ADVERTISEMENT

ಹುಬ್ಬಳ್ಳಿ | ಸಮೀಕ್ಷೆ: ಚುರುಕು, ಸಿಬ್ಬಂದಿ ಹೈರಾಣ

ಮನೆ ಗುರುತಿಸಲು ಪರದಾಡುತ್ತಿರುವ ಸಮೀಕ್ಷಕರು, ಆಗಾಗ ನೆಟ್‌ವರ್ಕ್‌ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 3:04 IST
Last Updated 27 ಸೆಪ್ಟೆಂಬರ್ 2025, 3:04 IST
ಹುಬ್ಬಳ್ಳಿಯ ದೇವಿ ನಗರದಲ್ಲಿ ಸಮೀಕ್ಷಕರೊಬ್ಬರು ಕುಟುಂಬದ ಸದಸ್ಯರ ಮಾಹಿತಿ ಸಂಗ್ರಹಿಸಿದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ದೇವಿ ನಗರದಲ್ಲಿ ಸಮೀಕ್ಷಕರೊಬ್ಬರು ಕುಟುಂಬದ ಸದಸ್ಯರ ಮಾಹಿತಿ ಸಂಗ್ರಹಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ರಾಜ್ಯ ಹಿಂದುಳಿದ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಶುಕ್ರವಾರ ನಗರದಲ್ಲಿ ತುಸು ಬಿರುಸು ಪಡೆದುಕೊಂಡಿತ್ತು.

ಶುಕ್ರವಾರ ಒಂದೇ ದಿನ 1,200 ಮನೆಗಳ ಸಮೀಕ್ಷೆ ನಡೆದಿದೆ. ಬೆಳಿಗ್ಗೆ 10ರಿಂದ ಆರಂಭವಾದ ಸಮೀಕ್ಷೆ ಸಂಜೆ ಏಳು ಗಂಟೆವರೆಗೂ ಮುಂದುವರಿದಿತ್ತು. ಮಳೆಯ ನಡುವೆಯೂ ಸಿಬ್ಬಂದಿ ಸಮೀಕ್ಷೆ ನಡೆಸಿದರು. ಆ್ಯಪ್‌ ಮತ್ತು ಸರ್ವರ್‌ ಸಮಸ್ಯೆಯಿಂದಾಗಿ ಕಳೆದ ಮೂರು ದಿನ ಸಮೀಕ್ಷೆ ಸರಿಯಾಗಿ ನಡೆದಿರಲಿಲ್ಲ. ಗುರುವಾರ ಕೇವಲ 150 ಮನೆಗಳಷ್ಟೇ ಸಮೀಕ್ಷೆಯಾಗಿತ್ತು.

‘ಸಮೀಕ್ಷಾ ಆ್ಯಪ್‌ನಲ್ಲಿರುವ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ಕೆಲವು ಕಡೆ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ, ಮಾಹಿತಿ ಭರ್ತಿ ಮಾಡಲು ಸಮಯ ಜಾಸ್ತಿ ಹಿಡಿದಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ, ಸ್ವಯಂಪ್ರೇರಿತ ಎನ್ನುವ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಬಹುತೇಕ ಬಡಾವಣೆಯ ಮಂದಿ, ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಮೀಕ್ಷಕರೊಬ್ಬರು ತಿಳಿಸಿದರು.

ADVERTISEMENT

‘ಸಮೀಕ್ಷೆಗೆ ಬಳಸುತ್ತಿರುವ ಆ್ಯಪ್‌ನಲ್ಲಿ ಹೆಸ್ಕಾಂ ನೀಡಿರುವ ಯುಎಚ್‌ಐಡಿ ಮಾತ್ರ ತೋರಿಸುತ್ತದೆ. ಮನೆಯ ವಿಳಾಸ, ಸಂಪರ್ಕ ಸಂಖ್ಯೆ, ಹೆಸರು ತಿಳಿಯುತ್ತಿಲ್ಲದ ಕಾರಣ, ಯುಎಚ್‌ಐಡಿ ಅಂಟಿಸಿದ ಮನೆ ಯಾವ ಪ್ರದೇಶದಲ್ಲಿ ಇದೆ ಎಂದು ಗೊತ್ತಾಗುತ್ತಿಲ್ಲ. ಗೂಗಲ್‌ ಮ್ಯಾಪ್‌ ಆಧರಿಸಿ ಹೋದರೆ, ಯಾವ್ಯಾವುದೋ ಪ್ರದೇಶಕ್ಕೆ ಕರೆದೊಯ್ಯುತ್ತದೆ. ಐಡಿಯ ಕ್ರಮ ಸಂಖ್ಯೆಗೆ ಅನುಗುಣವಾಗಿ ಹೋದರೆ, ಒಂದು ಮನೆ ಗೋಪನಕೊಪ್ಪ ಇದ್ದರೆ, ಇನ್ನೊಂದು ಮನೆ ಗವಿಸಿದ್ದೇಶ್ವರ ಕಾಲೊನಿಯಲ್ಲಿ ಇದೆ’ ಎಂದು ಮೇಲ್ವಿಚಾರಕರು ಅಸಮಾಧಾನ ವ್ಯಕ್ತಪಡಿಸಿದರು.

‘ಹೆಸ್ಕಾಂ ಸಿಬ್ಬಂದಿ ಒಂದೇ ಪ್ರದೇಶ, ಬಡಾವಣೆಯ ಮನೆಗಳಿಗೆ ಕ್ರಮಬದ್ಧವಾಗಿ ಯುಎಚ್‌ಐಡಿ ಹಾಕಿದರೆ, ನಿಗದಿತ ದಿನಾಂಕದ ಒಳಗೆ ಸಮೀಕ್ಷೆ ಪೂರ್ಣಗೊಳಿಸಬಹುದಿತ್ತು. ಮನೆಯ ವಿಳಾಸ ಸರಿಯಾಗಿ ಪತ್ತೆಯಾಗುತ್ತಿಲ್ಲದ ಕಾರಣ, ಪರದಾಡುವಂತಾಗಿದೆ’ ಎಂದು ಹೇಳಿದರು.

‘ಯುಎಚ್‌ಐಡಿಯಿಂದ ಮನೆ ಗುರುತಿಸುವುದು ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಶನಿವಾರ ಹೆಸ್ಕಾಂ ಅಧಿಕಾರಿ ಜೊತೆ ಸಭೆ ನಡೆಸಿ, ಆರ್‌ಆರ್‌ ನಂಬರ್‌ ಜೊತೆ ಯುಎಚ್‌ಐಡಿ ನಂಬರ್‌ ಜೋಡಿಸಲು ಸೂಚಿಸಲಾಗುವುದು. ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

₹2.44 ಕೋಟಿ ಗೌರವ ಧನ ‘ಧಾರವಾಡ ಜಿಲ್ಲೆಯಿಂದ ವಿವಿಧ ಇಲಾಖೆಯ 4885 ಸಿಬ್ಬಂದಿ ಈ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಮೇಲ್ವಿಚಾರಕರಿಗೆ ಗೌರವಧನ ₹10 ಸಾವಿರ ಹಾಗೂ ಸಮೀಕ್ಷಾದಾರರಿಗೆ ₹5 ಸಾವಿರ ಹಾಗೂ ಪ್ರತಿ ಮನೆಗೆ ₹100 ನೀಡಲಾಗುತ್ತಿದೆ. ಪ್ರತಿ ಸಿಬ್ಬಂದಿಗೆ 150 ಮನೆ ನಿಗದಿಪಡಿಸಲಾಗಿದ್ದು ಜಿಲ್ಲೆಗೆ ₹2.44 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.