ADVERTISEMENT

ಸಿದ್ಧಾರೂಢರ ರಥೋತ್ಸವ ಸಂಭ್ರಮ: ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:27 IST
Last Updated 17 ಫೆಬ್ರುವರಿ 2026, 6:27 IST
<div class="paragraphs"><p>ಸಿದ್ಧಾರೂಢರ ವೈಭವದ ರಥೋತ್ಸವ</p></div>

ಸಿದ್ಧಾರೂಢರ ವೈಭವದ ರಥೋತ್ಸವ

   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿಯ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಮಠದ ರಥಬೀದಿಯ ಉದ್ದಕ್ಕೂ ರಥೋತ್ಸವದಲ್ಲಿ ಭಾಗಹಿಸಿದ್ದ ಲಕ್ಷಾಂತರ ಭಕ್ತರು, ‘ಸಿದ್ಧಾರೂಡರ ಅಂಗಾರ, ದೇಶಕ್ಕೆಲ್ಲ ಬಂಗಾರ..., ಸಿದ್ಧಾರೂಢಸ್ವಾಮಿ ಮಹಾರಾಜ್‌ ಕಿ ಜೈ..., ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಶಿವಾಯ ನಮಃ.. ಓಂ ನಮಃ ಶಿವಾಯ..ಹೀಗೆ ಸಿದ್ಧಾರೂಢ ಅಜ್ಜನ ಸ್ಮರಿಸುತ್ತ ಕೂಗಿದ ಜಯಘೋಷಗಳು ಮುಗಿಲು ಮುಟ್ಟುವಂತಿದ್ದವು.

ADVERTISEMENT

ಸಂಜೆ 6ರ ವೇಳೆಗೆ ಮಠದ ಆವರಣಕ್ಕೆ ಸಿದ್ಧಾರೂಢರ ಮತ್ತು ಗುರುನಾಥಾರೂಢರ ಪಲ್ಲಕ್ಕಿ ತರಲಾಯಿತು. ಈ ವೇಳೆ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸಿದ್ಧಾರೂಢರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು. ಧಾರ್ಮಿಕ ವಿಧಿ–ವಿಧಾನ ಪೂರ್ಣಗೊಂಡ ಬಳಿಕ ಗಣ್ಯರು ಬಲೂನು ಹಾರಿಸಿ, ರಥೋತ್ಸವಕ್ಕೆ ಚಾಲನೆನೀಡಿದರು.

ಈ ವೇಳೆ ರಥೋತ್ಸವದ ಸುತ್ತಮುತ್ತ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಕೂಗಿದ ‘ಸಿದ್ಧಾರೂಢಸ್ವಾಮಿ ಮಹಾರಾಜ್‌ ಕಿ ಜೈ...’ ಎಂಬ ಘೋಷಣೆಯು ಮಠದ ಆವರಣದಲ್ಲಿ ಭಕ್ತಿಯ ಅಲೆಯನ್ನೇ ತೇಲಿಸಿತು. ಸಿದ್ಧಾರೂಢ ಸ್ವಾಮಿಯ ಸ್ಮರಣೆಯ ಮಂತ್ರಘೋಷಗಳು, ಭಜನೆ, ಪ್ರಾರ್ಥನೆ, ಭಕ್ತಿಗೀತೆಗಳು ಇಡೀ ರಥಬೀದಿಯನ್ನೇ ಆವರಿಸಿದವು.

ಧಾರವಾಡ ಜಿಲ್ಲೆ ಸೇರಿದಂತೆ ಹಾವೇರಿ, ವಿಜಯಪುರ, ಗದಗ, ಬಾಗಲಕೋಟೆ, ಬೆಳಗಾವಿ, ಬೀದರ್‌ ಹೀಗೆ ರಾಜ್ಯದ ವಿವಿಧ ಜಿಲ್ಲೆ ಒಳಗೊಂಡಂತೆ ನೆರೆಯ ರಾಜ್ಯದಿಂದಲೂ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸಿದ್ಧಾರೂಢಸ್ವಾಮಿಯ ವೈಭವವನ್ನು ಕಣ್ತುಂಬಿಕೊಂಡರು.

ರಥದ ಹಾದಿಯುದ್ದಕ್ಕೂ ಹೆಜ್ಜೆಮೇಳ, ಡೊಳ್ಳು ಕುಣಿತ, ಹಲಗಿ ಬಡಿತದ ಜಾನಪದ ಕಲಾತಂಡಗಳು ಜಾತ್ರೆಗೆ ವಿಶೇಷ ಮೆರುಗು ತಂದವು. ಮಠದಿಂದ ಮುಖ್ಯದ್ವಾರದವರೆಗೆ ಸಾಗಿದ ರಥವು, ಪುನಃ ಮಠಕ್ಕೆ ವಾಪಸ್ಸಾಗುವವರೆಗೆ ಭಕ್ತರು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.  ಭಾನುವಾರ ನಡೆದ ಮಹಾಶಿವರಾತ್ರಿ ಆಚರಣೆಯಲ್ಲಿಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಮಠದ ಆವರಣದಲ್ಲಿ ನೆರೆದು ಶಿವನಾಮ ಸ್ಮರಿಸುತ್ತ ಜಾಗರಣೆ ಮಾಡಿದರು.

ಪೊಲೀಸರ ನಿಗಾ: ರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು.

ಮಠವನ್ನು ಪ್ರವೇಶಿಸುವ ರಸ್ತೆಗಳಿಗೆ ದೂರದಲ್ಲೇ ಬ್ಯಾರಿಕೇಡ್‌ಗಳನ್ನು ಅಡ್ಡವಾಗಿ ಇಟ್ಟು ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಇದ್ದ ಪೊಲೀಸರ ತಂಡ ಭಕ್ತರ ಓಡಾಟ ಸರಾಗವಾಗಿರುವಂತೆ ನೋಡಿಕೊಂಡಿತು.

ಮಠದ ಆಡಳಿತಾಧಿಕಾರಿ ಬಿ.ಎಸ್.ಭಾರತಿ, ಪ್ರಮುಖರಾದ ರಮೇಶ್ ಎಸ್‌.ಬೆಳಗಾವಿ, ವಿನಾಯಕ, ಚನ್ನವೀರ ಡಿ.ಮುಂಗರವಾಡಿ, ಟ್ರಸ್ಟಿಗಳಾದ ಮಂಜುನಾಥ ಎಸ್‌.ಮುನವಳ್ಳಿ, ವಿ.ವಿ.ಮಲ್ಲಾಪುರ, ಗೋವಿಂದ ಜಿ.ಮನ್ನೂರು, ಬಾಲು ಟಿ.ಮಗಜಿಕೊಂಡಿ, ಸರ್ವಮಂಗಳಮ್ಮ, ಗೀತಾ ಟಿ.ಕಲಬುರಗಿ ಹಾಗೂ ಮಠದ ಗಣ್ಯರು ಉಪಸ್ಥಿತರಿದ್ದರು.

ದಾರಿಯುದ್ದಕ್ಕೂ ಪ್ರಸಾದ ಸೇವೆ...

ರಥೋತ್ಸವದ ನಿಮಿತ್ತ ಸಿದ್ಧಾರೂಢ ಮಠವನ್ನು ಸಂಪರ್ಕಿಸುವ ರಸ್ತೆಯುದ್ದಕ್ಕೂ ಭಕ್ತರು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ದೇವಾಲಯಗಳ ಮಂಡಳಿಗಳು ಅಲ್ಲಲ್ಲಿ ಜನರಿಗೆ ಪ್ರಸಾದ ಸೇವೆ ಒದಗಿಸಿದವು. ಕೆಲವರು ನೀರು, ಮಜ್ಜಿಗೆ, ಜ್ಯೂಸ್ ಹಾಗೂ ಬಾಳೆಹಣ್ಣುಗಳನ್ನು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.