
ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ಆವರಣದಲ್ಲಿರುವ ಕಟ್ಟಡವನ್ನು ಒಪ್ಪಂದದ ಪ್ರಕಾರ ಕಾನೂನು ಇಲಾಖೆ ಮಹಾನಗರ ಪಾಲಿಕೆಗೆ ನೀಡಲು ತಿರಸ್ಕರಿಸಿರುವ ನಿರ್ಣಯ, ಗುರುವಾರ ಪಾಲಿಕೆಯ ಸಭಾಭವನದಲ್ಲಿ ನಡೆದ ಹು–ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಪುನರ್ ಪರಿಶೀಲನೆಗೆ ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
‘ನವನಗರದ ಕಾನೂನು ವಿಶ್ವವಿದ್ಯಾಲಯಕ್ಕೆ ಪಾಲಿಕೆಯ 39 ಎಕರೆ ಜಾಗವನ್ನು ಉಚಿತವಾಗಿ ನೀಡಿದ್ದು, ಪಾಲಿಕೆಯ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣವಾಗುತ್ತಿದೆ’ ಎಂದು ಸದಸ್ಯ ಚಂದ್ರಶೇಖರ ಮನಗುಂಡಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದರು.
‘ಕಾನೂನು ಇಲಾಖೆಯ ಅಡಿಯಲ್ಲಿ ವಿಶ್ವವಿದ್ಯಾಲಯ ಇದೆಯೆಂದು, ಕಾನೂನು ಉಲ್ಲಂಘಿಸಿ, ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಬಹುದೇ? ಹಳೇಕೋರ್ಟ್ ಕಟ್ಟಡ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಇಲಾಖೆಯ ನಿರ್ಧಾರವೇನು?’ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಆಯುಕ್ತ ರುದ್ರೇಶ ಘಾಳಿ, ‘ಪಾಲಿಕೆ ಸಲ್ಲಿಸಿದ ಪ್ರಸ್ತಾವನ್ನು ತಿರಸ್ಕರಿಸಿರುವುದಾಗಿ ರಾಜ್ಯ ಹೈಕೋರ್ಟ್‌ನ ರೆಜಿಸ್ಟ್ರಾರ್ ಜನರಲ್ ಅವರು ತಿಳಿಸಿರುವುದಾಗಿ ಸರ್ಕಾರ ಮೇಯರ್ ಅವರಿಗೆ ಪತ್ರ ಬರೆದು ತಿಳಿಸಿದೆ’ ಎಂದರು.
ಆಯುಕ್ತರ ಉತ್ತರ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ, ‘ಪಾಲಿಕೆ ಉಚಿತವಾಗಿ ನೀಡಿದ್ದ 39 ಎಕರೆ ಜಾಗವನ್ನು ವಾಪಸ್ ಪಡೆಯಬೇಕು. ಕಟ್ಟಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಲು ಮೇಯರ್ ಠರಾವು ಪಾಸ್ ಮಾಡಬೇಕು’ ಎಂದು ಆಗ್ರಹಿಸಿದರು.
‘ಜಾಗದ ಕೊರತೆಯಿದ್ದಾಗಲೂ ಶಿಕ್ಷಣದ ದೃಷ್ಟಿಯಿಂದ ಹಾಗೂ ಹಳೇ ಕೋರ್ಟ್ ಕಟ್ಟಡ ಪಾಲಿಕೆಗೆ ದೊರೆಯುತ್ತದೆ ಎಂದು ಜಾಗ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಒಪ್ಪಂದವಾಗಿತ್ತು. ಕೊಟ್ಟ ಜಾಗ ಮರಳಿ ಪಡೆದು, ಅಲ್ಲಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡೋಣ’ ಎಂದು ಸದಸ್ಯ ಈರೇಶ ಅಂಚಟಗೇರಿ ಹೇಳಿದರು. ಸದಸ್ಯರಾದ ಶಿವು ಹಿರೇಮಠ, ರಾಜಣ್ಣ ಕೊರವಿ ದನಿಗೂಡಿಸಿದರು.
‘ಕೊಟ್ಟು ಪಡೆಯುವ ಒಪ್ಪಂದವಾಗಿತ್ತು. ಆದರೆ, ಸರ್ಕಾರ ಮಟ್ಟದಲ್ಲಿ ನಿರ್ಣಯವಾಗಿದ್ದು, ಮತ್ತೊಮ್ಮೆ ಪರಿಶೀಲನೆಗೆ ಪ್ರಸ್ತಾವ ಸಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್ ಜ್ಯೋತಿ ಪಾಟೀಲ ಆಯುಕ್ತರಿಗೆ ಸೂಚಿಸಿದರು.
ಠರಾವು ರದ್ದುಪಡಿಸಲು ಆಗ್ರಹ: ಮನೆಗೆ ತೆರಳಿ ಕಸ ಸಂಗ್ರಹಿಸುವ ಬಗ್ಗೆ ‘ಕಂಟೇನರ್ ಚಾರ್ಜ್’ ವಸೂಲಿ ಮಾಡುವ ಕುರಿತು ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಠರಾವಿನ ಬಗ್ಗೆ ಚರ್ಚೆ ನಡೆಯಿತು. ‘ಕಂಟೇನರ್ ಬಳಕೆ ಇಲ್ಲದಿದ್ದರೂ, ಅದಕ್ಕೆ ಕರ ವಸೂಲಿ ಮಾಡುವ ನಿರ್ಧಾರ ಅವೈಜ್ಞಾನಿಕ. ಠರಾವು ರದ್ದುಪಡಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.
‘315 ಆಟೊ ಟಿಪ್ಪರ್ ಕಸ ಸಂಗ್ರಹಿಸುತ್ತಿದ್ದು, ಅವುಗಳ ನಿರ್ವಹಣೆಗೆ ಚಾರ್ಜ್ ವಿಧಿಸಲಾಗುತ್ತಿದೆ. ಕಂಟೇನರ್ ಪದ ತೆಗೆದು, ಆಟೊ ಟಿಪ್ಪರ್ ಚಾರ್ಜ್ ಎಂದು ಮಾಡಲಾಗುವುದು’ ಎಂದು ಆಯುಕ್ತ ರುದ್ರೇಶ ಘಾಳಿ ಸದಸ್ಯರ ಗಮನಕ್ಕೆ ತಂದರು.
ಆಕ್ಷೇಪ ವ್ಯಕ್ತಪಡಿಸಿದ ತಿಪ್ಪಣ್ಣ ಮಜ್ಜಗಿ, ‘ಕಸ ಸಂಗ್ರಹ ಹಾಗೂ ಸ್ವಚ್ಛತೆಗೆ ಘನತ್ಯಾಜ್ಯ ವಿಭಾಗವಿದ್ದು, ಅದಕ್ಕಾಗಿಯೇ ಒಂದು ಸಮಿತಿಯೂ ಇದೆ. ಅದರ ಮೂಲಕ ಪ್ರಸ್ತಾವ ಸಲ್ಲಿಕೆಯಾದರೆ, ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು. ಮೂಲದಿಂದಲೇ ಪ್ರಸ್ತಾವ ಬಂದು ಠರಾವು ಪಾಸಾದರೆ ಕಾಯ್ದೆಯಾಗುತ್ತದೆ. ತಮ್ಮಷ್ಟಕ್ಕೆ ವಿಷಯ ಮಂಡಿಸಿ ಠರಾವು ಪಾಸು ಮಾಡಿರುವುದು ಸರಿಯಲ್ಲ’ ಎಂದರು.
ಮತ್ತೊಮ್ಮೆ ಪರಿಶೀಲನೆ ನಡೆಸಿ, ಘನತ್ಯಾಜ್ಯ ವಿಭಾಗದಿಂದ ಪ್ರಸ್ತಾವ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಮೇಯರ್ ಜ್ಯೋತಿ ಪಾಟೀಲ ಆಯುಕ್ತರಿಗೆ ಸೂಚಿಸಿದರು.
ಉಪಮೇಯರ್ ಸಂತೋಷ ಚವ್ಹಾಣ್, ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸತೀಶ ಹಾನಗಲ್, ಮಲ್ಲಿಕಾರ್ಜುನ ಗುಂಡೂರ, ಸುವರ್ಣಾ ಕಲಕುಂಟ್ಲ ಸೇರಿದಂತೆ ಇತರ ಸದಸ್ಯರು ಪಾಲ್ಗೊಂಡಿದ್ದರು.

ಭವಿಷ್ಯದ ದಿನಗಳಲ್ಲಿ ಕೌಟುಂಬಿಕ ಕಾರ್ಮಿಕ ನ್ಯಾಯಾಲಯದ ಅಗತ್ಯ ಇರುವುದರಿಂದ ಹಳೇಕೋರ್ಟ್ ಕಟ್ಟಡ ಪಾಲಿಕೆಗೆ ನೀಡುವ ಪ್ರಸ್ತಾವ ಕಾನೂನು ಇಲಾಖೆ ತಿರಸ್ಕರಿಸಿದೆರುದ್ರೇಶ ಘಾಳಿ ಆಯುಕ್ತ

‘ಹುಡಾ’ ಮತ್ತು ಪಾಲಿಕೆಯ ಜಂಟಿ ಸಭೆಯಲ್ಲಿ ಕಸ ಸಂಗ್ರಹಕ್ಕೆ ಕರ ವಸೂಲಿ ಮಾಡದಿರುವ ನಿರ್ಣಯವಾಗಿತ್ತು. ಈಗ ಕರ ವಸೂಲಿಯ ನಿರ್ಣಯವಾಗಿದೆ. ದ್ವಂದ್ವ ನಿಲುವು ಯಾಕೆ?ಉಮೇಶಗೌಡ ಕೌಜಗೇರಿ ಸದಸ್ಯ
ಸ್ಟೀಲ್ ಲೋಟದಲ್ಲಿ ನೀರು; ಕಾಲೆಳೆದ ಇಕ್ಬಾಲ್
‘ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಸ್ಟೀಲ್ ಲೋಟದಲ್ಲಿ ನೀರು ಕೊಟ್ಟಿರುವುದು ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್ ಸದಸ್ಯ ಇಕ್ಬಾಲ್ ನವಲೂರು ವ್ಯಂಗ್ಯವಾಡಿ ಅಧಿಕಾರಿಗಳ ಕಾಲೆಳೆದರು. ‘ಸಭೆಯಲ್ಲಿ ಮಾತ್ರ ಸ್ಟೀಲ್ ಲೋಟ್ ಹೊರಗೆಲ್ಲ ಪ್ಲಾಸ್ಟಿಕ್ ಬಾಟಲ್ ಹಾಗೂ ನಿಷೇಧಿತ ಪ್ಲಾಸ್ಟಿಕ್ ಹಾವಳಿ. ಯಾರ ಕಣ್ಣಿಗೆ ಮಣ್ಣೆರಚಲು ಹೀಗೆ ಮಾಡುತ್ತಿದ್ದೀರಿ? ಈ ಕೂಡಲೇ ನಿಷೇಧಿತ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಣೆ ಮಾಡಿ ನೋಡೋಣ’ ಎಂದು ಸವಾಲು ಹಾಕಿದರು. ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ‘ನಿಷೇಧಿತ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಾಲಿಕೆ ಆವರಣವನ್ನು ಗ್ರೀನ್ ಕ್ಯಾಂಪಸ್ ಮಾಡಬೇಕೆನ್ನುವ ನಿಟ್ಟಿನಲ್ಲಿ ನಾವೇ ಮೊದಲು ಪ್ಲಾಸ್ಟಿಕ್ ತ್ಯಜಿಸಲು ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.