ADVERTISEMENT

ಅಮರಗೋಳದ ‘ಸ್ನೇಕ್ ನಾಗರಾಜ’: ಎರಡು ಬಾರಿ ಕೋಮಾಸ್ಥಿತಿಗೆ ತಲು‍ಪಿದ್ದ ಉರಗ ರಕ್ಷಕ

ಹಾವು ಕಚ್ಚಿದ್ದರಿಂದ‌ ಎರಡು ಬಾರಿ ಕೋಮಾಸ್ಥಿತಿಗೆ ತಲು‍ಪಿದ್ದ ಉರಗ ರಕ್ಷಕ

ರವಿ ಎಸ್.ಬಳೂಟಗಿ
Published 19 ಡಿಸೆಂಬರ್ 2021, 4:44 IST
Last Updated 19 ಡಿಸೆಂಬರ್ 2021, 4:44 IST
ನಾಗರಹಾವು ಸೆರೆಹಿಡಿಯುತ್ತಿರುವ ನಿಂಗಪ್ಪ ಅಪ್ಪಣ್ಣವರ
ನಾಗರಹಾವು ಸೆರೆಹಿಡಿಯುತ್ತಿರುವ ನಿಂಗಪ್ಪ ಅಪ್ಪಣ್ಣವರ   

ಹುಬ್ಬಳ್ಳಿ: ನವನಗರ ಹಾಗೂ ಸುತ್ತಲಿನ‌ ಬಡಾವಣೆಗಳಲ್ಲಿ ಹಾವು ಕಾಣಿಸಿಕೊಂಡರೆ ನೆನಪಾಗುವ ಹೆಸರು ಸ್ನೇಕ್ ನಾಗರಾಜ. ಬಾಲ್ಯದಲ್ಲಿ ಹುಟ್ಟಿಕೊಂಡ ಉರಗಗಳ‌ ಆಸಕ್ತಿ‌ ಸಾವಿರಾರು ಹಾವುಗಳ‌ ರಕ್ಷಣೆ‌ಗೆ ಪ್ರೇರಣೆಯಾಗಿದೆ.

ಅಮರಗೋಳದ ನಿವಾಸಿ ನಿಂಗಪ್ಪ ಕೃಷ್ಣಪ್ಪ ಅಪ್ಪಣ್ಣವರ ಅವರು ‘ಸ್ನೇಕ್ ನಾಗರಾಜ’ ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ. 13 ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸೆರೆಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈಗಲೂ ನಿತ್ಯ 3ರಿಂದ 4 ಹಾವುಗಳನ್ನು ಹಿಡಿಯುತ್ತಾರೆ.

ಅಮರಗೋಳ, ಗಾಮನಕಟ್ಟಿ, ರಾಯಾಪುರ ಹಾಗೂ ಹೆಬ್ಬಳ್ಳಿ ಸುತ್ತಲಿನ ಬಡಾವಣೆಗಳ ಜನರಿಗೆ ಇವರು ಚಿರಪರಿಚಿತ. ಅತಿಯಾದ ಸೆಖೆಗೆ ಹಾವುಗಳು ನೆಲದೊಡಲು ಬಿಟ್ಟು ಹೊರಗೆ ಬರುತ್ತವೆ. ಆಶ್ರಯ ಸಿಗದೆ ಇದ್ದಾಗ ಮನೆಗಳ ಹಿತ್ತಲು, ಕಾಂಪೌಂಡ್ ಮೂಲೆ, ಪಾದರಕ್ಷೆ ಬಿಡುವ ಸ್ಥಳ, ಟೈರ್‌ನೊಳಗೆ, ಕಲ್ಲುಗಳ ಸಂದಿಯಲ್ಲಿ ಅವಿತಿರುತ್ತವೆ. ಇವುಗಳನ್ನು‌ ಕಂಡ ಮನೆಗಳ ಮಾಲೀಕರು‌ ಸಹಜವಾಗಿಯೇ ಗಾಬರಿಗೊಂಡು ಕೊಲ್ಲಲು‌ ಮುಂದಾಗುವದುಂಟು. ಆದರೆ, ಕೆಲವರಿಗೆ ‘ಸ್ನೇಕ್ ನಾಗರಾಜ’ ಅವರು ಥಟ್ ಅಂತಾ ನೆನಪಾಗುತ್ತಾರೆ.

ADVERTISEMENT

ಇಂಥ ಕಾರ್ಯಕ್ಕಾಗಿ ಪ್ಲಾಸ್ಟಿಕ್ ಡಬ್ಬಿ, ಚೀಲ, ಹಾವು ಹಿಡಿಯ‌ ಕಬ್ಬಿಣದ ಸರಳಿನೊಂದಿಗೆ ಅವರು ಸದಾ ಸಿದ್ಧವಾಗಿರುತ್ತಾರೆ. ಮೊಬೈಲ್‌ಗೆ ಕರೆ ಬಂದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಹಾವನ್ನು ಹಿಡಿದು ನಿವಾಸಿಗಳು‌ ನಿಟ್ಟುಸಿರು ಬಿಡುವಂತೆ ಮಾಡುತ್ತಾರೆ. ಸೆರೆಹಿಡಿದ ಹಾವುಗಳನ್ನು ದಾಂಡೇಲಿ, ಕಲಘಟಗಿಯ‌ ಕಾಡುಗಳಿಗೆ ಬಿಟ್ಟು ಬರುತ್ತಾರೆ. ಹಾವುಗಳ ಚಿತ್ರಗಳಿಂದಲೇ ಬೈಕ್ ಅಲಂಕಾರ ಮಾಡಿದ್ದು, ಅದರ ಮೇಲೆ ನಂಬರ್ ಸಹ ಬರೆಯಿಸಿದ್ದಾರೆ.

ಪ್ರತಿ‌ ಬಾರಿ ಹಾವು ಹಿಡಿದಾಗಲೂ‌ ಅದನ್ನು ಪುಸಕ್ತದಲ್ಲಿ ನಮೂದಿಸುವ ಹವ್ಯಾಸವನ್ನು ಇವರು ಬೆಳೆಸಿಕೊಂಡಿದ್ದರು. ಇಲ್ಲಿವರೆಗೂ ಹಾವುಗಳನ್ನು ಹಿಡಿದ ದಾಖಲೆ ಇವರ ಬಳಿಯಿತ್ತು. ಒಮ್ಮೆ ನಾಗರಹಾವು ಕಚ್ಚಿದ್ದರಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಇದರಿಂದ ಆತಂಕಗೊಂಡ ಕುಟುಂಬದವರು ಮನೆಯಲ್ಲಿದ್ದ ಪುಸಕ್ತಗಳನ್ನು ಸುಟ್ಟು ಹಾಕಿದರು. ಚೇತರಿಸಿಕೊಂಡ‌ ಬಳಿಕ ಹಾವು ಹಿಡಿಯಬಾರದು ಎಂದು ತಾಕೀತು ಮಾಡಿದ್ದರು. ಇದರಿಂದಾಗಿ‌ ಕೆಲ ವರ್ಷ ಅವರು ತಮ್ಮ‌ ಹವ್ಯಾಸಕ್ಕೆ ವಿರಾಮ ನೀಡಿದ್ದರು.

ಕೆಲವು ತಿಂಗಳ ನಂತರ ಅವರ‌ ಮನೆಯಲ್ಲಿಯೇ ಕೇರೆ ಹಾವೊಂದು ಕಾಣಿಸಿಕೊಂಡಿತು. ಅದನ್ನು ತಾವೇ ಹಿಡಿದರು. ನಂತರ‌ ಕುಟುಂಬದವರ ಮನವೊಲಿಸಿ ಹಾವುಗಳ ರಕ್ಷಣೆಯಲ್ಲಿ ಮತ್ತೆ ತೊಡಗಿಕೊಂಡರು.

‘20ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿವೆ. 13 ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದ್ದಿದ್ದೇನೆ. ಇಂತಿಷ್ಟೇ ಹಣ ನೀಡುವಂತೆ ಬೇಡಿಕೆ ಇಡುವುದಿಲ್ಲ. ಅವರು ಕೊಟ್ಟಷ್ಟು ಪಡೆಯುವೆ. ದೂರದ ಊರಾಗಿದ್ದರೆ ಕನಿಷ್ಠ ಪೆಟ್ರೋಲ್ ಖರ್ಚಾದರೂ ನೀಡಬೇಕು’ ಎನ್ನುತ್ತಾರೆ ಅವರು.

ಅವರ‌ ಸಂಪರ್ಕ: 91644 46147

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.