ADVERTISEMENT

ಭಾರತ್‌ ಬಂದ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಚನ್ನಮ್ಮ ವೃತ್ತದಲ್ಲಷ್ಟೇ ಪ್ರತಿಭಟನೆಯ ಕಾವು, ಮಧ್ಯಾಹ್ನದ ಬಳಿಕ ಜನಜೀವನ ಸಹಜ ಸ್ಥಿತಿಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 13:01 IST
Last Updated 8 ಡಿಸೆಂಬರ್ 2020, 13:01 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಬಸ್‌ ತಡೆದು ಪ್ರತಿಭಟಿಸಿದ ಹೋರಾಟಗಾರರು
ಹುಬ್ಬಳ್ಳಿಯಲ್ಲಿ ಮಂಗಳವಾರ ಬಸ್‌ ತಡೆದು ಪ್ರತಿಭಟಿಸಿದ ಹೋರಾಟಗಾರರು   

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಲಾಗಿದ್ದ ‘ಭಾರತ್‌ ಬಂದ್‌’ಗೆ ವಾಣಿಜ್ಯ ನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ತನಕ ನಡೆದ ಪ್ರತಿಭಟನೆ ಹಾಗೂ ಹೋರಾಟಗಳು ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕಷ್ಟೇ ಸೀಮಿತವಾಗಿದ್ದವು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಸಿಐಟಿಯು, ಸಿಪಿಐ (ಎಂ), ಬೀದಿಬದಿ ವ್ಯಾಪಾರಿಗಳು, ದಲಿತ ಸಂಘಟನೆಗಳು, ಕಾಂಗ್ರೆಸ್‌, ಜೆಡಿಎಸ್‌, ಕೆಪಿಆರ್‍ಎಸ್, ಅಮ್‌ ಆದ್ಮಿ ಪಕ್ಷ, ಎಐಟಿಯುಸಿ, ಹುಬ್ಬಳ್ಳಿ ಆಟೊ ರಿಕ್ಷಾ ‌ಮಾಲೀಕರ ಹಾಗೂ ಚಾಲಕರ ಸಂಘ, ಅಖಿಲ ಭಾರತ ಡಾ. ಅಂಬೇಡ್ಕರ್‌ ದಲಿತ ಆರ್ಮಿ, ಅಖಿಲ ಭಾರತ ವಕೀಲರ ಒಕ್ಕೂಟ, ಹಮಾಲಿ ಕಾರ್ಮಿಕರು ಹೀಗೆ ಅನೇಕ ಸಂಘಟನೆಗಳ ಮುಖಂಡರು ಚನ್ನಮ್ಮ ವೃತ್ತದಲ್ಲಿ ತಮ್ಮ ಸಂಘಟನೆಗಳ ಹಾಗೂ ಪಕ್ಷಗಳ ಬ್ಯಾನರ್‌ಗಳ ಅಡಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ‘ರೈತರ ಪಾಲಿಗೆ ಮರಣಶಾಸನವಾಗಿರುವ ಮಸೂದೆಗಳನ್ನು ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

ಬೆಳಿಗ್ಗೆ ಆರು ಗಂಟೆಯಿಂದ ನಗರದಲ್ಲಿ ಪ್ರತಿಭಟನೆಯ ಕಾವು ಆರಂಭವಾಯಿತು. ಹೊಸೂರಿನ ಬಸ್‌ ಡಿಪೊ ಮುಂದೆ ಪ್ರತಿಭಟನೆ ನಡೆಸಿ ಬಸ್‌ಗಳನ್ನು ಹೊರಗಡೆ ಕಳುಹಿಸಬಾರದು, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸಂಘಟನೆಗಳ ಮುಖಂಡರು ಕೋರಿದರು. ಹೊಸೂರು ವೃತ್ತದ ಬಳಿ ರಸ್ತೆಗೆ ಅಡ್ಡವಾಗಿ ನಿಂತರು. ಹಳೇ ಬಸ್‌ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಪ್ರತಿಭಟಿಸಿದರು. ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಕೆಲಸದ ನಿಮಿತ್ಯ ನಗರಕ್ಕೆ ಬಂದಿದ್ದ ಜನ ನಡೆದುಕೊಂಡೇ ಹೋಗಬೇಕಾಯಿತು.

ADVERTISEMENT

ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಕೆಲ ಹೊತ್ತು ಪೊಲೀಸರ ಜೊತೆ ಮಾತಿನ ಚಕಿಮಕಿ ಕೂಡ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಿದರು. ಚನ್ನಮ್ಮ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಿಂದ ಉರುಳು ಸೇವೆ, ಮಹಿಳಾ ಕಾಂಗ್ರೆಸ್‌ನಿಂದ ಹಸಿರು ಶಾಲ್‌ನ ಮೆರವಣಿಗೆ ನಡೆಯಿತು.

ಅಣುಕು ಪ್ರದರ್ಶನ: ಎಪಿಎಂಸಿಯ ಹಮಾಲಿ ಕಾರ್ಮಿಕರು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಯ ಬಳಿ ಪ್ರತಿಭಟನೆ ನಡೆಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರ ಮುಖವಾಡ ಧರಿಸಿ ಅವರು ರೈತರ ಕೊರಳಿಗೆ ಉರುಳುಹಾಕಿ ಎಳೆದೊಯ್ಯುವ ಅಣುಕು ಪ್ರದರ್ಶನ ಮಾಡುವ ಮೂಲಕ ಹೋರಾಟಗಾರರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಇಂದಿರಾಗಾಜಿನ ಮನೆಯಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪತ್ರ ಬರೆದು ವಿರೋಧ: ಎಎಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು. ಪತ್ರದಲ್ಲಿ ‘ಪ್ರಧಾನಿಯವರೇ ನಿಮ್ಮ ಹಠವನ್ನು ಬಿಡಿ, ಜನವಿರೋಧಿಯಾಗಿ ನಡೆದುಕೊಳ್ಳುವುದನ್ನು ಕಡಿಮೆ ಮಾಡಿ’ ಎನ್ನುವ ಸಂದೇಶಗಳನ್ನು ಬರೆಯಲಾಗಿತ್ತು.

ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರಾದ ಎನ್‌.ಎಚ್‌. ಕೋನರಡ್ಡಿ, ಸದಾನಂದ ಡಂಗನವರ, ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ, ಬಂಗಾರೇಶ ಹಿರೇಮಠ, ಭಾರತಿ ಬದ್ದಿ, ಚೇತನಾ ಲಿಂಗದಾಳ, ಸಂತೋಷ ನರಗುಂದ, ವಿಕಾಸ ಸೊಪ್ಪಿನ, ಶಶಿಕುಮಾರ್ ಸುಳ್ಳದ, ಅನಂತಕುಮಾರ ಭಾರತೀಯ, ಸಿದ್ದು ತೇಜಿ, ಶಿವಣ್ಣ ಹುಬ್ಬಳ್ಳಿ, ಮಹೇಶ ಪತ್ತಾರ, ಅಮೃತ ಇಜಾರಿ, ಬಿ.ಎಸ್.ಸೊಪ್ಪಿನ, ಡಿ.ಜಿ.ಜಂತ್ಲಿ, ಬಿ.ವಿ.ಕೋರಿಮಠ, ಹುಲಿಗೆಮ್ಮ ಚಲವಾದಿ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಅಶೋಕ ಚಲವಾದಿ, ಹನಮಂತಪ್ಪ ಪವಾಡಿ, ಅನ್ನಪೂರ್ಣ ಕುಂಕುರಮಠ, ವಿನಾಯಕ ಗಾಳಿವಡ್ಡರ ಸೇರಿದಂತೆ ಅನೇಕ ಹೋರಾಟಗಾರರು ಭಾಗವಹಿಸಿದ್ದರು.

ಭಾರತ್‌ ಬಂದ್‌; ಹುಬ್ಬಳ್ಳಿಯಲ್ಲಿ ಆಗಿದ್ದೇನು?

* ಹಳೇ ಬಸ್‌ ನಿಲ್ದಾಣದ ಎದುರು ಬಿಆರ್‌ಟಿಎಸ್‌ ಕಾರಿಡಾರ್‌ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು

* ಬೆಳಿಗ್ಗೆ ನಗರ ಸಾರಿಗೆ ಸ್ಥಗಿತ; ದುಪ್ಪಟ್ಟು ಹಣ ಕೇಳಿದ ಆಟೊ ಚಾಲಕರು

* ಚನ್ನಮ್ಮ ವೃತ್ತದಲ್ಲಿ ಚಕ್ಕಡಿ ಬಂಡಿ, ಎತ್ತು ಕಟ್ಟಿಹಾಕಿ ಕೇಂದ್ರದ ನಿಲುವಿಗೆ ವಿರೋಧ

* ಹೊರ ಜಿಲ್ಲೆಗಳ ಬಸ್ ಪ್ರಯಾಣ ಸರಾಗ

* ಅವಳಿ–ನಗರಗಳ ನಡುವೆ ಕೆಲ ಮಾರ್ಗದಲ್ಲಷ್ಟೇ ಸಂಚರಿಸಿದ ಬಿಆರ್‌ಟಿಎಸ್‌ ಬಸ್‌ಗಳು

* ಬೆಳಿಗ್ಗೆ ಕೆಲ ಹೊತ್ತು ಬಂದ್‌ ಆಗಿದ್ದ ಅಂಗಡಿಗಳು, ಮಧ್ಯಾಹ್ನದ ಬಳಿಕ ಎಂದಿನಂತೆ ವ್ಯಾಪಾರ

* ಬಂದ್‌ ಬಗ್ಗೆ ಮೊದಲೇ ಗೊತ್ತಿದ್ದರಿಂದ ಬಸ್‌ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಜನ

* ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ 63 ತಡೆದು ಪ್ರತಿಭಟನೆ

* ಬಾಹ್ಯ ಬೆಂಬಲ ಮಾತ್ರ ನೀಡಿದ್ದ ಹುಬ್ಬಳ್ಳಿ ಆಟೊ ಚಾಲಕರ ಹಾಗೂ ಮಾಲೀಕರ ಸಂಘ

* ಹಳೇ ಹುಬ್ಬಳ್ಳಿ, ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಎಂದಿನಂತೆ ನಡೆದ ವ್ಯಾಪಾರ

* ಚನ್ನಮ್ಮ ವೃತ್ತದಲ್ಲಿ ಮಂಡಕ್ಕಿ ಸವಿದ ಹೋರಾಟಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.