಕೇಂದ್ರ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಖಾಸಗಿ ಐವಿಎಫ್ ಕೇಂದ್ರಗಳಲ್ಲಿ ಒಂದು ಬಾರಿ ಚಿಕಿತ್ಸೆಗೆ ₹1 ಲಕ್ಷದಿಂದ ₹3 ಲಕ್ಷದವರೆಗೂ ಶುಲ್ಕ ಪಡೆಯಲಾಗುತ್ತದೆ. ಕೆಎಂಸಿಇ–ಆರ್‌ಐ ಆಸ್ಪತ್ರೆಯಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮಾಡಬೇಕೇ, ಬಿಪಿಎಲ್‌ ಕಾರ್ಡ್‌ ಇದ್ದವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೇ ಎನ್ನುವ ವಿಷಯ ಚರ್ಚೆ ಹಂತದಲ್ಲಿದೆ. ಔಷಧವನ್ನು ಉಚಿತವಾಗಿ ನೀಡಲು ಅನುಮತಿ ನೀಡಬೇಕೆಂದೂ ವಿನಂತಿಸಲಾಗಿದೆ’ ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ, ಮಕ್ಕಳ ಮತ್ತು ಪ್ರಸೂತಿ ತಜ್ಞೆ ಡಾ.ಹೇಮಲತಾ, ಮಕ್ಕಳ ತಜ್ಞ ಡಾ.ವಿನೋದ ರಟಗೇರಿ, ಹೃದಯ ತಜ್ಞ ಡಾ.ರಾಜಕುಮಾರ ಹಿರೇಮಠ, ಡಾ.ರೂಪಾಲಿ, ಡಾ.ದೀಪಿಕಾ ವಾಲ್ಮಿಕಿ, ಡಾ.ರಾಜಶೇಖರ ದ್ಯಾಬೇರಿ, ಡಾ. ಕೋಮಣ್ಣ, ಡಾ.ಮಂಜಪ್ಪ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.