ADVERTISEMENT

ಹೊರಜಿಲ್ಲೆಗಳಿಂದ ಹುಬ್ಬಳ್ಳಿ ನಗರಕ್ಕೆ ಬರುವ ಪ್ರಯಾಣಿಕರು NWKRTCಯಿಂದ ಹೈರಾಣ

ಮಹಮ್ಮದ್ ಶರೀಫ್ ಕಾಡುಮಠ
Published 24 ಡಿಸೆಂಬರ್ 2022, 4:44 IST
Last Updated 24 ಡಿಸೆಂಬರ್ 2022, 4:44 IST
ನಿಲುಗಡೆ ವ್ಯವಸ್ಥೆ ಇಲ್ಲದ ಹೊಸೂರು ಕ್ರಾಸ್‌ ಬಳಿ ಬಸ್‌ ಹತ್ತುತ್ತಿರುವ ಪ್ರಯಾಣಿಕರು
ನಿಲುಗಡೆ ವ್ಯವಸ್ಥೆ ಇಲ್ಲದ ಹೊಸೂರು ಕ್ರಾಸ್‌ ಬಳಿ ಬಸ್‌ ಹತ್ತುತ್ತಿರುವ ಪ್ರಯಾಣಿಕರು   

ಹುಬ್ಬಳ್ಳಿ:ಹಾವೇರಿ, ದಾವಣಗೆರೆ‌‌, ಉತ್ತರ ಕನ್ನಡ,ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಿಂದ ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಹುಬ್ಬಳ್ಳಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ನಿತ್ಯ ಸಾವಿರಾರು ಮಂದಿ ವಾಯವ್ಯ ಸಾರಿಗೆ ಸಂಸ್ಥೆಯ (NWKRTC) ಬಸ್‌ಗಳಲ್ಲಿ ನಗರಕ್ಕೆ ಬಂದು, ಎಲ್ಲಿ ಇಳಿಯಬೇಕು ಎಂದು ಗೊತ್ತಾಗದೆ ಪರದಾಡುವುದು ಸಾಮಾನ್ಯವಾಗಿದೆ.

ನಗರದಲ್ಲಿ ನಿಗದಿತ ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲುಗಡೆ ವ್ಯವಸ್ಥೆ ಇಲ್ಲ. ಒಂದೇ ನಿಲ್ದಾಣಕ್ಕೆ ಮೂರು, ನಾಲ್ಕು ಮಾರ್ಗವಾಗಿ ಬಸ್‌ಗಳು ಬರುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಂಸ್ಥೆಯ ಬಗ್ಗೆ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅವ್ಯವಸ್ಥೆಯನ್ನೆ ವ್ಯವಸ್ಥೆಯನ್ನಾಗಿ ಮಾಡಿಕೊಂಡಿರುವNWKRTC ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಕೊಡುವ ಬಗ್ಗೆ, ಕಾಲಕಾಲಕ್ಕೆ ಸುಧಾರಣೆಗಳನ್ನು ಕೊಡುವುದನ್ನು ಮರೆತು ಕೂತಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ADVERTISEMENT

ಹಾವೇರಿಯಿಂದ ಬರುವ ಬಸ್ ಹುಬ್ಬಳ್ಳಿ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಿಂದ ಕಮರಿಪೇಟೆ ಪೊಲೀಸ್ ಠಾಣೆ ಹತ್ತಿರ ಬಂದು, ಹೊಸ ಬಸ್‌ ನಿಲ್ದಾಣಕ್ಕೆ ತೆರಳುತ್ತದೆ. ಇನ್ನೊಂದು ಬಸ್ ಗಬ್ಬೂರ ಬೈಪಾಸ್‌ನಿಂದ ಸಾಗಿದರೆ, ಮತ್ತೊಂದು ಚನ್ನಮ್ಮ ಸರ್ಕಲ್ ಸುತ್ತಿ ಬರುತ್ತದೆ. ಹುಬ್ಬಳ್ಳಿಯಿಂದ ವಿವಿಧೆಡೆ ಹೊರಡುವ ಬಸ್‌ಗಳೂ ಇದೇ ರೀತಿ ಸಂಚರಿಸುತ್ತವೆ. ನಿರ್ದಿಷ್ಟ ನಿಲುಗಡೆಯ ಪ್ರದೇಶ ಇಲ್ಲದೆ, ಎಲ್ಲೆಂದರಲ್ಲಿ ಬಸ್‌ಗಳು ಚಲಿಸುತ್ತವೆ. ಇದರಿಂದಾಗಿ, ಎಲ್ಲಿ ಇಳಿಯಬೇಕು ಹಾಗೂ ಕಾಯಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.

‘ಚಾಲಕರು ತಮಗೆ ಇಷ್ಟ ಬಂದಲ್ಲಿ ಬಸ್ ನಿಲ್ಲಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಊರಿನ ಬಸ್ ಹಿಡಿಯುವುದಕ್ಕೆ ಅಥವಾ ಕೆಲಸಕ್ಕಾಗಿ ಆಟೊ ಹಿಡಿದುಕೊಂಡು, ಇಲ್ಲವೇ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳನ್ನು ಕರೆದುಕೊಂಡು ಬಂದು ಹಲವು ಬಾರಿ ಸಮಸ್ಯೆ ಎದುರಿಸಿದ್ದೇನೆ’ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಸುನಿತಾ ಸೊಲಬಕ್ಕನವರ ಬೇಸರ ವ್ಯಕ್ತಪಡಿಸುತ್ತಾರೆ.

‘ಸರ್ಕಾರಿ ಬಸ್‌ಗಳು ಜನರಿಗೆ ಸರಿಯಾದ ಸೇವೆ ಒದಗಿಸುತ್ತಿಲ್ಲ. ಚಾಲಕರು, ನಿರ್ವಾಹಕರಾಗಲಿ, ಸಂಸ್ಥೆಯ ಆಡಳಿತ ಮಂಡಳಿಯಾಗಲಿ ಸೇವೆಯ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಕಡೆ ಬರುವ ಬಸ್‌ಗಳೂ ಹಳೆಯವು. ದೂರ ಪ್ರಯಾಣ ಇರುವುದರಿಂದ ಉತ್ತಮ ಸ್ಥಿತಿಯ ಬಸ್‌ಗಳನ್ನು ಒದಗಿಸಬೇಕು’ ಎಂಬುದು ಅವರ ಆಗ್ರಹ.

ನಿತ್ಯ ಪರದಾಟಕ್ಕೆ ಪರಿಹಾರ ಒದಗಿಸಲು ವಾಯವ್ಯ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯು ನಿರ್ದಿಷ್ಟ ಸ್ಥಳಗಳಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಮಾಡಬೇಕು. ನಿಲುಗಡೆ ಸ್ಥಳಗಳಲ್ಲಿ ಶೌಚಾಲಯಗಳು ಒಳಗೊಂಡಂತೆ ಬಸ್‌ ಶೆಲ್ಟರ್ ಮಾಡಬೇಕು, ಸುಸಜ್ಜಿತ ಬಸ್‌ಗಳನ್ನು ಓಡಿಸಬೇಕುಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.

*

‘ಹೊರಜಿಲ್ಲೆಯಿಂದ ಬರುವವರಿಗೆ ಬಸ್‌ ನಿಲುಗಡೆ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸಲು ತೊಡಕುಗಳಿರಬಹುದು. ತಾತ್ಕಾಲಿಕ ನಿಲುಗಡೆಗೆ ಏನು ಸಮಸ್ಯೆ?’

ಡಾ. ಪಾಂಡುರಂಗ ಪಾಟೀಲ, ಮಾಜಿ ಮೇಯರ್, ಹು–ಧಾ ಪಾಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.