ಹುಬ್ಬಳ್ಳಿ: ‘ನಿರಂತರ ದಾಳಿಗಳ ನಡುವೆಯೂ ನಮ್ಮ ದೇಶದ ಆಧ್ಯಾತ್ಮಿಕ ಶಕ್ತಿಯನ್ನು ಸಾವಿರಾರು ವರ್ಷಗಳಿಂದ ಕಾಪಾಡಲಾಗುತ್ತಿದೆ. ಇದು ಅಣು (ನ್ಯೂಕ್ಲಿಯರ್) ಶಕ್ತಿಗಿಂತ ಹೆಚ್ಚು ಬಲಶಾಲಿ’ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.
ಇಲ್ಲಿಗೆ ಸಮೀಪದ ವರೂರು ನವಗ್ರಹ ಕ್ಷೇತ್ರದಲ್ಲಿ ಗುರುವಾರ ನಡೆದ 405 ಅಡಿ ಎತ್ತರದ ಸುಮೇರು ಪರ್ವತ ಜಿನ ಬಿಂಬಗಳ ಪಂಚ ಕಲ್ಯಾಣಕ ಪ್ರತಿಷ್ಠಾ ಮಹಾಮಹೋತ್ಸವದಲ್ಲಿ ಮಾತನಾಡಿದ ಅವರು, ‘ಆಧ್ಯಾತ್ಮಿಕವು ಶಕ್ತಿಯುತವಾಗಿ ಬೆಳೆಯಲು ಮತ್ತು ಉಳಿಯಲು ನಮ್ಮ ದೇವಸ್ಥಾನಗಳೇ ಕಾರಣ’ ಎಂದರು.
‘ಶತ್ರು ರಾಷ್ಟ್ರಗಳಿಂದ ನಮ್ಮ ದೇಶದ ಸಂಸ್ಕೃತಿ, ಪರಂಪರೆಗೆ ಸವಾಲು ಎದುರಾಗಿವೆ. ಇವುಗಳನ್ನು ಮೆಟ್ಟಿ ನಿಂತು ಸಂಸ್ಕೃತಿ ಮತ್ತು ಸಂಪತ್ತು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ದೇಶದ ಶಾಂತಿ ಕದಡುವ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಆಸ್ಪದ ಕೊಡಬಾರದು. ಇಂತಹ ಶಕ್ತಿಗಳನ್ನು ದಮನ ಮಾಡಬೇಕು. ಇದನ್ನು ನಮ್ಮ ಧರ್ಮ ಹೇಳಿಕೊಟ್ಟಿದೆ’ ಎಂದರು.
‘ನಮ್ಮ ನಾಗರಿಕತೆಯು 5,000 ವರ್ಷಗಳಷ್ಟು ಹಿಂದಿನದ್ದು. ಪ್ರಾಚೀನ ದೇವಾಲಯಗಳಿಂದ ಆಧುನಿಕ ತಂತ್ರಜ್ಞಾನದವರೆಗೆ ನಾವು ಭೌತಿಕ ಉನ್ನತಿ ಹಾಗೂ ಆಧ್ಯಾತ್ಮಿಕ ವಿಕಾಸ ಸಮತೋಲನ ಕಾಪಾಡಿಕೊಂಡು ಬಂದಿದ್ದೇವೆ. ಶಾಂತಿ, ನೆಮ್ಮದಿಯ ಜೀವನ ನಡೆಸಲು ಇವೆರಡೂ ಅವಶ್ಯ’ ಎಂದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ‘ವರೂರು ಗ್ರಾಮದ 40 ಎಕರೆ ಜಾಗದಲ್ಲಿ ಗುಣಧರ ನಂದಿ ಮಹಾರಾಜರು ನವಗ್ರಹ ತೀರ್ಥ ಕ್ಷೇತ್ರ ರಚಿಸಿದ್ದಾರೆ. ಧರ್ಮ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮೇರು ಪರ್ವತದ ಲೋಕಾರ್ಪಣೆಯು ಧರ್ಮ ಹಾಗೂ ಆಧ್ಯಾತ್ಮಿಕ ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದರು.
ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರ ನಂದಿ ಮಹಾರಾಜರು ಮಾತನಾಡಿ, ‘ಸುಮೇರು ಪರ್ವತ ಲೋಕಾರ್ಪಣೆಗೊಳ್ಳುವ ಮೂಲಕ ನನ್ನ ಕನಸು ಸಾಕಾರಗೊಂಡಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಗುಣಧರ ನಂದಿ ಮಹಾರಾಜರು ಈ ಕ್ಷೇತ್ರವನ್ನು ಜೈನ ಧರ್ಮ ಹಾಗೂ ಮಹಾವೀರ ತೀರ್ಥಂಕರರ ಆಚಾರ ವಿಚಾರಗಳನ್ನು ಬಿತ್ತರಿಸುವಂತಹ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ ಕೇಂದ್ರವನ್ನಾಗಿಯೂ ಬೆಳೆಸಿದ್ದಾರೆ’ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಜಿತೇಂದ್ರ ಕೊಠಾರಿ, ಕುಂತು ಸಾಗರ ಮಹಾರಾಜ್, ಎಸ್.ಡಿ.ಎಂ ಜೈನಮಠ ಟ್ರಸ್ಟ್ ಅಧ್ಯಕ್ಷ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.