ADVERTISEMENT

ಮುಂಗಾರಿಗೆ ಮೈದುಂಬಿದ ಕೆರೆಗಳು

ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ; ಕೃಷಿ ಚಟುವಟಿಕೆಗೂ ಆಸರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ಮಳೆಗೆ ಮೈದುಂಬಿದ ಬೆಂಗೇರಿ ಕೆರೆಯಲ್ಲಿ ಯುವಕರಿಬ್ಬರು ಕುರಿ ಮರಿಗೆ ಸ್ನಾನ ಮಾಡಿಸಿ ಸಂಭ್ರಮಿಸಿದರು         ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಮಳೆಗೆ ಮೈದುಂಬಿದ ಬೆಂಗೇರಿ ಕೆರೆಯಲ್ಲಿ ಯುವಕರಿಬ್ಬರು ಕುರಿ ಮರಿಗೆ ಸ್ನಾನ ಮಾಡಿಸಿ ಸಂಭ್ರಮಿಸಿದರು         ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ತಡವಾಗಿಯಾದರೂ ಆರಂಭಗೊಂಡ ಮುಂಗಾರು ಮಳೆ, ಸುಡು ಬಿಸಿಲು ಹಾಗೂ ಬರದಿಂದ ತತ್ತರಿಸಿದ್ದ ರೈತರ ಮೊಗದಲ್ಲಿ ಮುಗುಳ್ನಗೆ ತರಿಸಿದೆ. ಎರಡ್ಮೂರು ದಿನಕ್ಕೊಮ್ಮೆ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿ ನಗರ ಹಾಗೂ ಹೊರವಲಯದ ಕೆರೆಗಳಿಗೆ ಜೀವ ಕಳೆ ಬಂದಿದೆ.

ಅಕ್ಷರಶಃ ನೆಲ ಕಂಡಿದ್ದ ಗೋಪನಕೊಪ್ಪದ ಸಂತೋಷನಗರದಲ್ಲಿರುವ ಕೆರೆ, ತೋಳನಕೆರೆ, ಹೊರವಲಯದ ಗೋಕುಲ ಗ್ರಾಮದ ಚಿಕ್ಕೆರೆ ಹಾಗೂ ಕುಡೆಕೆರೆಗಳೀಗ ಮಳೆ ನೀರಿನಿಂದ ಮೈದುಂಬಿಕೊಳ್ಳುತ್ತಿವೆ. ನಗರದ ಪ್ರಮುಖ ಕೆರೆಯಾದ ಉಣಕಲ್‌ನ ಕೆರೆಯ ನೀರಿನ ಮಟ್ಟವೂ ಹೆಚ್ಚಾಗಿದೆ.

ಕೆರೆಗಳಲ್ಲಿ ಮಳೆ ನೀರು ಸಂಗ್ರಹಗೊಂಡ ಬೆನ್ನಲ್ಲೇ, ಅವುಗಳ ಆಸುಪಾಸಿನಲ್ಲಿರುವ ಕೃಷಿ ಭೂಮಿಗಳಲ್ಲಿ ಬಿತ್ತನೆ ಚಟುವಟಿಕೆ ಬಿರುಸಿನಿಂದ ಸಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.

ADVERTISEMENT

ನೀರಿನ ಬವಣೆ ತಪ್ಪಿತು: ‘ಕೆರೆಗೆ ನೀರು ಬರುವುದಕ್ಕೂ ಮುಂಚೆ, ದನಗಳಿಗೆ ನೀರು ಕುಡಿಸಲು ಮನೆಗೆ ಹೋಗಬೇಕಿತ್ತು. ನಾಲ್ಕೈದು ದಿನ ಸುರಿದ ಮಳೆಯಿಂದ ಕೆರೆಗೆ ಸಾಕಷ್ಟು ನೀರು ಹರಿದು ಬಂದಿದೆ’ ಎಂದು ಕುಡೆಕೆರೆ ಸಮೀಪದ ಜಮೀನು ಹೊಂದಿರುವ ವೀರಭದ್ರಪ್ಪ ಗಾಣಿಗೇರ ಹೇಳಿದರು.

‘ಜಾನುವಾರುಗಳಿಗಷ್ಟೇ ಅಲ್ಲದೆ, ಕೃಷಿ ಚಟುವಟಿಕೆಗೂ ಇಲ್ಲಿನ ನೀರನ್ನು ಒಂದಿಷ್ಟು ರೈತರು ಬಳಸಿಕೊಳ್ಳುತ್ತೇವೆ. ಇನ್ನು ಐದಾರು ಸಲ ಜೋರಾಗಿ ಮಳೆ ಸುರಿದರೆ, ಕೆರೆ ಭರ್ತಿಯಾಗುತ್ತದೆ. ಆಗ ಮಳೆಗಾಲ ಮುಗಿದ ಮೂರ್ನಾಲ್ಕು ತಿಂಗಳವರೆಗೂ ನೀರಿಗೆ ಕೊರತೆ ಇರುವುದಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದರು.

ತಗ್ಗಿದ ಹರಿವು:‘ಐತಿಹಾಸಿಕ ಬೆಂಗೇರಿ ಕೆರೆಯಲ್ಲಿ ಯಾವಾಗಲೂ ನೀರು ಇರುತ್ತಿತ್ತು. ಕೆರೆಗೆ ಮಳೆ ನೀರು ಹರಿದು ಬರುತ್ತಿದ್ದ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ಮನೆ ಹಾಗೂ ಬಡಾವಣೆಗಳು ನಿರ್ಮಾಣವಾಗಿರುವುದರಿಂದ ನೀರಿನ ಹರಿವಿನ ಪ್ರಮಾಣ ತಗ್ಗಿತು. ಹಾಗಾಗಿ, ಬೇಸಿಗೆಯಲ್ಲಿ ನೀರು ತಳಮಟ್ಟಕ್ಕಿಳಿಯುತ್ತದೆ’ ಎಂದು ಸಂತೋಷನಗರ ನಿವಾಸಿ ರಂಗಪ್ಪ ಸುರತಾನಿ ಹೇಳಿದರು.

‘ವಾರದ ಹಿಂದೆ ಸುರಿದ ಮಳೆಯಿಂದಾಗಿ ಕೆರೆ ಅರ್ಧದಷ್ಟು ತುಂಬಿದೆ. ಕೆರೆಗೆ ಮಳೆ ನೀರಿನ ಹರಿವು ಹಿಂದಿನಷ್ಟು ಸರಾಗವಾಗಿಲ್ಲದಿದ್ದರೂ, ಒಂದು ಮಟ್ಟಿಗೆ ಪರವಾಗಿಲ್ಲ. ಈ ಭಾಗದ ದನಕರುಗಳ ನೀರಿನ ಮೂಲವಾಗಿರುವ ಈ ಕೆರೆಯನ್ನು ತುಂಬಿದಾಗ ನೋಡುವುದೇ ಆನಂದ’ ಎಂದು ತಿಳಿಸಿದರು.

ಕೆರೆಯೊಡಲಿಗೆ ಒಳಚರಂಡಿ ನೀರು:ವಾರ್ಡ್ ಸಂಖ್ಯೆ 37ರ ವ್ಯಾಪ್ತಿಗೆ ಬರುವ ಚಿಕ್ಕೆರೆಗೆ ಜನವಸತಿ ಪ್ರದೇಶದ ಒಳಚರಂಡಿ ನೀರು ಹರಿದು ಕಲುಷಿತಗೊಳ್ಳುತ್ತಿದೆ. ಜಾನುವಾರು ಹಾಗೂ ಕೃಷಿ ಚಟುವಟಿಕೆಗಳಿಗೆ ಈ ಕೆರೆ ಆಸರೆಯಾಗಿದೆ.

ಕೆರೆ ದಂಡೆಗೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಮೂರ್ನಾಲ್ಕು ಒಳಚರಂಡಿಯ ಚೇಂಬರ್‌ಗಳನ್ನು ಅಳವಡಿಸಲಾಗಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಆಗಾಗ ತೆರೆದುಕೊಳ್ಳುತ್ತವೆ. ಇದರಿಂದಾಗಿ, ಕೊಳಕು ನೀರು ರಸ್ತೆ ಮೇಲೆ ಹರಿದು ನೇರವಾಗಿ ಕೆರೆಯ ಒಡಲು ಸೇರುವುದು ಮಾಮೂಲಿಯಾಗಿದೆ.

ಒಳಚರಂಡಿಯ ನೀರಿನ ವಾಸನೆಗೆ ರಸ್ತೆ ಬದಿ ಮನೆಯವರು ನರಕಯಾತನೆ ಅನುಭವಿಸಬೇಕಾಗಿದೆ. ಪಾಲಿಕೆಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಚೇಂಬರ್ ತೆರೆದುಕೊಂಡಾಗ ತಕ್ಷಣ ಯಾರೂ ಬರುವುದಿಲ್ಲ. ಅವರ ಮನಸ್ಸಿಗೆ ತೋಚಿದಾಗ ಬಂದು ರಿಪೇರಿ ಮಾಡಿ ಹೋಗುತ್ತಾರೆ ಎಂದು ಸ್ಥಳೀಯರು ದೂರಿದರು.

*
ಈ ತಿಂಗಳೇನಾದರೂ ಮುಂಗಾರು ಮಳೆ ಕೈ ಕೊಟ್ಟಿದ್ದರೆ, ಕೆರೆಯಲ್ಲಿದ್ದ ಅಲ್ಪ ನೀರು ಕೂಡ ಹಿಂಗಿ ಹೋಗುತ್ತಿತ್ತು. ಅದೃಷ್ಟಕ್ಕೆ ಎರಡ್ಮೂರು ಸಲ ಸುರಿದ ಜೋರು ಮಳೆಗೆ ಕೆರೆ ಒಂದು ಮಟ್ಟಿಗೆ ತುಂಬಿತು
– ರಂಗಪ್ಪ ಸುರತಾನಿ, ಸಂತೋಷನಗರ ನಿವಾಸಿ

*
ಕುಡೆಕೆರೆ ನೀರು ಬರಿದಾಗಿದ್ದರಿಂದ ದನಗಳಿಗೆ ನೀರು ಕುಡಿಸಲು ಮನೆಗೆ ಹೋಗಬೇಕಿತ್ತು. ಇದೀಗ ಮಳೆಗೆ ಕೆರೆಗೆ ನೀರು ಹರಿದು ಬಂದಿದ್ದು, ದನಗಳಿಗೆ ಇಲ್ಲೇ ನೀರು ಕುಡಿಸುತ್ತೇವೆ
– ಲಲಿತವ್ವ, ಗೋಕುಲ

*
ವಾರದಿಂದ ಸುರಿದ ಮಳೆಗೆ ಚಿಕ್ಕೆರೆ ತುಂಬಿಕೊಳ್ಳುತ್ತಿದೆ. ಆದರೆ, ಚೇಂಬರ್‌ ನೀರು ಕೆರೆಗೆ ಹರಿಯುವ ಮೂಲಕ, ಆ ನೀರನ್ನು ಕಲುಷಿತಗೊಳಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು
– ಈಶ್ವರಪ್ಪ ಹಡಪದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.