ADVERTISEMENT

ಹುಬ್ಬಳ್ಳಿ ಸಾರಿಗೆ | ‘ಅಮೃತ’ ವರ್ಷ: ಸಂಸ್ಥೆ ಬೆಳವಣಿಗೆ ಹಾದಿಯ ಅವಲೋಕನ

​ಪ್ರಜಾವಾಣಿ ವಾರ್ತೆ
Published 1 ಮೇ 2025, 5:40 IST
Last Updated 1 ಮೇ 2025, 5:40 IST
ಗದಗ ಸಿಟಿ ಬಸ್‌ ಸಂಚಾರ ಪ್ರಾರಂಭೋತ್ಸವದಲ್ಲಿ ಆಗಿನ ಶಾಸಕ ಕೆ.ಪಿ.ಗದಗ, ಸಾರಿಗೆ ಅಧಿಕಾರಿ ರಾಮಚಂದ್ರ ಧೋಂಗಡೆ ಪಾಲ್ಗೊಂಡಿದ್ದರು (ಸಂಗ್ರಹ ಚಿತ್ರ)
ಗದಗ ಸಿಟಿ ಬಸ್‌ ಸಂಚಾರ ಪ್ರಾರಂಭೋತ್ಸವದಲ್ಲಿ ಆಗಿನ ಶಾಸಕ ಕೆ.ಪಿ.ಗದಗ, ಸಾರಿಗೆ ಅಧಿಕಾರಿ ರಾಮಚಂದ್ರ ಧೋಂಗಡೆ ಪಾಲ್ಗೊಂಡಿದ್ದರು (ಸಂಗ್ರಹ ಚಿತ್ರ)    

ಧಾರವಾಡ: ಹುಬ್ಬಳ್ಳಿ ಸಾರಿಗೆ ಸೇವೆಗೆ ಈಗ ಅಮೃತ ವರ್ಷ. ಸ್ವಾತಂತ್ರ್ಯಾ ನಂತರ ಸ್ಥಾಪನೆಯಾದ ಮುಂಬೈ (ಬಾಂಬೆ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಬಿಎಸ್‌ಆರ್‌ಟಿಸಿ) 1951 ಮೇ 1ರಂದು ಹುಬ್ಬಳ್ಳಿಯಲ್ಲಿ ಉಪವಿಭಾಗ ಆರಂಭಿಸಿತು.

1948ರಲ್ಲಿ ಬಿಎಸ್‌ಆರ್‌ಟಿಸಿ ಅಸ್ವಿತ್ವಕ್ಕೆ ಬಂದಿತ್ತು. ಆಗ ಬಿ.ಜಿ. ಖೇರ್‌ ಅವರು ಮುಂಬೈ ರಾಜ್ಯದ ಮುಖ್ಯಮಂತ್ರಿ, ಮೊರಾರ್ಜಿ ದೇಸಾಯಿ ಅವರು ಸಾರಿಗೆ ಸಚಿವರಾಗಿದ್ದರು. 1948ರಲ್ಲಿ ಮೊದಲಿಗೆ ವಿಜಯಪುರ ವಿಭಾಗ, 1949ರಲ್ಲಿ ಬೆಳಗಾವಿ ವಿಭಾಗ ಆರಂಭವಾದವು. 1950ರಲ್ಲಿ ಹುಬ್ಬಳ್ಳಿಯಲ್ಲಿ ನಿಯಂತ್ರಣ ಘಟಕ ಇತ್ತು, ನಂತರ 1951 ಮೇ 1ರಂದು ಹುಬ್ಬಳ್ಳಿ ಉಪವಿಭಾಗ ಆರಂಭವಾಯಿತು.

ಈ ವಿಭಾಗ ಆರಂಭವಾದಾಗ ಗದಗ, ಲಕ್ಷ್ಮೇಶ್ವರ, ಸವಣೂರು ಹಾಗೂ ಹುಬ್ಬಳ್ಳಿ ಡಿಪೊ ಇದ್ದವು. ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಗದುಗಿನ ಶಾಂತಪ್ಪಣ್ಣ ಯೆಳಮಲಿ ಅವರು ಗದಗ ಡಿಪೊಕ್ಕೆ ಪ್ರಾಮುಖ್ಯತೆ ನೀಡಿದ್ದರು.

ADVERTISEMENT

1951ರಲ್ಲಿ ಜೆ.ಆರ್‌. ಇರಾಣಿ ಅವರು ಡೆಪ್ಯುಟಿ ಡಿವಿಜನಲ್‌ ಕಂಟ್ರೋಲರ್‌ ಆಗಿದ್ದರು. ಮೇಜರ್‌ ಜನರಲ್‌ ಯಂಗ್‌ ಎಂಬವರು ಜನರಲ್‌ ಮ್ಯಾನೇಜರ್‌, ಪ್ಯಾಟಿನ್‌ಸನ್‌ ಎಂಬುವರು ಚೀ‌ಫ್‌ ಮೆಕ್ಯಾನಿಕಲ್‌ ಎಂಜಿನಿಯರ್, ಆರ್‌.ಇ. ವೇಟ್ಸ್‌ ಎಂಬುವರು ಚೀಫ್‌ ಟ್ರಾಫಿಕ್ ಮ್ಯಾನೇಜರ್‌ ಆಗಿದ್ದರು.

ಹುಬ್ಬಳ್ಳಿಯ ವಿಭಾಗದ ಕಚೇರಿ ನಾಯಕ್‌ ಕಟ್ಟಡದಲ್ಲಿತ್ತು. ಇರಾಣಿ ಅವರು ಸೈಕಲ್‌ನಲ್ಲಿ ಕಚೇರಿಗೆ ಓಡಾಡುತ್ತಿದ್ದರು. ನಂತರ ವಿಭಾಗ ಕಚೇರಿ ಕೆಎಂಸಿ ಸಮೀಪದ ಕಟ್ಟಡಕ್ಕೆ ಸ್ಥಳಾಂತರವಾಯಿತು. ಮಹಾರಾಷ್ಟ್ರದ ಸಿಬ್ಬಂದಿಯೇ ಹೆಚ್ಚು ಇದ್ದರು. ಅವರ ಭಾಷೆ ಮರಾಠಿಯಾಗಿದ್ದರಿಂದ ಕನ್ನಡದಲ್ಲಿ ಸಂವಹನ ಕಷ್ಟವಾಗುತ್ತಿತ್ತು. ವೇಳಾಪಟ್ಟಿ ಸಿದ್ಧತೆ, ಸಂವಹನ, ವಿಭಾಗದ ಚಟುವಟಿಕೆಗಳ ಕುರಿತು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೆ. ‘ಸ್ಟೇಜ್‌ ಪ್ಲಾನ್‌’, ವಿಭಾಗದ ಕಾರ್ಯಯೋಜನೆಗಳಿಗೆ ಬಾಂಬೆಯ ವರ್ಲಿಯಲ್ಲಿದ್ದ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯಬೇಕಿತ್ತು.

ಹುಬ್ಬಳ್ಳಿ–ದುರ್ಗದಬೈಲ್‌ ಸಿಟಿ ಬಸ್‌ (ನಗರ ಸಾರಿಗೆ) ಆರಂಭಿಸಲಾಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ –ಹೊಸಯಲ್ಲಾಪುರ ಗ್ರಾಮಾಂತರ ಬಸ್‌ ಆರಂಭಿಸಿ, ಸ್ಟೇಜ್‌ಗೆ ನಾಲ್ಕಾಣೆ ದರ ನಿಗದಿಪಡಿಸಲಾಗಿತ್ತು. ಸಿಟಿ ಬಸ್‌ ದರವನ್ನು ನಿಗದಿಪಡಿಸಬೇಕೆಂದು ಜನರು ತಕರಾರು ಎತ್ತಿದರು. ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಸಿಟಿ ಬಸ್‌ ದರವನ್ನೇ ನಿಗದಿಪಡಿಸಲಾಯಿತು.

1954ರಲ್ಲಿ ಹುಬ್ಬಳ್ಳಿ–ಧಾರವಾಡ ಅವಳಿ ನಗರ ಸಂಪರ್ಕಕ್ಕೆ ರೋಡ್‌ ಟ್ರೇನ್‌ ಟ್ರಾನ್ಸ್‌ಪೋರ್ಟ್‌ (50 ಆಸನ ಸಾಮರ್ಥ್ಯ) ವ್ಯವಸ್ಥೆ ಆರಂಭಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಹಳ್ಳಿಕೇರಿ ಗುದ್ಲೆಪ್ಪ ಉದ್ಘಾಟನೆ ನೆರವೇರಿಸಿದ್ದರು.

ಆಗ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಗದಗ ಡಿಪೊಗೆ ಭೇಟಿ ನೀಡಿದ್ದರು. ಉಪರಾಷ್ಟ್ರಪತಿ ಎಸ್‌. ರಾಧಾಕೃಷ್ಣನ್‌ ಅವರು ಹುಬ್ಬಳ್ಳಿ ವಿಭಾಗದ ವರ್ಕ್‌ಶಾಪ್‌ ಉದ್ಘಾಟಿಸಿದ್ದರು. ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ, ರಾಜ್ಯದ ಪ್ರಮುಖರಾಗಿದ್ದ ಜಯಚಾಮರಾಜ ಒಡೆಯರ್‌ ವಿಭಾಗಕ್ಕೆ ಭೇಟಿ ನೀಡಿದ್ದರು.

1956 ನವೆಂಬರ್‌ 1ರಂದು ಏಕೀಕರಣವಾಯಿತು. ಬಿಎಸ್‌ಆರ್‌ಟಿಸಿ ನಿಗಮವಾಗಿದ್ದರಿಂದ ಅದನ್ನು ಎಂಜಿಆರ್‌ಟಿಡಿ ಜೊತೆ ವಿಲೀನಗೊಳಿಸಲು ಸರ್ಕಾರ ನಿರಾಕರಿಸಿತ್ತು. ಹುಬ್ಬಳ್ಳಿ ಸಾರಿಗೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆ.ಜಿ. ರಾವ್‌ ಅವರನ್ನು ನೇಮಿಸಿತ್ತು.

ನಂತರದ ಬೆಳವಣಿಗೆಯಲ್ಲಿ 1957 ಜನವರಿ 1ರಂದು ಎಂಜಿಆರ್‌ಟಿಡಿ ಜತೆ ಬಿಎಸ್‌ಆರ್‌ಟಿಸಿ ವಿಲೀನವಾಯಿತು. 1961 ಆಗಸ್ಟ್‌ 1ರಂದು ಎಂಎಸ್‌ಆರ್‌ಟಿಸಿ (ಮೈಸೂರು ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌) ಸ್ಥಾಪನೆಯಾಯಿತು. ಕೆ.ಎಫ್‌. ಪಾಟೀಲ ಅವರು ನಿಗಮದ ಮೊದಲ ಅಧ್ಯಕ್ಷರಾಗಿದ್ದರು.

ಕರ್ನಾಟಕ ಎಂದು ಹೆಸರಾದ ನಂತರ 1973 ನವೆಂಬರ್‌ನಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎಂದು ಮರುನಾಮಕರಣ ಮಾಡಲಾಯಿತು. ಬೆಂಗಳೂರು, ವಿಜಯಪುರ, ಹುಬ್ಬಳ್ಳಿ, ಕಲಬುರಗಿ ವಿಭಾಗ ಇದ್ದವು. ಈ ಪೈಕಿ ಹುಬ್ಬಳ್ಳಿ ವಿಭಾಗವು ದೊಡ್ಡದಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಭಾಗ ಸ್ಥಾಪಿಸಬೇಕೋ? ಬೇಡವೋ? ಎಂದು ನಿರ್ಧರಿಸಲು ಸಮಿತಿ ರಚಿಸಲಾಗಿತ್ತು. ವಿಭಾಗ ಸ್ಥಾಪನೆಗೆ ಸಮಿತಿ ರಚಿಸಿದ್ದು ಸಾರಿಗೆ ಸಂಸ್ಥೆ ಇತಿಹಾಸದಲ್ಲೇ ಇದೇ ಮೊದಲು. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಭಾಗ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ನಾನು ಪ್ರಮುಖ ಪಾತ್ರ ವಹಿಸಿದ್ದೆ. 1967 ಮೇ 1ರಂದು ಅಲ್ಲಿ ‘ಟ್ರಾಫಿಕ್‌ ಡಿವಿಷನ್‌’ ಶುರುವಾಯಿತು. ‘ಡಿವಿಷನಲ್‌ ವರ್ಕ್‌ಶಾಪ್‌’ ಇಲ್ಲದೆ ವಿಭಾಗ ಆರಂಭಿಸಿದ ಪ್ರಥಮ ಪ್ರಯೋಗ ಇದು. ರಾಷ್ಟ್ರೀಕರಣದ ಯಶಸ್ಸಿಗೆ ಮೇಜರ್‌ ಜನರಲ್‌ ಯಂಗ್‌ ಅವರು ನನಗೆ ಪದಕ ನೀಡಿ ಗೌರವಿಸಿದ್ದರು.

1976ರಲ್ಲಿ ಹುಬ್ಬಳ್ಳಿ ವಿಭಾಗಕ್ಕೆ 25 ವರ್ಷ ತುಂಬಿತು. ಕೆ.ಆರ್‌.ಕೆ. ಮೂರ್ತಿ ಅವರು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದರು. ಸಿಬ್ಬಂದಿಯೇ ಹಣ ಸಂಗ್ರಹಿಸಿ ವಿಭಾಗ ಬೆಳ್ಳಿ ಹಬ್ಬ ಆಚರಿಸಿದ್ದೆವು. ಹುಬ್ಬಳ್ಳಿ ವಿಭಾ‌ಗದ ಮೊದಲ ಉದ್ಯೋಗಿ (ಪರಿಚಾರಿಕೆ) ನಾಗಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿ, ಬಹುಮಾನ ವಿತರಣೆ ಮಾಡಿದ್ದರು. 1997ರಲ್ಲಿ ನವೆಂಬರ್‌ನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಆರಂಭವಾಯಿತು.

ಎನ್‌ಡಬ್ಲ್ಯುಕೆಆರ್‌ಟಿಸಿಯವರು ಹುಬ್ಬಳ್ಳಿ ಸಾರಿಗೆ ಸಂಸ್ಥೆಯ ಇತಿಹಾಸ ಪ್ರಚಾರ ಮಾಡಬೇಕು, ಸಾರಿಗೆ ಸಂಸ್ಥೆಯ ನಿಯತಕಾಲಿಕೆಯೊಂದನ್ನು ನಿಯಮಿತವಾಗಿ ಪ್ರಕಟಿಸಬೇಕು, ಅಮೃತ ಮಹೋತ್ಸವವನ್ನು ವರ್ಷಪೂರ್ತಿ ಆಚರಿಸಬೇಕು, ಫೋಟೊ ಗ್ಯಾಲರಿ ನಿರ್ಮಾಣ ಮಾಡಬೇಕು, ಸಾರಿಗೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದವರ ಮಾಹಿತಿಯನ್ನು ವಿಭಾಗದಲ್ಲಿ ಅಳವಡಿಸಬೇಕು ಎಂಬುದು ನಮ್ಮ ಆಶಯ.

ಲೇಖನ: ರಾಮಚಂದ್ರ ಧೋಂಗಡೆ, ನಿವೃತ್ತ ಆಡಳಿತಾಧಿಕಾರಿ, ಕೆಎಸ್‌ಆರ್‌ಟಿಸಿ, ಧಾರವಾಡ

ನಿರೂಪಣೆ: ಬಿ.ಜೆ. ಧನ್ಯಪ್ರಸಾದ್‌

ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಪ್ರಜಾವಾಣಿ‌ ಚಿತ್ರ: ಬಿ.ಎಂ.ಕೇದಾರನಾಥ 
ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಬಿ.ಎಂ.ಕೇದಾರನಾಥ ಪ್ರಜಾವಾಣಿ‌ ಚಿತ್ರ
ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಬಿ.ಎಂ.ಕೇದಾರನಾಥ ಪ್ರಜಾವಾಣಿ‌ ಚಿತ್ರ

ಉತ್ತರ ಕನ್ನಡ ಜಿಲ್ಲೆ ಘಟ್ಟ ಪ್ರದೇಶ:

ಬಸ್‌ ಓಡಾಟ ಸವಾಲು ಹಿರಾಣಿ ಅವರು ಡೆಪ್ಯುಟಿ ಡಿವಿಜನಲ್‌ ಕಂಟ್ರೋಲರ್‌ ಆಗಿದ್ದ ಕಾಲಘಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆ ರಾಷ್ಟ್ರೀಕರಣ ಶುರುವಾಯಿತು. ಅದು ಘಾಟಿ ದಾರಿಯ ಜಿಲ್ಲೆ. ಕಾರವಾರ ಮಾರ್ಗದಲ್ಲಿ ಅರಬೈಲು ಘಟ್ಟ ಕುಮಟಾ ಮಾರ್ಗದಲ್ಲಿ ದೇವಿಮನೆ ಘಟ್ಟ ಇವೆ.

ಈ ಘಟ್ಟಗಳಲ್ಲಿನ ಗಂಗಾವಳಿ ಅಘನಾಶಿನಿ ಶರಾವತಿ ವೆಂಕಟಾಪುರ ಮತ್ತು ಗಂಗೊಳ್ಳಿ ಹೊಳೆಗಳನ್ನು ದಾಟಿ ‘ಸೌತ್ ಕೆನರಾ’ ತಲುಪಬೇಕಿತ್ತು. ಆ ಕಾಲದಲ್ಲಿ ಸೇತುವೆಗಳು ಇರಲಿಲ್ಲ. ಗುಡ್ಡ ಕುಸಿತ ಸಮಸ್ಯೆ ಇತ್ತು. ಘಾಟಿ ದಾರಿಗಳು ಬಹಳ ಕಚ್ಚಾ ಮತ್ತು ಕಿರಿದಾಗಿದ್ದವು. ವಾಹನ ಸಾಗುವಾಗ ಮತ್ತೊಂದು ವಾಹನ ಎದುರಾದರೆ ಒಂದು ವಾಹನ ಹಿಂದಕ್ಕೆ ಹೋಗಬೇಕಾದ ಸ್ಥಿತಿ ಇತ್ತು. ಬಸ್‌ಗಳನ್ನು ಬೃಹತ್‌ ದೋಣಿಗಳಲ್ಲಿ ಇಟ್ಟು ನದಿಗಳನ್ನು ದಾಟಬೇಕಿತ್ತು. ಈ ಐದು ಹೊಳೆಗಳನ್ನು ದಾಟಿ ಸಾಗುವುದು ದೊಡ್ಡ ಸವಾಲಾಗಿತ್ತು. ನದಿಯ ನೀರಿನಲ್ಲಿ ಏರಿಳಿತ ಇದ್ದಾಗ ಪ್ರಯಾಣಿಕರನ್ನು ಮಾತ್ರ ದೋಣಿಯಲ್ಲಿ ಮತ್ತೊಂದು ದಡಕ್ಕೆ ತಲುಪಿಸಿ ಅಲ್ಲಿಂದ ಮತ್ತೊಂದು ಬಸ್‌ನಲ್ಲಿ ಸಾಗಿಸಲಾಗುತ್ತಿತ್ತು.

ಘಾಟಿ ಮಾರ್ಗದಲ್ಲಿ ಬಸ್‌ ಚಾಲನೆ ಕುರಿತು ಇರಾಣಿ ಅವರು ಚಾಲಕರಿಗೆ ತರಬೇತಿ ಕೊಡಿಸಿದರು. ಜರ್ಮನಿಯಿಂದ ‘ಮರ್ಸಿಡಿಜ್‌ ಬೆಂಜ್‌’ ಬಸ್‌ಗಳನ್ನು (30 ಆಸನಗಳ ಚಿಕ್ಕ ಬಸ್‌) ತರಿಸಿದರು. ನುರಿತ ಸಿಬ್ಬಂದಿಯನ್ನು ರೋಣ ಡಿಪೊದಿಂದ ಕಾರವಾರಕ್ಕೆ ಲಕ್ಷ್ಮೇಶ್ವರದಿಂದ ಶಿರಸಿಗೆ ಹಾಗೂ ಸವಣೂರಿನಿಂದ ಹಾವೇರಿಗೆ ವರ್ಗಾಯಿಸಿದರು. ಈ ಮೂರು ಡಿಪೊಗಳ ಸಾರಿಗೆ ವ್ಯವಸ್ಥೆಯನ್ನು ಗದಗ ಡಿಪೊಗೆ ವರ್ಗಾಯಿಸಲಾಯಿತು.

ಸ್ಲೀಪರ್‌ ಕೋಚ್‌ ವ್ಯವಸ್ಥೆ: ಭಾರತದಲ್ಲೇ ಪ್ರಥಮ
ಹುಬ್ಬಳ್ಳಿ ವಿಭಾಗದಿಂದ 1966 ಮಾರ್ಚ್‌ 31ರಂದು ‘ಲಕ್ಸುರಿ ಸ್ಲೀಪರ್‌ ಕೋಚ್‌’ ಸಂಚಾರ ಆರಂಭಿಸಲಾಯಿತು. ಈ ಸೌಲಭ್ಯವು ವಿಭಾಗದ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಿಸಿತು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಈ ಬಸ್‌ ರಾತ್ರಿ ಸಂಚರಿಸುತ್ತಿತ್ತು. ಇಡೀ ದೇಶದಲ್ಲೇ ಪ್ರಥಮವಾಗಿ ಇದನ್ನು ಆರಂಭಿಸಿದೆವು. ಇದನ್ನು ಆರಂಭಿಸಲು ನಾನೇ ಸಲಹೆ ನೀಡಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.