ADVERTISEMENT

ಹುಬ್ಬಳ್ಳಿ: ಗಲಭೆ ಪ್ರಕರಣದ ಆರೋಪಿ ಬಂಧನ– ಪೊಲೀಸ್ ಠಾಣೆ ಎದುರು ವಿಎಚ್‌ಪಿ ಧರಣಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:22 IST
Last Updated 1 ಜನವರಿ 2024, 16:22 IST
<div class="paragraphs"><p>ಗಲಭೆ ಪ್ರಕರಣದ ಆರೋಪಿ ಬಂಧನ– ಪೊಲೀಸ್ ಠಾಣೆ ಎದುರು ವಿಎಚ್‌ಪಿ ಧರಣಿ</p></div>

ಗಲಭೆ ಪ್ರಕರಣದ ಆರೋಪಿ ಬಂಧನ– ಪೊಲೀಸ್ ಠಾಣೆ ಎದುರು ವಿಎಚ್‌ಪಿ ಧರಣಿ

   

ಹುಬ್ಬಳ್ಳಿ: 1992ರ ಗಲಭೆ ಪ್ರಕರಣವೊಂದರಲ್ಲಿ ಪಾಲ್ಗೊಂಡ ಆರೋಪದ ಮೇಲೆ ಹಿಂದೂ ಕಾರ್ಯಕರ್ತನನ್ನು ಬಂಧಿಸಿರುವುದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರು ಸೋಮವಾರ ನಗರದ ಶಹರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮ, ಜಯರಾಮ ಜಯ ಜಯ ರಾಮ ಭಜನೆ ಮಾಡುತ್ತ ಧರಣಿ ನಡೆಸಿದರು. ರಾಮಮಂದಿರ ಉದ್ಘಾಟನೆ ಸಂಭ್ರಮಾಚರಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಡಿಸಿಪಿ ರಾಜೀವ.ಎಂ ಮತ್ತು ಎಸಿಪಿ ಬಲ್ಲಪ್ಪ ನಂದಗಾವಿ ಅವರು ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿರು. ‘ಇನ್‌ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ್ ಅವರು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ. ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.

ಸಂಘಟನೆ ಮುಖಂಡ ಸಂಜಯ ಬಡಸ್ಕರ್, 'ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂಭ್ರಮದಲ್ಲಿ ದೇಶದ ಜನತೆಯಿದ್ದರೆ, ಹುಬ್ಬಳ್ಳಿಯಲ್ಲಿ ಪೊಲೀಸರು ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರಿಗೆ ಸಮಸ್ಯೆ ಮಾಡಬೇಕು ಎನ್ನುವುದೇ ಅವರ ಏಕೈಕ ಉದ್ದೇಶ' ಎಂದು ಆರೋಪಿಸಿದರು.

'ಬಂಧಿತ ಹಿಂದೂ ಕಾರ್ಯಕರ್ತ ಆಟೊ ಚಾಲಕನಾಗಿದ್ದು, ಸದ್ಯ ಅವರ ಕೈ ಆಪರೇಷನ್ ಮಾಡಲಾಗಿದೆ. ಮಾನವೀಯತೆ ಇಲ್ಲದೆ ದರ್ಪ ತೋರಿಸಿದ್ದಾರೆ. 31 ವರ್ಷಗಳ ಕಾಲ ಸುಮ್ಮನಿದ್ದ ಪೊಲೀಸರಿಗೆ, ರಾಮ ಮಂದಿರ ಉದ್ಘಾಟನೆ ಸಮಯದಲ್ಲಿಯೇ ಅವನನ್ನು ಬಂಧಿಸಬೇಕಿತ್ತೆ? ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು' ಎಂದು ಪ್ರಶ್ನಿಸಿದರು.

ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, 'ಪೊಲೀಸರು ಕೈಯ್ಯಾರೆ ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್'ಸ್ಪೆಕ್ಟರ್ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. 31 ವರ್ಷಗಳ ನಂತರ ಸಾಮಾನ್ಯ ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಹಿಂದುಗಳನ್ನು ಹೆದರಿಸುತ್ತಿದ್ದಾರೆ. ಅಮಾಯಕರನ್ನು ಬಂಧಿಸಬೇಡಿ ಎನ್ನುವುದು ನಮ್ಮ ಉದ್ದೇಶ' ಎಂದರು.

ಸುಬ್ರಹ್ಮಣ್ಯ ಶಿರಕೋಳ, ರಂಗಾ ಕಟಾರೆ, ರಮೇಶ ಕದಂ, ಅನೂಪ್ ಬಿಜವಾಡ, ರಾಜು ಕುಂದನಹಳ್ಳಿ, ಮಂಜು ಕಲಾಲ, ಶಿವಾನಂದ ಜತ್ತಿಗೇರಿ, ರಾಜು ಜರತಾರಘರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.