ADVERTISEMENT

ಹುಬ್ಬಳ್ಳಿ | ಹುಡಾ ವ್ಯಾಪ್ತಿಗೆ 46 ಹಳ್ಳಿ; ಜನರ ಆಕ್ಷೇಪ

ರತ್ನ ಭಾರತ ರೈತ ಸಮಾಜ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 3:12 IST
Last Updated 19 ನವೆಂಬರ್ 2025, 3:12 IST
ಹುಬ್ಬಳ್ಳಿಯ ನವನಗರದ ಹುಡಾ ಕಚೇರಿ ಎದುರು ರತ್ನ ಭಾರತ ರೈತ ಸಮಾಜ ಸಂಘಟನೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ನವನಗರದ ಹುಡಾ ಕಚೇರಿ ಎದುರು ರತ್ನ ಭಾರತ ರೈತ ಸಮಾಜ ಸಂಘಟನೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು 46 ಗ್ರಾಮಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುತ್ತಿರುವುದು, ಬಡ ವರ್ಗದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರತ್ನ ಭಾರತ ರೈತ ಸಮಾಜ ಸಂಘಟನೆ ಸದಸ್ಯರು ನವನಗರದ ಹುಡಾ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಾಹನಗಳ ಸಂಚಾರ ತಡೆದು, ಭಜನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ರೈತರು ಹಾಗೂ ಸಾರ್ವಜನಿಕರು ಮನೆ ಕರ ಪಾವತಿಸಲು ಪರದಾಡುತ್ತಾರೆ. ಹೀಗಿದ್ದಾಗ, ಹುಡಾ ವ್ಯಾಪ್ತಿಗೆ 46 ಗ್ರಾಮಗಳನ್ನು ಸೇರಿಸಿ ಎಲ್ಲ ವಿಧದಲ್ಲೂ ಕರ ಪಾವತಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ರೈತ ಮುಖಂಡ ಹೇಮನಗೌಡ ಬಸವನಗೌಡ ಮಾತನಾಡಿ, ‘ಶೇ 95ರಷ್ಟು ರೈತರು ಕೃಷಿ ಹಾಗೂ ಕೂಲಿಯನ್ನೇ ನಂಬಿಕೊಂಡು ಗ್ರಾಮೀಣ ಭಾಗದಲ್ಲಿ ಬದುಕುತ್ತಿದ್ದಾರೆ. ಮಳೆ ಬಂದರೂ, ಬರದಿದ್ದರೂ ಬೆಳೆ ನಷ್ಟ ಅನುಭವಿಸುತ್ತ ಬದುಕು ಸಾಗಿಸುತ್ತಾರೆ. ಸರ್ಕಾರದಿಂದ ಪರಿಹಾರವೂ ಅಷ್ಟಕ್ಕಷ್ಟೇ ಆಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮಿಣ ಭಾಗದಲ್ಲಿರುವ ಜಮೀನನ್ನು ಕಡಿಮೆ ಬೆಲೆಗೆ ಖರೀದಿಸಿ, ನಿವೇಶನ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಗ್ರಾಮದಲ್ಲಿ ವಾಸಿಸುವವರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮದ ರೈತರನ್ನು ಒಂದೆಡೆ ಕರೆಸಿ, ಅವರ ಒಪ್ಪಿಗೆ ಪಡೆದುಕೊಂಡೇ ಮುಂದವರಿಯಬೇಕು. ತಕ್ಷಣ ಅಧಿಸೂಚನೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರೈತರಾದ ಬಸನಗೌಡ ಕಲ್ಲನಗೌಡ, ರಾಜಶೇಖರ ಪಾಟೀಲ, ಬಸವರಾಜ ಅಣ್ಣಿಗೇರಿ, ಬಸಪ್ಪ ಯೋಗಪ್ಪನವರ, ಸುನಿಲ ಯಲಿಗಾರ, ಈರಪ್ಪ ಕಂಬಾರ, ಮಂಜುನಾಥ ಮಲ್ಲಿಗವಾಡ, ಶಂಕ್ರಪ್ಪ ಸಿದ್ದೂನವರ, ಪ್ರಕಾಶ ಮಾಶೆಟ್ಟಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.