ADVERTISEMENT

ಕಾಂಗ್ರೆಸ್ ಹೈಕಮಾಂಡ್‌ನಿಂದ ಬುಲಾವ್, ಚರ್ಚಿಸಿ ರಾಜೀನಾಮೆ ತೀರ್ಮಾನ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 15:57 IST
Last Updated 13 ಫೆಬ್ರುವರಿ 2022, 15:57 IST
 ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹುಬ್ಬಳ್ಳಿ: ‘ಹೈಕಮಾಂಡ್‌ನಿಂದ ಬುಲಾವ್‌ ಬಂದಿದ್ದು, ಅವರ ಜೊತೆ ಚರ್ಚಿಸಿದ ನಂತರ ಮತ್ತೊಮ್ಮೆ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸಿ ರಾಜೀನಾಮೆ ನೀಡುವ ಕುರಿತು ನಿರ್ಧರಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆಮಾತನಾಡಿದ ಅವರು, ಸದಸ್ಯಕ್ಕೆ ರಾಜೀನಾಮೆ ನೀಡುತ್ತಿಲ್ಲ. ಹೈಕಮಾಂಡ್‌ಗೆ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಮನಸ್ಸಿದೆಯೋ ಇಲ್ಲವೋ ಕೇಲುತ್ತೇನೆ. ಅವರ ಪ್ರತಿಕ್ರಿಯೆ ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದರು.

‘ನಮ್ಮದೇ ಪಕ್ಷದವರು ಒಂದು ಕಡೆ ಬಯ್ಯುತ್ತಾರೆ, ಮತ್ತೊಂದು ಕಡೆ ತೆಗಳುತ್ತಾರೆ. ವಕ್ಫ್‌ ಬೋರ್ಡ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಉಗ್ರಪ್ಪ ಅವರಿಂದ ಆರೋಪ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನನ್ನ ಮೇಲೆ ತನಿಖೆ ನಡೆಸಲಿ. ಮನೆ ಮುಂದೆ ಕಟ್ಟಿರುವ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಸಿದ್ದರಾಮಯ್ಯ ನನಗೆ ಕರೆ ಮಾಡಿದ್ದರು, ಮಹದೇವಪ್ಪ ಮನೆಗೆ ಬಂದಿದ್ದರು ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳುತ್ತಾರೆ. ಪಕ್ಷಕ್ಕೆ ನಾವೇನು ಅಲ್ಲ ಅಂದಮೇಲೆ ನಮ್ಮ ಪಾಡಿಗೆ ಬಿಟ್ಟುಬಿಡಬೇಕು. ಬೇಡ ಜಂಗಮರ ರೀತಿ ಹೊರೆಟು ಬಿಡುತ್ತೇವೆ. ಸದ್ಯ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಮತಾಂತರ ಮಸೂದೆ ಪರಿಷತ್‌ನಲ್ಲಿ ಮಂಡನೆಯಾಗಲಿದೆ. ಈ ವೇಳೆ ರಾಜೀನಾಮೆ ನೀಡಿದರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಬರುತ್ತದೆ. ಅದರಿಂದ ಬಿಜೆಪಿಗೆ ಲಾಭ ಆಗುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.