
ಹುಬ್ಬಳ್ಳಿ: ‘ಅಂತರ್ಜಾಲ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಸಿಗಬಹುದು, ಆದರೆ ಅದೇ ಅಂತಿಮವಲ್ಲ. ಶಿಕ್ಷಕರ ಮೂಲಕ ಹಾಗೂ ಪಠ್ಯಪುಸ್ತಕಗಳ ಮೂಲಕ ಪಡೆಯುವ ಕಲಿಕೆ ಹೆಚ್ಚು ಪರಿಣಾಮಕಾರಿ’ ಎಂದು ಕೆಎಂಸಿಆರ್‌ಐ ನಿರ್ದೇಶಕ ಈಶ್ವರ ಹೊಸಮನಿ ಹೇಳಿದರು.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್‌ಐ) ವಿದ್ಯಾರ್ಥಿಗಳ ಶೈಕ್ಷಣಿಕ ಸಂಘದ ವತಿಯಿಂದ ಗುರುವಾರ ನಡೆದ ‘ಸೆರೆಬ್ರಾಥಾನ್’ ರಾಷ್ಟ್ರಮಟ್ಟದ ಅಂತರ ಕಾಲೇಜು ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಭವಿಷ್ಯದ ವೈದ್ಯಕೀಯ ಕ್ಷೇತ್ರಗಳ ಬಗ್ಗೆ ಅರಿವು ಹೊಂದಲು ಈ ಕಾರ್ಯಕ್ರಮ ಸಹಕಾರಿಯಾಗಬಲ್ಲದು. ನಿಮ್ಮಲ್ಲಿನ ಪ್ರತಿಭೆ, ಕೌಶಲವನ್ನು ಇಲ್ಲಿ ಓರೆಗೆ ಹಚ್ಚಿ. ಹೆಚ್ಚೆಚ್ಚು ಜ್ಞಾನ ಪಡೆಯಿರಿ’ ಎಂದು ಸಲಹೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ, ಅವರು ಕಳುಹಿಸಿದ ಸಂದೇಶವನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ.ವಿಶಾಲ್ ರವಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ ಶುಭ ಹಾರೈಸಿದರು.
ಪ್ರಿನ್ಸಿಪಾಲ್ ಡಾ.ಸೂರ್ಯಕಾಂತ ಕಲ್ಲುರಾಯ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಈಶ್ವರ ಹಸಬಿ, ಡಾ.ರಾಜಶೇಖರ್ ದ್ಯಾಬೇರಿ, ಡಾ. ಕೆ.ಎಫ್.ಕಮ್ಮಾರ್, ಡಾ.ಮಾಧುರಿ ಕುರಡಿ, ಡಾ.ಮಹೇಶ್ ಕುಮಾರ್ ಎಸ್., ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ರಾಜ್ಯಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಷ್ಟ್ರಮಟ್ಟದ ಅಂತರ ಕಾಲೇಜು ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಆಯಾ ವಿಭಾಗಗಳ ಮುಖ್ಯಸ್ಥರು ತಜ್ಞರು ವಿದ್ಯಾರ್ಥಿಗಳ ತಂಡಗಳಿಗೆ ಪ್ರಥಮ ಚಿಕಿತ್ಸೆ ಶಸ್ತ್ರಚಿಕಿತ್ಸೆ ತುರ್ತು ಚಿಕಿತ್ಸೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಅಂಗರಚನಾಶಾಸ್ತ್ರ ರೋಗಶಾಸ್ತ್ರ ವಿಧಿವಿಜ್ಞಾನ ಸೇರಿ ಹಲವು ವಿಭಾಗಗಳಿಂದ ವಿವಿಧ ಮಾದರಿಗಳ ಪ್ರದರ್ಶನ ನಡೆದವು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಚಿತ್ರಕಲೆಗಳ ಪ್ರದರ್ಶನ ಗಮನ ಸೆಳೆದವು. ತಾಯಿ ಮತ್ತು ಮಕ್ಕಳ ಆರೋಗ್ಯ ಎಲುಬು ಮತ್ತು ಕೀಲುಗಳು ಕುರಿತು ವಿಚಾರಗೋಷ್ಠಿಗಳು ನಡೆದವು. ಜ.9ರಂದು ಅಪರೂಪದ ಪ್ರಕರಣಗಳ ಸಂಶೋಧನಾ ಪತ್ರಿಕೆಗಳ ಪ್ರದರ್ಶನ ಸಂವಾದ ವಿಚಾರಗೋಷ್ಠಿಗಳು ನಡೆಯಲಿವೆ. ಜ.10ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಪೇಂಟಿಂಗ್ ಪ್ರಬಂಧ ರಚನೆ ಥೀಂ ಪೇಂಟಿಂಗ್ ಕಿರುನಾಟಕ ಫ್ಯಾಷನ್ ಶೋ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.