ADVERTISEMENT

ಹುಬ್ಬಳ್ಳಿ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

ವರೂರು ನವಗ್ರಹ ತೀರ್ಥಕ್ಷೇತ್ರ: ರಾ‌ಜ್ಯಾಪಾಲ, ಸಂತರು ಭಾಗಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 23:59 IST
Last Updated 15 ಜನವರಿ 2025, 23:59 IST
ಹುಬ್ಬಳ್ಳಿ ತಾಲ್ಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಬುಧವಾರ ನಡೆದ ಕುಂಥು ಸಾಗರ ಮಹಾರಾಜರು ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಆಚಾರ್ಯ ಗುಣಧರನಂದಿ ಮಹಾರಾಜರು ಹಾಜರಿದ್ದರು
ಹುಬ್ಬಳ್ಳಿ ತಾಲ್ಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಬುಧವಾರ ನಡೆದ ಕುಂಥು ಸಾಗರ ಮಹಾರಾಜರು ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಆಚಾರ್ಯ ಗುಣಧರನಂದಿ ಮಹಾರಾಜರು ಹಾಜರಿದ್ದರು   

ಹುಬ್ಬಳ್ಳಿ: ತಾಲ್ಲೂಕಿನ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ 405 ಅಡಿ ಎತ್ತರದ ಸುಮೇರು ಪರ್ವತ ಜಿನ ಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ, ನವ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಬುಧವಾರ ಚಾಲನೆ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಧ್ವಜಾರೋಹಣ, ಜಿನ ಪುರಾತನ ವಿಗ್ರಹದ ಮೆರವಣಿಗೆ, ಮಹಾ ಮಂಡಲಾರಾಧನೆ ಮತ್ತು ಮಹಾಯಾಗ ಮಂಡಲ ವಿಧಾನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ರಾಜಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ‘ನಾನು ಜೈನ ಧರ್ಮೀಯ ಅಲ್ಲ. ಆದರೆ, ಸನಾತನ, ಜೈನ ಧರ್ಮದಿಂದ ಪ್ರೇರಣೆ ಪಡೆದಿದ್ದೇನೆ. ನನ್ನ ಇಬ್ಬರು ಮೊಮ್ಮಕ್ಕಳು ಜೈನ ಧರ್ಮದವರನ್ನು ವಿವಾಹವಾಗಿದ್ದಾರೆ. ನಾನು ಯಾವುದೇ ವ್ಯಸನ ಹೊಂದಿಲ್ಲ. ರಾಜ್ಯಪಾಲನಾಗಿ ಬಂದ ನಂತರ ರಾಜಭವನದಲ್ಲಿ ಮಾಂಸಾಹಾರ ನಿಲ್ಲಿಸಿದ್ದೇನೆ. ವಿದೇಶಗಳಿಂದ ಬರುವ ಅತಿಥಿಗಳಿಗೂ ಸಸ್ಯಾಹಾರ ಊಟ ನೀಡಲಾಗುತ್ತದೆ’ ಎಂದರು.

ADVERTISEMENT

‘ನಾವು ಪ್ರಕೃತಿಯ ಪೂಜೆ ಮಾಡುತ್ತೇವೆ. ಪ್ರಸ್ತುತ ದಿನಗಳಲ್ಲಿ ಪರಿಸರದಲ್ಲಿ ಅಸಮತೋಲನ ಆಗುತ್ತಿದೆ. ಅದನ್ನು ಸರಿಪಡಿಸಲು ಜೈನ ಧರ್ಮದ ಸಿದ್ಧಾಂತ, ತತ್ವಗಳನ್ನು ಪಾಲಿಸಬೇಕು. ಪರಿಸರ ರಕ್ಷಣೆ ಎಲ್ಲರ ಕರ್ತವ್ಯ’ ಎಂದು ಹೇಳಿದರು. 

‘ಆಚಾರ್ಯ ಗುಣಧರ ನಂದಿ ಮಹರಾಜರು 17ನೇ ವರ್ಷಕ್ಕೆ ದಿಗಂಬರ ಮುನಿ ದೀಕ್ಷೆ ಪಡೆದರು. 21ನೇ ವರ್ಷದಲ್ಲಿ ಆಚಾರ್ಯರಾದರು. ಅವರು ವರೂರಿನ 40 ಎಕರೆ ವಿಶಾಲ ಪ್ರದೇಶದಲ್ಲಿ ನವಗ್ರಹ ತೀರ್ಥ ಕ್ಷೇತ್ರ ಸ್ಥಾಪಿಸಿದ್ದಾರೆ. ಎಜಿಎಂ ಶಿಕ್ಷಣ ಸಂಸ್ಥೆ ಮೂಲಕ ಅವರು ಮಾನವೀಯ, ಸದ್ಗುಣ ಬಿತ್ತುವ, ಸಂಸ್ಕಾರ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಗುಣಧರ ನಂದಿ ಮಹಾರಾಜರ ಸಂಕಲ್ಪದಂತೆ ಸುಮೇರು ಪರ್ವತ ನಿರ್ಮಾಣವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿ.ಎಂ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡಿದ್ದಾರೆ. ಶ್ರೀಗಳ ಆಶೀರ್ವಾದಿಂದ ನನಗೆ ಶಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶಾಸಕರಾದ ಪ್ರಸಾದ ಅಬ್ಬಯ್ಯ, ಎಂ.ಆರ್.ಪಾಟೀಲ, ನಟ ರಮೇಶ್ ಅರವಿಂದ್‌, ಕುಂಥು ಸಾಗರ ಮಹಾರಾಜರು ಸೇರಿದಂತೆ ವಿವಿಧ ಆಚಾರ್ಯರು ಮತ್ತು ಸಂತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.