ಸಾಂಕೇತಿಕ ಚಿತ್ರ
ಹುಬ್ಬಳ್ಳಿ: ಅವಳಿ ನಗರದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಿಂದ 24X7 ಕುಡಿಯುವ ನೀರಿನ ಕಾಮಗಾರಿ ಕುಂಟುತ್ತಾ ಸಾಗಿದ್ದು, ನೀರಿನ ಕರ ಬಾಕಿ ವಸೂಲಿ ಸವಾಲಾಗಿದೆ.
ಈ ನಡುವೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ನೀರಿನ ಕರ ಸಂಗ್ರದಲ್ಲಿ ಶೇ 94ರಷ್ಟು ಪ್ರಗತಿ ಸಾಧಿಸಿದೆ. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ₹13.1 ಕೋಟಿ ನೀರನ ಕರ ಸಂಗ್ರಹಿಸುವ ಗುರಿ ಇತ್ತು. ಅದರಲ್ಲಿ ಈಗಾಗಲೇ ₹12.18 ಕೋಟಿ ಸಂಗ್ರಹಿಸಲಾಗಿದೆ.
ಅವಳಿ ನಗರದಲ್ಲಿ 1,81,900 ನಳ ಸಂಪರ್ಕಗಳಿವೆ. ಅದರಲ್ಲಿ 1,25,095 ನಳಗಳಿಗೆ ಮೀಟರ್ ಅಳವಡಿಸಲಾಗಿದೆ. ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹173.46 ಕೋಟಿ ನೀರಿನ ಕರ ಬಾಕಿ ಇದೆ. ಮಹಾನಗರ ಪಾಲಿಕೆಯಿಂದ ಅಕ್ರಮ ನಳಗಳನ್ನು ಪತ್ತೆ ಮಾಡಲಾಗಿದ್ದು, ಸಕ್ರಮ ಮಾಡಿಕೊಳ್ಳುವಂತೆ ಸೂಚಿಸ ಲಾಗಿದೆ. 50 ಸಾವಿರಕ್ಕೂ ಹೆಚ್ಚು ನಳಗಳಿಗೆ ಈವರೆಗೂ ಮೀಟರ್ ಅಳವಡಿಸಿಲ್ಲ.
100 ಮೀಟರ್ ರೀಡರ್‌ಗಳು ಮನೆ ಮನೆಗೆ ಹೋಗಿ ನೀರಿನ ಕರ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಎಲ್ ಆ್ಯಂಡ್ ಟಿ ಕಂಪನಿ ಸಹ ಆರು ಗ್ರಾಹಕರ ಸೇವಾ ಕೇಂದ್ರ ತೆರೆದಿದ್ದು, ಸಾರ್ವಜನಿಕರು ಅಲ್ಲಿಯೂ ನೀರಿನ ಕರ ಪಾವತಿಸಬಹುದಾಗಿದೆ.
‘ಸಾರ್ವಜನಿಕರು ಕಡ್ಡಾಯವಾಗಿ ನೀರಿನ ಕರ ಪಾವತಿಸಬೇಕು ಎಂದು ನೆರವು ಸಂಸ್ಥೆಯ 20 ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ಧಾರೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡವರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕವೂ ಮಾಹಿತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಎಂದು ಕೆಯುಐಡಿಎಫ್‌ಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಭಾಮಠ.
‘ಹೆಚ್ಚಿನ ಮೊತ್ತ ಬಾಕಿ ಇರುವುದರಿಂದ ಸೌಲಭ್ಯಗಳನ್ನು ಒದಗಿಸಲು ಸಹ ಹಿನ್ನಡೆಯಾಗುತ್ತದೆ. ಸರ್ಕಾರ ನೀರಿನ ಬಾಕಿ ಕರವನ್ನು ಮನ್ನಾ ಮಾಡಿಲ್ಲ. ಎಲ್ಲರೂ ಕಡ್ಡಾಯವಾಗಿ ಪಾವತಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನೋಟಿಸ್ ಕೊಡಲು ಸಿದ್ಧತೆ: ಅವಳಿ ನಗರದಲ್ಲಿ ಹಲವು ವರ್ಷಗಳಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡವರು ಇದ್ದಾರೆ. ಅವರಿಗೆ ಸದ್ಯದಲ್ಲೇ ನೋಟಿಸ್ ನೀಡಲಾಗುವುದು ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು.
ಸಾರ್ವಜನಿಕರಿಂದ ಶೇ 60ರಷ್ಟು ಬಾಕಿ: ಸಾರ್ವಜನಿಕರು ಶೇ 60ರಷ್ಟು ನೀರಿನ ಕರ ಬಾಕಿ ಉಳಿಸಿಕೊಂಡಿದ್ದರೆ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಇನ್ನುಳಿದ ಕರ ಬರಬೇಕಿದೆ. ಅದನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿದ್ದಾರೆ. ಕೆಲವರು ಜನಪ್ರತಿನಿಧಿಗಳು, ರಾಜಕೀಯ ಮುಖಂಡರಿಂದ ಒತ್ತಡ ಹಾಕಿಸಿ, ಬಾಕಿ ಪಾವತಿಸುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
www.hdmcwater.in ಮೂಲಕ ಆನ್‌ಲೈನ್ ಪೇಮೆಂಟ್
ನೀರಿನ ಬಿಲ್‌ನಲ್ಲಿರುವ ಕ್ಯುಆರ್ ಕೋಡ್ ಬಳಸಿ ಪಾವತಿ
ಕರ್ನಾಟಕ ಒನ್, ಹು–ಧಾ ಒನ್, ಎಲ್ ಆ್ಯಂಡ್ ಟಿ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಾವತಿಗೆ ಅವಕಾಶ
ಮೀಟರ್ ರೀಡರ್‌ಗಳು ಮನೆಗೆ ಬಂದಾಗ ಕರ ಪಾವತಿಸಿ ರಶೀದಿ ಪಡೆಯಬಹುದು
ನೀರು ಸರಬರಾಜು, ಕರ ಪಾವತಿ ಮಾಹಿತಿಗೆ ಸಹಾಯವಾಣಿ: 79966 66247
ಸಮರ್ಪಕ ನೀರು ಸರಬರಾಜು ಮತ್ತು ನಿರ್ವಹಣೆ ಕರ ಸಂಗ್ರಹಣೆಯನ್ನು ಆಧರಿಸಿದೆ. ಹೀಗಾಗಿ ಗ್ರಾಹಕರು ನಿಯಮಿತವಾಗಿ ಕರ ಪಾವತಿಸಿ ಸಹಕರಿಸಬೇಕುಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.