ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ: ಯಾರಾಗಲಿದ್ದಾರೆ ನೂತನ ಮೇಯರ್‌?

ಹಾಲಿ ಮೇಯರ್ ಅವಧಿ ಇದೇ 18ರಂದು ಮುಕ್ತಾಯ; ಆಕಾಂಕ್ಷಿಗಳ ಕಸರತ್ತು

ಸತೀಶ ಬಿ.
Published 4 ಜೂನ್ 2025, 6:40 IST
Last Updated 4 ಜೂನ್ 2025, 6:40 IST
ಹುಬ್ಬಳ್ಳಿಯಲ್ಲಿನ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿಯಲ್ಲಿನ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ನೂತನ ಮೇಯರ್‌ ಮತ್ತು ಉಪಮೇಯರ್ ಯಾರಾಗುವರು ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ಚಟುವಟಿಕೆಗಳು ಗರಿಗೆದರಿವೆ.

ಸದ್ಯ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಲಿ ಮೇಯರ್‌, ಉಪಮೇಯರ್‌ ಅವಧಿ ಇದೇ ತಿಂಗಳ 18ರಂದು ಮುಗಿಯಲಿದೆ. ಅಧಿಸೂಚನೆ ಪ್ರಕಾರ, ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬ’ಗೆ ಮೀಸಲಾಗಿದೆ. ಹೀಗಾಗಿ ಪಾಲಿಕೆಗೆ ಮತ್ತೊಮ್ಮೆ ಮಹಿಳಾ ಸಾರಥ್ಯ ಸಿಗಲಿದೆ.

ಮೇಯರ್‌, ಉಪಮೇಯರ್ ಚುನಾವಣೆ ದಿನಾಂಕ ನಿಗದಿಗೆ ಪಾಲಿಕೆ ಆಯುಕ್ತರು ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಆಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ADVERTISEMENT

82 ಸದಸ್ಯ ಬಲದ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಪಕ್ಷೇತರ ಮತ್ತು ಒಬ್ಬ ಜೆಡಿಎಸ್‌ ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಮೂವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.

ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ಆಗಿರುವುದರಿಂದ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಪಾಲಿಕೆಯಲ್ಲಿ ಬಿಜೆಪಿಯ 15 ಸದಸ್ಯೆಯರು ಇದ್ದಾರೆ. ಪ್ರೀತಿ ಖೋಡೆ (ವಾರ್ಡ್ 66), ಪೂಜಾ ಶೇಜವಾಡಕರ್‌ (ವಾರ್ಡ್ 64), ರಾಧಾಬಾಯಿ ಸಫಾರೆ (ವಾರ್ಡ್ 60),  ಮೀನಾಕ್ಷಿ ವಂಟಮೂರಿ (ವಾರ್ಡ್‌ 57), ರೂಪಾ ಶೆಟ್ಟಿ (ವಾರ್ಡ್‌ 47),  ಶೀಲಾ ಕಾಟ್ಕರ್‌ (ವಾರ್ಡ್ 73) ಪ್ರಮುಖ ಆಕಾಂಕ್ಷಿಗಳು.

ಈ ಹಿಂದಿನ ಅವಧಿಯಲ್ಲಿ ಧಾರವಾಡ, ಹುಬ್ಬಳ್ಳಿ–ಧಾರವಾಡ ಪಶ್ಚಿಮ ಮತ್ತು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಈ ಬಾರಿ ಪೂರ್ವ ಕ್ಷೇತ್ರಕ್ಕೆ ಮೇಯರ್ ಸ್ಥಾನ ನೀಡುವಂತೆ ಬೇಡಿಕೆಗಳು  ಬಂದಿವೆ.

ಆಕಾಂಕ್ಷಿಗಳಲ್ಲಿ ರಾಧಾಬಾಯಿ ಸಫಾರೆ ಹಿರಿಯರಾಗಿದ್ದು, ಅವರು ಈ ಹಿಂದೆ ಒಮ್ಮೆ ಮೇಯರ್ ಆಗಿದ್ದರು. ಉಳಿದ ಎಲ್ಲರೂ ಮೊದಲ ಬಾರಿಗೆ ಪಾಲಿಕೆಗೆ ಆಯ್ಕೆ ಆಗಿದ್ದಾರೆ. ಪೂಜಾ ಶೇಜವಾಡಕರ್ ಅವರ ಪತಿ ಒಮ್ಮೆ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು. ಪ್ರೀತಿ ಖೋಡೆ ಅವರ ಪತಿ ಬಿಜೆಪಿಯ ವಾರ್ಡ್ ಪ್ರಮುಖರಾಗಿದ್ದಾರೆ.

ಉಪಮೇಯರ್ ಸ್ಥಾನದಕ್ಕೆ ಸಂತೋಷ್ ಚವ್ವಾಣ್ ವಾರ್ಡ್ (41), ಶಂಕರ ಶೆಳಕೆ (ವಾರ್ಡ್‌ 8) ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

‘ಪಕ್ಷ ಅವಕಾಶ ನೀಡಿದರೆ, ಅವಳಿ ನಗರದ ಜ್ವಲಂತ ಸಮಸ್ಯೆಗಳ ನಿವಾರಣೆ ಜತೆಗೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದು ಸದಸ್ಯೆ ಪ್ರೀತಿ ಖೋಡೆ ತಿಳಿಸಿದರು.

‘ಅವಳಿ ನಗರದಲ್ಲಿ 24X7 ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅದರ ಜತೆಗೆ ತ್ಯಾಜ್ಯ ವಿಲೇವಾರಿ, ಒಳಚರಂಡಿ ಸಮಸ್ಯೆಯೂ ಇದೆ. ಈ ಬಗ್ಗೆ ಕೆಲಸ ಮಾಡುವ ಯೋಜನೆಯಿದೆ’ ಎಂದು ಪೂಜಾ ಶೇಜವಾಡಕರ್‌ ತಿಳಿಸಿದರು.

ಶೀಲಾ ಕಾಟ್ಕರ್, ಪಾಲಿಕೆ ಸದಸ್ಯೆಯಾಗಿ ಮೂರು ವರ್ಷಗಳಾಗಿವೆ. ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿದೆ. ಅಭಿವೃದ್ಧಿಗೆ ನನ್ನದೇ ಆದ ಯೋಜನೆಗಳಿವೆ ಎಂದು ಹೇಳಿದರು.

ಮೇಯರ್ ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರಿಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅವರು ಶೀಘ್ರ ದಿನಾಂಕ ನಿಗದಿಪಡಿಸುವರು.
ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಪಕ್ಷಗಳ ಬಲಾಬಲ ಬಿಜೆಪಿ;39 ಕಾಂಗ್ರೆಸ್‌;33 ಎಐಎಂಐಎಂ;3 ಜೆಡಿಎಸ್‌;1 ಪಕ್ಷೇತರ;6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.