
ಹುಬ್ಬಳ್ಳಿ: ‘ಅಂಬಿಗರು ಸಣ್ಣ ಸಮಾಜ ಎಂದು ಕೊರಗುವ ಬದಲು ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸಿದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.
ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮುದಾಯದ ಮುಖಂಡರು, ಯುವಕರು ಮದುವೆ ಸಮಾರಂಭಗಳಿಗೆ ಮಾತ್ರ ಸೇರದೆ, ತಿಂಗಳಿಗೊಮ್ಮೆ ಚರ್ಚೆ ಮಾಡಿ ಸಂಘಟನೆ ಮಾಡಬೇಕು’ ಎಂದರು.
‘ಸಮಾಜಕ್ಕೆ ಸಭಾಭವನದ ಅವಶ್ಯಕತೆ ಇದೆ ಎಂಬುದು ಗಮನದಲ್ಲಿದೆ. ಮುಂದಿನ ವರ್ಷದ ಚೌಡಯ್ಯ ಜಯಂತಿಗೆ ಸಭಾಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ್ ಗಸ್ತೆ ಮಾತನಾಡಿ, ‘ಸಮಾಜದ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ವರ್ಗದ ಜನರು ಪದವಿ, ಪಿಎಚ್.ಡಿ ಮಾಡಬೇಕು’ ಎಂದರು.
ಮಂಜುನಾಥ್ ಬೈರಣ್ಣವರ್ ಮಾತನಾಡಿ, ‘ನಮಗೆ ಊಟ ಇಲ್ಲದಿದ್ದರೂ ಸರಿ, ಮಕ್ಕಳಿಗೆ ಶಿಕ್ಷಣ ನೀಡಬೇಕು. ಚುನಾವಣೆಯಲ್ಲಿ ನಮ್ಮ ಸಮಾಜದ ಯಾರೇ ನಿಂತರೂ ಅವರನ್ನು ಗೆಲ್ಲಿಸುವ ಮನಸ್ಥಿತಿ ನಿರ್ಮಾಣವಾಗಬೇಕು’ ಎಂದು ಕರೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮಯೂರ್ ನಾಟಿಕರ್, ಶಿವಾನಂದ ಅಂಬಿಗೇರ್, ವೆಂಕಟೇಶ್ ಅಂಬಿಗೇರ, ಹನುಮಂತ್ ಅಂಬಿಗೇರ್, ಸೈದಪ್ಪ ಅಂಬಿಗೇರ್, ಕರಿಯಪ್ಪ ಅಂಬಿಗೇರ್, ಮಂಜುನಾಥ್ ಬೆಡಸೂರ್, ಶ್ರೀಕಾಂತ್ ಪೂಜಾರ್, ಗುರುಸಿದ್ದಪ್ಪ ಮಾಳಾಪುರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.