ಹುಬ್ಬಳ್ಳಿ: ನಗರದಲ್ಲಿ ನಡೆದಿರುವ 3.9 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಗಾಗಿ ಸಿದ್ದಪ್ಪ ಕಂಬಳಿ ರಸ್ತೆಯ ಪಕ್ಕದಲ್ಲಿರುವ ಉಪನಗರ ಪೊಲೀಸ್ ಠಾಣೆ ಕಟ್ಟಡ ಭಾಗಶಃ ತೆರವು ಆಗಲಿದೆ. ಕಟ್ಟಡದಲ್ಲಿರುವ ಕಚೇರಿಗಳ ಸ್ಥಳಾಂತರಕ್ಕೆ ಸೂಕ್ತ ಜಾಗದ ಹುಡುಕಾಟ ನಡೆದಿದೆ.
ಮೇಲ್ಸೇತುವೆ ಕಾಮಗಾರಿಗೆ ರಸ್ತೆ ಮಧ್ಯದಿಂದ ಅಕ್ಕಪಕ್ಕ 18.5 ಮೀಟರ್ ಜಾಗ ಸ್ವಾಧೀನವಾಗಲಿದೆ. ಚನ್ನಮ್ಮ ವೃತ್ತದಿಂದ ಅಶೋಕಾ ಟವರ್ ಹೋಟೆಲ್‌ವರೆಗಿನ 370 ಮೀಟರ್ ರಸ್ತೆಯ ಅಕ್ಕಪಕ್ಕ ಸರ್ಕಾರ ಮತ್ತು ಖಾಸಗಿಯ 120 ಆಸ್ತಿಗಳಿವೆ. ಅವುಗಳಲ್ಲಿ ಈ ಉಪನಗರ ಪೊಲೀಸ್ ಠಾಣೆ ಕಟ್ಟಡವೂ ಒಂದು. ರಸ್ತೆ ಮಧ್ಯದಿಂದ 3.6 ಮೀಟರ್ ಠಾಣೆಯ ಕಟ್ಟಡ ತೆರವು ಆಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಟ್ಟಡಕ್ಕೆ ಗುರುತು ಹಾಕಿದೆ.
2006ರಲ್ಲಿ ನಿರ್ಮಿತ ಮೂರು ಮಹಡಿಯ ಉಪನಗರ ಠಾಣೆ ಕಟ್ಟಡದಲ್ಲಿ ಪೊಲೀಸ್ ಕಮಿಷನರ್, ಡಿಸಿಪಿ (ಕಾನೂನು) ಮತ್ತು ಎಸಿಪಿ ಕಚೇರಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಸಂಚಾರ ನಿಯಂತ್ರಣ ಕೊಠಡಿ ಹಾಗೂ ಮಹಿಳಾ ಪೊಲೀಸ್ ಠಾಣೆ ಇವೆ. ಕಟ್ಟಡದ ಶೇ 30ರಷ್ಟು ಭಾಗ ತೆರವು ಆಗುವುದರಿಂದ, ತೆರವು ವೇಳೆ ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸುವುದು ಅಪಾಯ. ಅದಕ್ಕೂ ಮುನ್ನವೇ ಕಚೇರಿಗಳ ಸ್ಥಳಾಂತರ ಇಲಾಖೆಗೆ ಸವಾಲಾಗಿದೆ.
‘ಅಧಿಕಾರಿಗಳ ಕಚೇರಿಗಳಿಗಿಂತ ಎರಡು ಪೊಲೀಸ್ ಠಾಣೆ ಹಾಗೂ ಸಂಚಾರ ನಿಯಂತ್ರಣ ಕೇಂದ್ರದ ಸ್ಥಳಾಂತರ ಸಮಸ್ಯೆಯಾಗಿದೆ. ಠಾಣೆಗಳಿಗೆ ಹಾಗೂ ನಿಯಂತ್ರಣ ಕೊಠಡಿಗೆ ವಿಶಾಲವಾದ ಸ್ಥಳಾವಕಾಶ, ಮೂಲ ಸೌಕರ್ಯ ಹಾಗೂ ನೆಟ್‌ವರ್ಕಿಂಗ್ ಕೇಬಲ್‌ಗಳು ಸರಿಯಾಗಿರುವ ಪ್ರದೇಶ ಬೇಕು. ಅಂಥ ಸ್ಥಳಗಳ ಹುಡುಕಾಡ ನಡೆದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸ್ಥಳಾಂತರಕ್ಕೆ ಹಳೇ ಸಿಎಆರ್ ಮೈದಾನ ಹಾಗೂ ಮಿನಿವಿಧಾನ ಸೌಧದಲ್ಲಿ ಖಾಲಿಯಿರುವ ಕೊಠಡಿಗಳನ್ನು ನೋಡಲಾಗಿದೆ. ಜೊತೆಗೆ, ಸನಿಹದಲ್ಲಿ ಯಾವುದಾದರೂ ಸರ್ಕಾರಿ ಕಟ್ಟಡಗಳು ಇವೆಯೇ ಅಥವಾ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಗಬೇಕೇ ಎನ್ನುವ ಕುರಿತು ಸಹ ಚರ್ಚೆ ನಡೆಯುತ್ತಿದೆ. ಕಟ್ಟಡ ತೆರವಿನ ನಂತರ, ನವೀಕರಣ ಮಾಡಿ ಅಲ್ಲೇ ಕಾರ್ಯನಿರ್ವಹಿಸಿದರೆ ಕಟ್ಟಡ ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಬಗ್ಗೆ ತಜ್ಞರಿಂದ ವರದಿ ಪಡೆದು ಮುಂದುವರೆಯುವ ಬಗ್ಗೆಯೂ ಚರ್ಚೆಯಾಗಿದೆ’ ಎಂದು ಹೇಳಿವೆ.
ಶೇ 60ರಷ್ಟು ಕಾಮಗಾರಿ: ಠಾಣಾ ಕಟ್ಟಡದ ಜೊತೆಗೆ ಪ್ರಮುಖವಾಗಿ ಈದ್ಗಾ ಮೈದಾನ, ಮಿನಿ ವಿಧಾನಸೌಧ, ಮಹಾನಗರ ಪಾಲಿಕೆ ಆವರಣ, ಚಿಟಗುಪ್ಪಿ ಉದ್ಯಾನ, ಜಿಲ್ಲಾ ಕೇಂದ್ರ ಗ್ರಂಥಾಲಯ, ಶಿವಶಕ್ತಿ ಮಂದಿರದ ಆವರಣ, ಲ್ಯಾಮಿಂಗ್ಟನ್ ಶಾಲೆ ಆವರಣ, ಶ್ರೀಕೃಷ್ಣ ಭವನ ಸೇರಿದಂತೆ ಅನೇಕ ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಅಂಗಡಿಗಳು ಸಹ ಮೇಲ್ಸೇತುವೆ ಕಾಮಗಾರಿಗೆ ಭಾಗಶಃ ಸ್ವಾಧೀನವಾಗಲಿವೆ. ಸಂಪೂರ್ಣ ಕಾಮಗಾರಿ ಮುಕ್ತಾಯಕ್ಕೆ ಇದೇ ಸೆಪ್ಟೆಂಬರ್ ಅಂತಿಮ ಗಡುವು ಆಗಿದ್ದು, ಶೇ 60ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಆದರೆ, ನನೆಗುದಿಗೆ ಬಿದ್ದಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಈದ್ಗಾ ಮೈದಾನದ ಅಕ್ಕಪಕ್ಕದ ಎರಡೂ ಗೋಡೆಯನ್ನು ತೆರವುಗೊಳಿಸಲಾಗಿದೆ.
ಪೊಲೀಸ್ ಠಾಣೆ ಕಟ್ಟಡ ಭಾಗಶಃ ತೆರವು ಆಗುವುದರಿಂದ ಸ್ಥಳಾಂತರಕ್ಕೆ ಜಾಗ ಪರಿಶೀಲನೆ ನಡೆಯುತ್ತಿದೆ. ಪಾಲಿಕೆ ಅಥವಾ ಸರ್ಕಾರದ ಜಾಗವಿದ್ದರೆ ಅಲ್ಲಿಗೆ ಸ್ಥಳಾಂತರಿಸಲಾಗುವುದುದಿವ್ಯಪ್ರಭು ಜಿಲ್ಲಾಧಿಕಾರಿ
ಮಹಾನಗರ ಪಾಲಿಕೆಯ ದ್ವಾರದವರೆಗೆ ಭೂಸ್ವಾಧೀನವಾಗಲಿದೆ. ಅಲ್ಲಿರುವ ಪಾಲಿಕೆಯ ಹಳೆಯ ಕಟ್ಟಡಕ್ಕೆ ಸಮಸ್ಯೆಯಾದರೆ ಸಂಪೂರ್ಣ ತೆರವು ಮಾಡಲಾಗುವುದುವಿಜಯಕುಮಾರ, ಹೆಚ್ಚುವರಿ ಉಪ ಆಯುಕ್ತ ಹುಧಾ ಮಹಾನಗರ ಪಾಲಿಕೆ
ಠಾಣೆ ಕಟ್ಟಡ ಬೇರೆಡೆ ಸ್ಥಳಾಂತರಿಸಲು ಸೂಕ್ತ ಜಾಗ ಹುಡುಕುತ್ತಿದ್ದೇವೆ. ಕಟ್ಟಡದ ಎಷ್ಟು ಭಾಗ ತೆರವಾಗುತ್ತದೆ ನವೀಕರಿಸಿ ಅಲ್ಲಿಯೇ ಇರಬಹುದೇ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆಪೊಲೀಸ್ ಅಧಿಕಾರಿ ಹು–ಧಾ ಮಹಾನಗರ
ನಾಲ್ಕು ತಿಂಗಳು ವಾಹನಗಳ ಸಂಚಾರ ಬಂದ್ ಮಾಡಿ ತ್ವರಿತ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಪ್ರಕಾರ ಕಾಮಗಾರಿ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲಲಿಂಗರಾಜ ಧಾರವಾಡಶೆಟ್ಟರ್ ಸಾಮಾಜಿಕ ಕಾರ್ಯಕರ್ತ
ಚಿಗರಿ ಬಸ್ ನಿಲ್ದಾಣ ಸಹ ತೆರವು
ಚತುಷ್ಪಥ ಮೇಲ್ಸೇತುವೆಗೆ ಕಾಮತ್ ಹೋಟೆಲ್ ಎದುರು ನಾಲ್ಕು ಬೃಹತ್ ಪಿಲ್ಲರ್‌ಗಳು ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣವಾಗಲಿದೆ. ಮೇಲ್ಸೇತುವೆ ಕೆಳಭಾಗದ ರಸ್ತೆಯ ಎರಡೂ ಕಡೆ 7.50 ಮೀಟರ್ ಜಾಗವನ್ನು ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗಕ್ಕೆ ಮೀಸಲಿಡಲಾಗಿದೆ. ಪಾಲಿಕೆ ಉದ್ಯಾನದ ಎದುರಿರುವ ಟೈಟಾನ್ ಐ ಷೋರೂಮ್ ಎದುರು ಮೇಲ್ಸೇತುವೆ ಮುಕ್ತಾಯವಾಗಲಿದೆ. ಅಲ್ಲಿರುವ ಬಿಆರ್‌ಟಿಎಸ್ ನಿಲ್ದಾಣ ತೆರವುಗೊಳಿಸಿ ಲ್ಯಾಮಿಂಗ್ಟನ್ ರಸ್ತೆಯ ಹೋಟೆಲ್ ಸ್ವಯಂ ಎದುರು ನಿರ್ಮಿಸಲಾಗುತ್ತದೆ’ ಎಂದು ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.