ADVERTISEMENT

ಹುಬ್ಬಳ್ಳಿ | ಸಮೀಕ್ಷಕಿ ಮಗನಿಂದ ದತ್ತಾಂಶ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 20:35 IST
Last Updated 2 ಅಕ್ಟೋಬರ್ 2025, 20:35 IST
   

ಹುಬ್ಬಳ್ಳಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡ ಸಮೀಕ್ಷಕಿಯ ಬದಲು, ಅವರ ಮಗ ಸಮೀಕ್ಷೆಗೆ ಮುಂದಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇಲ್ಲಿನ ಮನೋಜ್ ಎಸ್ಟೇಟ್‌ನ ಬಿ.ಎಂ. ರಾಯಲ್ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಸಮೀಕ್ಷೆಗೆ ಬಂದ ವ್ಯಕ್ತಿ, ತಾನು ನಿಯೋಜಿತ ಸರ್ಕಾರಿ ಸಿಬ್ಬಂದಿಯ ಪುತ್ರ, ಅವರಿಗೆ ಹುಷಾರಿಲ್ಲವೆಂದು ಹೇಳಿಕೊಂಡು ಜಿಲ್ಲಾಧಿಕಾರಿ ಸಹಿವುಳ್ಳ ತನ್ನ ತಾಯಿಯ ಗುರುತಿನ ಪತ್ರ ತೋರಿಸಿದ ದೃಶ್ಯ ವಿಡಿಯೊದಲ್ಲಿದೆ.

‘ಸಮೀಕ್ಷೆಗೆ ಬಂದ ಯುವಕ ಮಾಹಿತಿ ಕೇಳಲು ಮುಂದಾದಾಗ ಅನುಮಾನ ಬಂದು, ಗುರುತಿನ ಪತ್ರ ತೋರಿಸಲು ಹೇಳಿದೆ. ಮಹಿಳೆಯ ಭಾವಚಿತ್ರವಿದ್ದ ಗುರುತಿನ ಪತ್ರ ತೋರಿಸಿ, ತಾನು ಅವರ ಮಗನೆಂದು ಪರಿಚಯಿಸಿಕೊಂಡ. ಮಾಹಿತಿ ನೀಡದೆ, ಆತನನ್ನು ವಾಪಸ್‌ ಕಳುಹಿಸಿದೆ’ ಎಂದು ಬಿ.ಎಂ. ರಾಯಲ್ ಗಾರ್ಡನ್ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ಹೇಳಿದರು.

ADVERTISEMENT

‘ಸಮೀಕ್ಷೆಗೆ ನಿಯೋಜಿಸಿದ್ದ ಸಿಬ್ಬಂದಿಯ ಕಿಟ್‌ ಹಿಡಿದು ಅವರ ಮಗನೂ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಮಗ ಸಮೀಕ್ಷೆ ಮಾಡಿಲ್ಲವೆಂದು ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

‘ಈ ಘಟನೆ ವರದಿಯಾದಾಗಿನಿಂದ ಸಮೀಕ್ಷಕಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ, ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರನ್ನು ಶುಕ್ರವಾರ ಕರೆಸಿ, ವಿಚಾರಣೆ ನಡೆಸಲಾಗುವುದು. ನಿಯೋಜಿತ ಸಿಬ್ಬಂದಿಯೇ ಸಮೀಕ್ಷೆ ಮಾಡಬೇಕು. ಬೇರೆಯವರು ಮಾಡಲು ಅವಕಾಶ ನೀಡಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ’ ಎಂದು ಶಹರ ತಹಶೀಲ್ದಾರ್ ಮಹೇಶ ಗಸ್ತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.