ADVERTISEMENT

ಹುಬ್ಬಳ್ಳಿ: ‘ಕಾರ್‌ ಪಾರ್ಕಿಂಗ್‌ ಕಟ್ಟಡ’ದ ಕಾಮಗಾರಿ ನನೆಗುದಿಗೆ, ಟೆಂಡರ್‌ ರದ್ದು?

ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡ ಕಾಮಗಾರಿ ಸ್ಥಗಿತ, ಮರು ಗುತ್ತಿಗೆಗೆ ಸಿದ್ಧತೆ

ನಾಗರಾಜ್ ಬಿ.ಎನ್‌.
Published 21 ಸೆಪ್ಟೆಂಬರ್ 2025, 5:57 IST
Last Updated 21 ಸೆಪ್ಟೆಂಬರ್ 2025, 5:57 IST
ಹುಬ್ಬಳ್ಳಿ ಹಳೇಕೋರ್ಟ್‌ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ಕಾಮಗಾರಿ ಸ್ಥಗಿತವಾಗಿದೆ
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ ಹಳೇಕೋರ್ಟ್‌ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ಕಾಮಗಾರಿ ಸ್ಥಗಿತವಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ನಗರದ ಹಳೇ ಕೋರ್ಟ್‌ ವೃತ್ತದ ಬಳಿಯ ‘ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡ’ದ ಕಾಮಗಾರಿಯ ಮುಕ್ತಾಯದ ಅವಧಿ ಮೀರಿ ಮೂರು ವರ್ಷ ಕಳೆದಿವೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಿ, ಮರು ಟೆಂಡರ್‌ ಕರೆಯಲು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ 2018ರಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ (ಪಿಪಿಪಿ) ₹50 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಸುರೇಶ ಶೇಜವಾಡಕರ್‌ ಅವರು ಗುತ್ತಿಗೆ ಪಡೆದಿದ್ದರು. 2022ರ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿತ್ತು. ಆದರೆ, ಏಳು ವರ್ಷಗಳಾದರೂ ಶೇ 20ರಷ್ಟು ಕಾಮಗಾರಿ ಸಹ ಪೂರ್ಣವಾಗಿಲ್ಲ.

ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿ ಸ್ಮಾರ್ಟ್‌ಸಿಟಿ ಅಧಿಕಾರಿಗಳು ನೋಟಿಸ್‌ ನೀಡಿ, ದಂಡ ಸಹ ವಿಧಿಸಿದ್ದಾರೆ. ಆದರೂ ಕಾಮಗಾರಿ ನಡೆಯುತ್ತಿಲ್ಲ. ಹೀಗಾಗಿ, ಗುತ್ತಿಗೆ ರದ್ದು ಪಡಿಸಿ, ಮರುಗುತ್ತಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಎದುರಾಗಬಹುದಾದ ತಾಂತ್ರಿಕ ಕಾರಣ ಹಾಗೂ ಕಾನೂನು ಸಮಸ್ಯೆಗಳ ಕುರಿತು ತಜ್ಞರ ಜೊತೆ ಚರ್ಚಿಸುತ್ತಿದ್ದಾರೆ.

ADVERTISEMENT

‘ಕಾಮಗಾರಿಯ ಕಾರ್ಯಾದೇಶ ನೀಡುವಾಗಲೇ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗುತ್ತದೆ. ಪಿಪಿಪಿ ಮಾದರಿ ಕಾಮಗಾರಿ ಆಗಿರುವುದರಿಂದ ನಾಲ್ಕು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ವಿಫಲವಾದ ಹಿನ್ನೆಲೆಯಲ್ಲಿ, ಸಾಕಷ್ಟು ಬಾರಿ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಆದರೂ, ಕಾಮಗಾರಿ ವೇಗ ಪಡೆದುಕೊಂಡಿಲ್ಲ. ನಿಯಮದಂತೆ ₹1.50 ಕೋಟಿ ದಂಡ ಸಹ ವಿಧಿಸಲಾಯಿತು. ಅದಕ್ಕೂ ಎಚ್ಚೆತ್ತುಕೊಂಡಿಲ್ಲ. ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದಲೂ ಆಕ್ರೋಶ ವ್ಯಕ್ತವಾಗುತ್ತಿದ್ದು, ಗುತ್ತಿಗೆ ರದ್ದು ಪಡಿಸಲು ನಿರ್ಧರಿಸಲಾಗಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆ ಪ್ರಕಾರ ಮೂರು ನೆಲಮಹಡಿ, ನಾಲ್ಕು ಮೇಲ್‌ ಮಹಡಿ ಕಟ್ಟಡ ನಿರ್ಮಾಣವಾಗಬೇಕು. ಗುತ್ತಿಗೆ ಪಡೆದವರೇ 32 ವರ್ಷ ಲೀಸ್‌ನಲ್ಲಿ ನಿರ್ವಹಣೆ ಮಾಡಬೇಕು. ಸದ್ಯ ಕೆಳಹಂತದಿಂದ ಎರಡು ಮಹಡಿ ಮಾತ್ರ ಪೂರ್ಣಗೊಂಡಿದ್ದು, ಮೂರನೇ ಮಹಡಿ ಕಾಮಗಾರಿ ಚಾಲನೆಯಲ್ಲಿದೆ. ಗುತ್ತಿಗೆದಾರರು ಈವರೆಗೆ ₹16 ಕೋಟಿ ವೆಚ್ಚಮಾಡಿದ್ದಾರೆ. ಟೆಂಡರ್‌ ರದ್ದಾದಾಗ, ಈವರೆಗೆ ವೆಚ್ಚ ಮಾಡಿದ ಹಣ ಮರುಪಾವತಿಸಲು ಅವಕಾಶವಿದೆಯೇ, ಇಲ್ಲವೇ ಎನ್ನುವ ಕುರಿತು ಪರಿಶೀಲಿಸಲಾಗುವುದು’ ಎಂದರು.

ರುದ್ರೇಶ ಘಾಳಿ
ಗುತ್ತಿಗೆದಾರರು ಹಣದ ಸಮಸ್ಯೆಯಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಮರು ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ
–ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

- ‘ನಿಯಮ ಸಡಿಲಿಸಿ ಮರುಗುತ್ತಿಗೆ ನೀಡಿ’

‘ಏಕಕಾಲದಲ್ಲಿ 290 ಕಾರ್‌ಗಳನ್ನು ನಿಲುಗಡೆ ಮಾಡಬಹುದಾದಂಥ ಯೋಜನೆ ಇದಾಗಿದ್ದು ಹುಬ್ಬಳ್ಳಿ ನಗರಕ್ಕೆ ಅಗತ್ಯವಾಗಿದೆ. ಆದರೆ ಕಾಲಮಿತಿಯಲ್ಲಿ ಪೂರ್ಣಗೊಳಿಸದ ಕಾರಣ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಮೂರು ವರ್ಷದಿಂದ ನೋಟಿಸ್‌ ಎನ್ನುತ್ತಲೇ ಕಾಲಹರಣ ಮಾಡಿದ್ದು ಆಡಳಿತದ ವೈಫಲ್ಯ. ಅರ್ಧಂಬರ್ಧ ನಡೆದ ಕಾಮಗಾರಿಗೆ ಮರುಟೆಂಡರ್‌ ಕರೆದರೆ ಯಾರೂ ಸುಲಭವಾಗಿ ಬರುವುದಿಲ್ಲ. ನಿಯಮಾವಳಿ ಸಡಿಲಿಸಿ ಸೂಕ್ತ ವ್ಯಕ್ತಿ ಅಥವಾ ಕಂಪನಿಗೆ ಗುತ್ತಿಗೆ ನೀಡಿ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಕಂದಗಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.