ADVERTISEMENT

ಹುಬ್ಬಳ್ಳಿ: ವಾರ್ಡ್ ಅಭಿವೃದ್ಧಿಗೆ ದಾನಿಗಳ ನೆರವು

ನೃಪತುಂಗ ಬೆಟ್ಟಕ್ಕೆ ತೆರಳುವ ಮಾರ್ಗದ ಪಕ್ಕದ‌ಲ್ಲಿ 20 ಆಸನಗಳ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:04 IST
Last Updated 9 ಫೆಬ್ರುವರಿ 2026, 7:04 IST
ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ತೆರಳು ಮಾರ್ಗದ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಆಸನಗಳು
ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ತೆರಳು ಮಾರ್ಗದ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಆಸನಗಳು   

ಹುಬ್ಬಳ್ಳಿ: ರಸ್ತೆ, ಉದ್ಯಾನ ಅಭಿವೃದ್ಧಿಗೆ ಸರ್ಕಾರಿ ಅನುದಾನವೇ ಬೇಕು ಎನ್ನುವ ಕಾಲದಲ್ಲಿ ದಾನಿಗಳ ನೆರವಿನಿಂದಾಗಿ ನಗರದ ಸಬ್ ಜೈಲ್‌ನಿಂದ ನೃಪತುಂಗ ಬೆಟ್ಟದ ಮಾರ್ಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಯಾವುದೇ ಸರ್ಕಾರಿ ಅನುದಾನಕ್ಕೆ ಕಾಯದೇ ದಾನಿಗಳ ಅನುದಾನದಲ್ಲಿ ನೃಪತುಂಗ ಬೆಟ್ಟದ ರಸ್ತೆ ತನ್ನ ಸೌಂದರ್ಯೀಕಣ ಹೆಚ್ಚಿಸಿಕೊಳ್ಳುತ್ತಿದೆ.

ಹೌದು... ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ ಅವರು ವಾರ್ಡ್‌ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅದರಲ್ಲಿ ತಮ್ಮ ಸ್ವಂತ ಹಣದಲ್ಲಿ ನೃಪತುಂಗ ಬೆಟ್ಟಕ್ಕೆ ತೆರಳುವ ಪಾದಚಾರಿ ಮಾರ್ಗದ ಮೇಲೆ ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರ ಕನಸಿಗೆ ದಾನಿಗಳು ಕೂಡ ಕೈಜೋಡಿಸಿದ್ದಾರೆ.

ರಸ್ತೆ ಪಕ್ಕದಲ್ಲಿ 12 ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರು, ಇಂದು 20 ಆಸನಗಳನ್ನು ಅಳವಡಿಸುವ ಮೂಲಕ ವೃದ್ಧರು, ವಾಯು ವಿಹಾರಕ್ಕೆ ಬರುವವರು, ವಿಶ್ರಾಂತಿ ಪಡೆಯುವವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಿತ್ಯ ನೂರಾರು ಜನರು ಓಡಾಡುವ ಈ ರಸ್ತೆಯಲ್ಲಿ ಮೊದಲು ಕುಳಿತುಕೊಳ್ಳಲು ಆಸನಗಳಿರಲಿಲ್ಲ. 

ADVERTISEMENT

ಈ ಕಾರ್ಯಕ್ಕೆ ರೋಟರಿ ಕ್ಲಬ್, ಇನ್ನರ್ ವಿಲ್ ಕ್ಲಬ್, ಶಕ್ತಿ ಕಾಲೊನಿ ನಿವಾಸಿಗಳು ಕೈಜೋಡಿಸಿದ್ದು, ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ ಅವರು ತಮ್ಮ ಮಗನ ನೆನಪಿಗಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದಾರೆ.

ಉದ್ಯಮಿ ಧೀರಜ್ ಎಂಬುವವರು ನೃಪತುಂಗ ಬೆಟ್ಟ ಇನ್ನಷ್ಟು ಅಂದಗೊಳಿಸಲು ರಸ್ತೆಯಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸುವುದು, ಕುಡಿಯುವ ನೀರಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

‘ಫಾರೆಸ್ಟ್ ಕಾಲೊನಿಯಲ್ಲಿರುವ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬಯಲು ರಂಗಮಂದಿರ ನಿರ್ಮಾಣದಿಂದ ಹಲವು ಕಾರ್ಯಕ್ರಮಗಳ ಆಯೋಜನೆಗೆ ಸಹಕಾರಿ ಆಗಲಿದೆ’ ಎಂದು ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ತಿಳಿಸಿದರು.

‘ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ 6, ರೋಟರಿ ಕ್ಲಬ್‌ನಿಂದ 2, ಇನ್ನರ್ ವೀಲ್ ಕ್ಲಬ್‌ನಿಂದ 6 ಮತ್ತು ವೈಯಕ್ತಿಕವಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದೇನೆ. ಒಂದು ಆಸನಕ್ಕೆ ₹5 ಸಾವಿರ ಖರ್ಚು ತಗುಲಿದ್ದು, ಒಟ್ಟು ₹1 ಲಕ್ಷ ವೆಚ್ಚದಲ್ಲಿ ಆಸನಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹುಬ್ಬಳ್ಳಿ ಫಾರೆಸ್ಟ್ ಕಾಲೊನಿ ಉದ್ಯಾನ 

ಒಂದು ಆಸನಕ್ಕೆ ₹5 ಸಾವಿರ ಖರ್ಚು ₹1 ಲಕ್ಷ ವೆಚ್ಚದಲ್ಲಿ ಆಸನಗಳ ಅಳವಡಿಕೆ  ಬಯಲು ರಂಗಮಂದಿರ ನಿರ್ಮಾಣಕ್ಕೆ ಚಿಂತನೆ 

ವಾರ್ಡ್‌ ಅಭಿವೃದ್ಧಿ ಕನಸು ಕಂಡಿದ್ದ ನನಗೆ ದಾನಿಗಳು ಕೈ ಜೋಡಿಸಿ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಾದರಿ ವಾರ್ಡ್ ನಿರ್ಮಿಸಲಾಗುವುದು
ಸೀಮಾ ಮೊಗಲಿಶೆಟ್ಟರ್ ಪಾಲಿಕೆ ಸದಸ್ಯೆ
ಬಿಸಿಲಿನ ವೇಳೆ ಕೆಲ ಸಮಯ ಕುಳಿತು ದಣಿವಾರಿಸಿಕೊಳ್ಳಲು ಈ ಆಸನಗಳು ತುಂಬಾ ಅನುಕೂಲವಾಗಿವೆ. ಇನ್ನೂ ಹೆಚ್ಚು ಆಸನ ಅಳವಡಿಸಿದರೆ ಉತ್ತಮ.
ಕಲ್ಮೇಶ ವಿಶ್ವೇಶ್ವರ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.