ADVERTISEMENT

ಧಾರವಾಡ: ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಹೆಸ್ಕಾಂ

ಬಸವರಾಜ ಹವಾಲ್ದಾರ
Published 7 ಜನವರಿ 2022, 7:18 IST
Last Updated 7 ಜನವರಿ 2022, 7:18 IST
   

ಹುಬ್ಬಳ್ಳಿ: ತರಕಾರಿ, ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಷಾಕ್‌ ನೀಡಲು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮವು ಮುಂದಾಗಿದೆ. ನಿಗಮವು ವಿದ್ಯುತ್‌ ಬೆಲೆ ಏರಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.

ನಿಗಮವು 2020–21ರಲ್ಲಿ ₹7,830 ಕೋಟಿ ಆದಾಯ ಗಳಿಸಿದ್ದರೆ, ₹9,182 ಕೋಟಿ ವೆಚ್ಚವಾಗಿದೆ. ₹1,352 ಕೋಟಿ ಆದಾಯದ ಕೊರತೆಯಾಗಿತ್ತು. 2022–23ರಲ್ಲಿ ₹8,890 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ₹10,249 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ₹1,279 ಕೋಟಿ ಆದಾಯದ ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳಲು ಪ್ರತಿ ಯುನಿಟ್‌ ದರ ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿದೆ.

ಕೋವಿಡ್‌–19 ನಿಂದಾಗಿ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿದೆ. ಮೂರನೇ ಅಲೆಯೂ ಬಾಗಿಲಿಗೆ ಬಂದು ನಿಂತಿದೆ. ಈಗಾಗಲೇ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಲಾಕ್‌ಡೌನ್‌ ಆತಂಕ ಕಾಡುತ್ತಿದೆ. ಈ ಹಂತದಲ್ಲಿ ವಿದ್ಯುತ್‌ ದರ ಏರಿಕೆಗೆ ಮುಂದಾಗಿರುವುದಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಗೃಹ ಬಳಕೆ, ವಾಣಿಜ್ಯ ಜತೆಗೆ ಸ್ಥಳೀಯ ಸಂಸ್ಥೆಗಳು ಬಿಲ್‌ ಪಾವತಿಸುವ ಕುಡಿಯುವ ನೀರು ಹಾಗೂ ಬೀದಿ ದೀಪಗಳ ವಿದ್ಯುತ್‌ ಬಳಕೆಯ ದರಗಳಲ್ಲಿ ಹೆಚ್ಚಳಕ್ಕೆ ಹೆಸ್ಕಾಂ ಮುಂದಾಗಿದೆ.

ಯುನಿಟ್‌ ದರ ಕಡಿತ; ಕಿಲೋ ವ್ಯಾಟ್‌ ದರ ಹೆಚ್ಚಳ

ಕೈಗಾರಿಕೆಗೆ ಬಳಸುವ ಪ್ರತಿ ಯುನಿಟ್‌ ದರವನ್ನು ₹7.30 ರಿಂದ ₹6ಕ್ಕೆ ಇಳಿಸಲು ಹೆಸ್ಕಾಂ ಮುಂದಾಗಿದೆ. ಆದರೆ, ನಿಗದಿತ ಶುಲ್ಕವನ್ನು ಪ್ರತಿ ಕಿ.ವ್ಯಾಟ್‌ ದರವನ್ನು ಎರಡು ಪಟ್ಟಿಗೂ ಹೆಚ್ಚು ಮಾಡಲಾಗಿದೆ. ಇದರಿಂದಾಗಿ ಒಟ್ಟಾರಿ ಬಿಲ್‌ನಲ್ಲಿ ಹೆಚ್ಚಳವಾಗಲಿದೆ. ಕಡಿಮೆ ಯುನಿಟ್‌ ಬಳಸುವವರಿಗೆ ಕಿಲೋ ವ್ಯಾಟ್‌ ದರ ಕಡಿಮೆ ಇದ್ದಾಗ ಬಿಲ್‌ ಕಡಿಮೆ ಬರುತ್ತಿತ್ತು. ಈಗ ಕಡಿಮೆ ಬಳಿಸಿದರೂ ಹೆಚ್ಚಿನ ಬಿಲ್‌ ಪಾವತಿಸಬೇಕಾಗುತ್ತದೆ.

ಆಕ್ಷೇಪಣೆಗೆ 30 ದಿನ ಅವಕಾಶ

ಬೆಲೆ ಏರಿಕೆಗೆ ಆಕ್ಷೇಪಣೆ ಸಲ್ಲಿಸ ಬಯುಸವವರು ಫೆ.2ರೊಳಗೆ ಬೆಂಗಳೂರಿನಲ್ಲಿರುವ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಗೆ ಸಲ್ಲಿಸಬಹುದು. ಆಕ್ಷೇಪಣೆಗೆ ಉತ್ತರ ಒದಗಿಸಲು ಅದರ ಒಂದು ಪ್ರತಿಯನ್ನು ನಿಯಂತ್ರಣಾಧಿಕಾರಿ, ನಿಗಮ ಕಚೇರಿ, ಹೆಸ್ಕಾಂ, ಪಿ.ಬಿ. ರಸ್ತೆ, ಹುಬ್ಬಳ್ಳಿ ಇವರಿಗೂ ಸಲ್ಲಿಸಬೇಕು.ಎಲ್ಲ ವಲಯ, ವೃತ್ತ, ವಿಭಾಗೀಯ ಕಚೇರಿಗಳಲ್ಲಿ ಅರ್ಜಿಗಳು ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.