ADVERTISEMENT

ಹುಬ್ಬಳ್ಳಿ: ಔಷಧಕ್ಕಾಗಿ ಮಧ್ಯರಾತ್ರಿ ಅಲೆದಾಟ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:31 IST
Last Updated 27 ಅಕ್ಟೋಬರ್ 2025, 4:31 IST
<div class="paragraphs"><p>ಔಷಧ&nbsp;</p></div>

ಔಷಧ 

   

ಹುಬ್ಬಳ್ಳಿ: ಗುಲಗಂಜಿ ಗಿಡದ ಎಲೆ ತಿಂದು ತೀವ್ರ ಅಸ್ವಸ್ಥಗೊಂಡ ಒಂದೂವರೆ ವರ್ಷದ ಮಗುವಿಗೆ ವೈದ್ಯರು ಸೂಚಿಸಿದ್ದ ಔಷಧಿ ತರಲು, ಪಾಲಕರೊಬ್ಬರು ಶನಿವಾರ ಮಧ್ಯರಾತ್ರಿ ಔಷಧದ ಅಂಗಡಿಗೆ ಅಲೆದಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನರಗುಂದದ ಬಾಲಕಿ ತಸ್ಮಿಯಾ, ಮನೆ ಎದುರು ಆಟವಾಡುತ್ತ ಎದುರಿಗೆ ಬೆಳೆದಿದ್ದ ಗುಲಗಂಜಿ ಗಿಡದ ಎಲೆಯನ್ನು ತಿಂದಿದ್ದಾಳೆ. ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಪಾಲಕರು ಸ್ಥಳೀಯ ಆಸ್ಪತ್ರೆಗೆ ತೋರಿಸಿ, ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

ಮಧ್ಯರಾತ್ರಿ 12ರ ಸುಮಾರಿಗೆ ಬಾಲಕಿಯ ದೊಡ್ಡಪ್ಪ ದಾವುಲ್‌ಸಾಬ್‌ ಅವರು ವೈದ್ಯರು ಸೂಚಿಸಿದ್ದರು ಎನ್ನಲಾದ ಇಂಜಕ್ಸನ್‌ ತರಲು ಎಚ್‌ಸಿಜಿ ಸುಚಿರಾಯು, ಶುಶ್ರುತ, ವಿವೇಕಾನಂದ ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ. ಎಲ್ಲಿಯೂ ಔಷಧಿ ಸಿಗದೆ ಮರಳಿ ಆಸ್ಪತ್ರೆಗೆ ಓಡಿಕೊಂಡು ಹೋಗುತ್ತಿರುವ ವಿಡಿಯೊವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

‘ತುರ್ತು ಸಂದರ್ಭದಲ್ಲಿ ನೀಡಬೇಕಾದ ಔಷಧಿಗೆ ರಾತ್ರಿ 12ರಿಂದ ಮಧ್ಯರಾತ್ರಿ 2.30ರವರೆಗೂ ಹುಬ್ಬಳ್ಳಿಯ ಎಲ್ಲ ಆಸ್ಪತ್ರೆ ಹಾಗೂ ಔಷಧಿ ಅಂಗಡಿಗಳಿಗೆ ಅಲೆದಾಡಿದ್ದೇನೆ. ಎಲ್ಲಿಯೂ ಸಿಕ್ಕಿಲ್ಲ. ಸದ್ಯ ಮಗುವಿನ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ’ ಎಂದು ದಾವುಲ್‌ಸಾಬ್‌ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಕೆಎಂಸಿ–ಆರ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ, ‘ಮಗುವಿನ ಚಿಕಿತ್ಸೆಗೆ ನಮ್ಮ ವೈದ್ಯರು ಯಾವ ಔಷಧಿಯನ್ನು ಬರೆದುಕೊಟ್ಟಿಲ್ಲ. ಔಷಧಿಯ ಸ್ಕ್ರೀನ್‌ಶಾಟ್‌ ಇಟ್ಟಕೊಂಡು ಪಾಲಕರು ಔಷಧದ ಅಂಗಡಿಗೆ ಅಲೆದಾಡಿದ್ದಾರೆ. ಮಗು ಚೇತರಿಸಿಕೊಳ್ಳುತ್ತಿದೆ. ರಾತ್ರಿ ವೇಳೆ ಯಾರಿಗೂ ಔಷಧಿ ಬರೆದುಕೊಡದಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.