
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ, ಚೋಟಾ ಮುಂಬೈ, ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ–ಧಾರವಾಡ ಮಹಾನಗರ ವೇಗವಾಗಿ ಬೆಳೆಯುತ್ತಿರುವ ನಗರ ಎಂದೇ ಗುರುತಿಸಿಕೊಂಡಿದೆ. ಆದರೆ ಇಲ್ಲಿ ಇನ್ನೂ ಶೌಚಾಲಯ, ಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.
ಮಹಾನಗರದಲ್ಲಿ 40ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳು ಇವೆ. ಅದರಲ್ಲಿ ಮಾರುಕಟ್ಟೆ, ಬಡಾವಣೆ, ಕೇಂದ್ರ ಬಸ್ ನಿಲ್ದಾಣ, ಸಿಬಿಟಿ, ಹೊಸೂರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳು ಸ್ವಚ್ಛತೆ ಇಲ್ಲದೇ ನಾರುತ್ತಿವೆ. ಕೆಲವು ಕಡೆ ಸಾರ್ವಜನಿಕರಿಗೆ ಉಚಿತ ಶೌಚಾಲಯಗಳು ಇದ್ದರೆ, ಕೆಲವು ಕಡೆ ಅಗತ್ಯ ಹಣ ಪಾವತಿಸಿ ಶೌಚಾಲಯವನ್ನು ಉಪಯೋಗ ಮಾಡಬೇಕಿದೆ.
ನಗರದ ಬಾರಾ ಕೊಟ್ರಿ, ಹಳೆಯ ನ್ಯಾಯಾಲಯದ ವೃತ್ತ, ಸಿಬಿಟಿ, ಜನತಾ ಬಜಾರ್ ಸೇರಿದಂತೆ ಅನೇಕ ಕಡೆ ಶೌಚಾಲಯಗಳಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಅವುಗಳು ಗಬ್ಬೆದ್ದು ನಾರುತ್ತಿವೆ.
ಸಾರಿಗೆ ಸಂಸ್ಥೆ ಅವರು ಶೌಚಾಲಯ ನಿರ್ವಹಣೆಯನ್ನು ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿರುವುದರಿಂದ ಇದು ನಿತ್ಯ ಹಣ ವಸೂಲಿ ದಂಧೆಯಾಗಿ ಮಾರ್ಪಟ್ಟಿದೆ. ಅದರಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ಸಾರ್ವಜನಿಕರದ್ದಾಗಿದೆ.
ಸ್ಥಳೀಯ ಸಫಾಯಿ ಕರ್ಮಚಾರಿಗಳಿಗೆ ಶೌಚಾಲಯಗಳ ನಿರ್ವಹಣೆಯನ್ನು ನೀಡದ ಸಂಸ್ಥೆಗಳು ಹೆಚ್ಚಿನ ಟೆಂಡರ್ ಹಣದ ಆಸೆಗಾಗಿ ಉತ್ತರ ಭಾರತದ ಕೆಲವು ಕಂಪೆನಿಗಳಿಗೆ ನೀಡುವ ಮೂಲಕ ಶೌಚಾಲಯ ಬಳಕೆಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿವೆ.
ನಿಯಮದ ಪ್ರಕಾರ ಈ ಶೌಚಾಲಯಗಳು ಉಚಿತವಾಗಿರಬೇಕು. ಆದರೆ ₹2, ₹5 ದರ ಇದ್ದರೂ ₹10 ಅನ್ನು ವಸೂಲಿ ಮಾಡುತ್ತಿದ್ದಾರೆ. ಮೂಲಸೌಕರ್ಯ, ಸ್ವಚ್ಛತೆ ಒದಗಿಸಬೇಕಾಗಿರುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ ಮಹಾನಗರಗಳಲ್ಲಿರುವ ಶೌಚಾಲಯಗಳು ಬಹುತೇಕ ಕಳಪೆಯಾಗಿದ್ದು, ಹಣ ವಸೂಲಿ ಕೇಂದ್ರಗಳಾಗಿ ಪರಿಣಮಿಸಿವೆ.
ನಿರ್ವಹಣೆ ಇಲ್ಲದೇ ಖಾಸಗಿ ಪ್ರದೇಶಗಳಲ್ಲಿರುವ ಶೌಚಾಲಯಗಳನ್ನು ಮಹಾನಗರ ಪಾಲಿಕೆ ನೋಡಿಕೊಳ್ಳಬೇಕು. ವಾರಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಕಿ, ಸ್ವಚ್ಛಗೊಳಿಸಿ, ಕ್ರಿಮಿನಾಶಕವನ್ನು ಸಿಂಪಡಣೆ ಮಾಡಬೇಕು. ಆದರೆ ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗದಿರುವುದು ಪಾಲಿಕೆ ವೈಫಲ್ಯವಾಗಿದೆ ಎಂಬುವುದು ನಾಗರಿಕರ ಅಸಮಾಧಾನವಾಗಿದೆ.
ಮಹಿಳೆಯರ ಘನತೆಯ ಪ್ರಶ್ನೆ: ಸಾರ್ವಜನಿಕ ಸ್ಥಳಗಳಲ್ಲಿ ಇರುವ ಶೌಚಾಲಯಗಳನ್ನು ಬಳಕೆ ಮಾಡಬೇಕು ಎಂದರೆ ಮಹಿಳೆಯರಿಗೆ ಇನ್ನೂ ಸವಾಲಾಗಿದೆ. ಸಂಜೆ ಹೊತ್ತಿನಲ್ಲಿ ಬಸ್ ನಿಲ್ದಾಣಗಳಲ್ಲಿ ಇರುವ ಶೌಚಾಲಯ ಬಳಸಬೇಕು ಎಂದರೆ ದುಪ್ಪಟ್ಟು ಹಣ ಪಾವತಿ ಮಾಡಬೇಕಿದೆ. ಇದರಿಂದ ಕೆಲವೊಮ್ಮೆ ವಾಗ್ವಾದ ಕೂಡಾ ನಡೆಯುತ್ತಿದೆ.
ಉಚಿತ ಶೌಚಾಲಯ ಎಂಬ ಹೆಸರು ಇದ್ದರೂ ಕೆಲವು ಕಡೆ ಹಣ ವಸೂಲಿ ಮಾಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗೆ ಈ ಸಮಸ್ಯೆ ಕಣ್ಣಿಗೆ ಕಂಡರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರಿಂದ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಬಡ ಮತ್ತು ಹಣ ಇಲ್ಲದೇ ಮಹಿಳೆಯರು ಸಮೀಪದ ಖಾಲಿ ಇರುವ ಜಾಗಗಳಲ್ಲಿ ಹೋಗುತ್ತಾರೆ. ಅವರನ್ನು ನಿಂದಿಸುವ ಕೆಲಸ ಕೂಡ ಆಗುತ್ತಿದೆ. ಇದರಿಂದ ಮಹಿಳೆಯ ಘನತೆಯ ಪ್ರಶ್ನೆ ಎದುರಾಗಿದೆ.
’ಸಾರ್ವಜನಿಕರಿಂದ ಹಣ ಇಲ್ಲದೆ, ಶೌಚಾಲಯದೊಳಗೆ ಪ್ರವೇಶವಿಲ್ಲ ಎಂಬ ಸ್ಥಿತಿ ಇದೆ. ಬಸ್ ಟಿಕೆಟ್ ಹೆಸರಿನಲ್ಲಿ ಈಗಾಗಲೇ ನಾವು ತೆರಿಗೆಯನ್ನು ಪಾವತಿಸಿದ್ದೇವೆ. ಶೌಚಾಲಯ ಬಳಕೆ ಉಚಿತ ಏಕೆ ಇಲ್ಲ‘ ಎಂದು ಮುದ್ದೇಬಿಹಾಳದ ಮಲ್ಲಮ್ಮ ರೆಡ್ಡಿ ಅಸಮಾಧಾನದಿಂದ ಪ್ರಶ್ನಿಸಿದರು.
’ಶೌಚಾಲಯ ನಿರ್ವಹಣೆಯನ್ನು ಖಾಸಗಿಯವರೆಗೆ ನೀಡಲಾಗಿದೆ. ಆದರೆ ಅವರು ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಬಂದರೆ ಖಂಡಿತಾ ಕ್ರಮ ಕೈಗೊಳ್ಳಲಾಗುವುದು‘ ಎಂದು ಹೊಸ ಬಸ್ ನಿಲ್ದಾಣ ಡೀಪೊ ಮ್ಯಾನೇಜರ್ ಮಂಜುನಾಥ ಗುಡಿಮನಿ ಹೇಳಿದರು.
- ಬಸ್ ನಿಲ್ದಾಣ ರೈಲು ನಿಲ್ದಾಣ ಶಾಪಿಂಗ್ ಮಾಲ್‌ಗಳಲ್ಲಿ ಶೌಚಾಲಯ ಉಚಿತವಾಗಿರಬೇಕು. ಶೌಚಾಲಯದ ಹೆಸರಿನ ಮೇಲೆ ಹಣ ವಸೂಲಿ ಮಾಡುವುದು ಸರಿಯಲ್ಲರಾಜು ಕೋನಾಪುರ ಇಂದಿರಾ ನಗರ
ಸ್ವಾತಂತ್ರ್ಯ ಬಂದು 80 ವರ್ಷ ಸಮೀಪಿಸುತ್ತಿದ್ದರೂ ಇನ್ನೂ ನಾವು ಶೌಚಾಲಯದ ವಿಷಯ ಕುರಿತು ಮಾತನಾಡುತ್ತಿರುವುದು ನಮ್ಮ ವ್ಯವಸ್ಥೆಯ ಲೋಪ. ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡಾ ನಮ್ಮ ಹಕ್ಕುಬಸನಗೌಡ ರಾಮನಗೌಡ್ರ ಪ್ರಯಾಣಿಕ
ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಮಾಡಲು ಸ್ಥಳೀಯ ಸಫಾಯಿ ಕರ್ಮಚಾರಿಗಳ ಸಂಘಕ್ಕೆ ವಹಿಸಬೇಕು. ಸರ್ಕಾರವೇ ಇಂತಿಷ್ಟು ಹಣವನ್ನು ನಿಗದಿ ಮಾಡಿದರೆ ನಾಗರಿಕರೂ ತೊಂದರೆಯಾಗುವುದಿಲ್ಲವೆಂಕಟೇಶ ಸ್ವಚ್ಛತಾ ಕಾರ್ಮಿಕ
ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವಾರ ಟ್ಯಾಂಕರ್ ಮೂಲಕ ನೀರು ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಜನರು ಸಹಕರಿಸದೇ ಇರುವುದರಿಂದ ನಮಗೆ ಸವಾಲಾಗಿ ಪರಿಣಮಿಸಿದೆಶ್ರೀಧರ್ ಪರಿಸರ ಅಧಿಕಾರಿ ಮಹಾನಗರ ಪಾಲಿಕೆ
ಪ್ರಯಾಣಿಕರು ಅಗತ್ಯ ಟಿಕೆಟ್ ದರವನ್ನು ನೀಡಿ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಅದಕ್ಕೆ ಅಲ್ಲಿರುವ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯವನ್ನು ಏಕೆ ಉಚಿತವಾಗಿ ಬಳಕೆ ಮಾಡಲು ಕೊಡಬಾರದು ಎಂಬುವುದು ಬಹುತೇಕರ ಪ್ರಶ್ನೆಯಾಗಿದೆ. ಸಾರಿಗೆ ಸಂಸ್ಥೆಗಳು ಅಗತ್ಯ ಇರುವ ಸ್ವಚ್ಛತಾ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುತ್ತಾರೆ. ಅವರನ್ನೇ ಶೌಚಾಲಯಗಳ ಸ್ವಚ್ಛತೆಗೆ ಏಕೆ ನಿಯೋಜಿಸಬಾರದು ಎಂಬುವುದು ಪ್ರಯಾಣಿಕರ ಪ್ರಶ್ನೆಯಾಗಿದೆ. ಮೂತ್ರ ವಿಸರ್ಜನೆಗೆ ₹2 ಶೌಚಕ್ಕೆ ₹5 ಎಂದು ನಿಗದಿ ಮಾಡಿರುತ್ತಾರೆ. ಆದರೆ ನಿರ್ವಹಣೆ ಮಾಡುವ ಸಿಬ್ಬಂದಿ ₹10 ಅನ್ನು ಬಲವಂತವಾಗಿ ವಸೂಲಿ ಮಾಡುತ್ತಾರೆ. ಇದರಿಂದ ಅನೇಕ ಬಾರಿ ತೀವ್ರ ಗಲಾಟೆಗಳು ಆಗುತ್ತಿವೆ. ಇವುಗಳನ್ನೆಲ್ಲ ಕಂಡು ಕಾಣದಂತೆ ಬಸ್ ನಿಲ್ದಾಣದ ವ್ಯವಸ್ಥಾಪಕರು ಪೊಲೀಸ್ ಸಿಬ್ಬಂದಿ ಇರುವುದು ಅಚ್ಚರಿಗೆ ಕಾರಣವಾಗಿದೆ.
ನಮ್ಮ ಮನೆಯ ಶೌಚಾಲಯದಂತೆಯೇ ಸಾರ್ವಜನಿಕ ಶೌಚಾಲಯವನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಈ ಕುರಿತು ಸ್ಥಳೀಯ ಆಡಳಿತ ಜಾಗೃತಿ ಮೂಡಿಸುತ್ತಿದ್ದರೂ ನಾಗರಿಕರಲ್ಲಿ ಸ್ವಚ್ಛತೆಯ ಜಾಗೃತಿ ಬರುತ್ತಿಲ್ಲ. ಸಾರ್ವಜನಿಕ ಶೌಚಾಲಯಗಳ ದುಃಸ್ಥಿತಿಗೆ ಪೌರಾಡಳಿತ ಎಷ್ಟು ಕಾರಣವೋ ಜನರದ್ದು ಅದರಲ್ಲಿ ಪಾಲಿದೆ. ಶೌಚಾಲಯಗಳಲ್ಲಿ ಬಾಟಲಿ ಕಲ್ಲು ಇಟ್ಟಂಗಿ ಗುಟ್ಕಾ ಜಗಿದು ಅಲ್ಲದೇ ಉಗುಳುವ ಬಿಸಾಡುವ ಮನಸ್ಥಿತಿಯಿಂದ ಶೌಚಾಲಯಗಳು ಬಳಕೆಗೆ ಬಾರದಷ್ಟು ಗಲೀಜು ಆಗುತ್ತಿವೆ. ನಾಗರಿಕ ಪ‍್ರಜ್ಞೆ ಮೆರೆಯಬೇಕಿರುವ ಜನರು ಶೌಚಾಲಯಗಳನ್ನು ಕಸದ ತೊಟ್ಟಿಯ ರೀತಿಯಲ್ಲಿ ಬಳಸುತ್ತಿರುವುದರಿಂದ ಬಳಕೆಗೆ ಅಯೋಗ್ಯವಾಗಿವೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇ–ಟಾಯ್ಲೆಟ್‌ಗಳನ್ನು ಪರಿಚಯಿಸಲಾಯಿತು. ಅವುಗಳು ಕೂಡಾ ಸಮರ್ಪಕ ಬಳಕೆ ನಿರ್ವಹಣೆ ಇಲ್ಲದೆ ಹಾಳಾಗಿವೆ. ಸಂಚಾರಿ ಶೌಚಾಲಯಗಳಂತೂ ನಿಂತೇ ಹೋಗಿವೆ. ಮಾರುಕಟ್ಟೆ ಪ‍್ರದೇಶದಲ್ಲಿ ಕೆಲವು ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಿ ಟೆಂಡರ್ ಮೂಲಕ ಖಾಸಗಿಯವರ ನಿರ್ವಹಣೆಗೆ ನೀಡಲಾಗಿದೆ. ಜನದಟ್ಟಣೆಯ ಪ್ರದೇಶಗಳಲ್ಲಿ ನಿರ್ವಹಣೆ ಮಾಡುವವರು ಇಲ್ಲದೇ ಹಾಳಾಗುತ್ತಿವೆ. ಪಾಲಿಕೆ ಆವರಣದಲ್ಲಿರುವ ಶೌಚಾಲಯದ ಬಾಗಿಲು ಕಿಟಕಿ ಚೌಕಟ್ಟುಗಳನ್ನು ಕೂಡಾ ಕೆಲವರು ಬಿಡದೇ ಕಿತ್ತುಕೊಂಡು ಹೋಗಿದ್ದಾರೆ. ಪಕ್ಕದ ಉದ್ಯಾನದಲ್ಲಿರುವ ಶೌಚಾಲಯ ಗಬ್ಬೆದ್ದು ಹೋಗಿದೆ. ಶೌಚಾಲಯ ನಿರ್ವಹಣೆಯೇ ಪಾಲಿಕೆಗೆ ಸವಾಲಾಗಿದೆ. ಇಂದೋರ್ ಜಯಪುರ ಗುಜರಾತ್ ಮೈಸೂರು ಮಾದರಿಯ ಶೌಚಾಲಯಗಳನ್ನು ಅನುಷ್ಠಾನ ಮಾಡಿದ್ದರೂ ಸ್ವಚ್ಛತೆ ನಿರ್ವಹಣೆ ಇಲ್ಲದೇ ಮೊದಲು ಇದ್ದ ಸ್ಥಿತಿಗೆ ಬಂದಿರುವುದು ಆಶ್ಚರ್ಯವಾದರೂ ಸತ್ಯ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಶೌಚಾಲಯಗಳು ನಿರ್ಮಿಸಿದ ಕೆಲವೇ ತಿಂಗಳಲ್ಲಿ ಹಾಳಾಗಿ ಹೋಗುತ್ತಿವೆ. ಯಾವ ಮಾದರಿ ತಂದರೂ ಶೌಚಾಲಯ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.