ADVERTISEMENT

ಹುಬ್ಬಳ್ಳಿ: ಅಕ್ರಮ ಕಟ್ಟಡ ತೆರವಿಗೆ ಗಡುವು

ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:11 IST
Last Updated 3 ಜನವರಿ 2026, 5:11 IST
ಹುಬ್ಬಳ್ಳಿಯ ನೇಕಾರನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ನೇಕಾರನಗರ ಹಿತರಕ್ಷಣ ವೇದಿಕೆ ಮತ್ತು ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ನೇಕಾರನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ನೇಕಾರನಗರ ಹಿತರಕ್ಷಣ ವೇದಿಕೆ ಮತ್ತು ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಇಲ್ಲಿಯ ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಮಸೀದಿ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಅರ್ಧ ಭಾಗದಷ್ಟು ತೆರವುಗೊಳಿಸಲಾಗಿದೆ. ಇನ್ನುಳಿದ ಭಾಗವನ್ನು ಒಂದು ವಾರದ ಒಳಗೆ ತೆರವು ಮಾಡಬೇಕು’ ಎಂದು ನೇಕಾರನಗರ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗ್ರಹಿಸಿದರು.

ಮಸೀದಿ ನಿರ್ಮಾಣದ ಕುರಿತು ಶುಕ್ರವಾರ ನೇಕಾರ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ ಅವರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಸಿದರು. ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಮಸೀದಿ ನಿರ್ಮಾಣ ಮಾಡುತ್ತಿದ್ದರೂ, ಪಾಲಿಕೆ ಹಾಗೂ ತಾಲ್ಲೂಕು ಆಡಳಿತ ತಮಗೇನೂ ಸಂಬಂಧವಿಲ್ಲ ಎನ್ನುವಂತೆ ಇಷ್ಟುದಿನ ಸುಮ್ಮನಿದ್ದಿದ್ದು ಅಕ್ಷಮ್ಯ ಎಂದು ಅಸಮಾಧಾನ ಹೊರಹಾಕಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌, ‘ಶಿವನಾಗ ಬಡಾವಣೆಯ ಸುತ್ತಮುತ್ತ ಈಗಾಗಲೇ ನಾಲ್ಕು ಮಸೀದಿಗಳಿವೆ. ಹಿಂದೂಗಳಿಗೆ ಸಮಸ್ಯೆ ನೀಡಬೇಕು ಎನ್ನುವ ಉದ್ದೇಶದಿಂದಲೇ, ಕಾನೂನು ಬಾಹಿರವಾಗಿ ಮತ್ತೊಂದು ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದರು. ನಾಲ್ಕು ತಿಂಗಳಿನಿಂದ ಆಕ್ಷೇಪ ವ್ಯಕ್ತಪಡಿಸುತ್ತ, ತೆರವಿಗೆ ಒತ್ತಾಯಿಸುತ್ತಿದ್ದರೂ ಸ್ಪಂದಿಸಿರಲಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಹತ್ತು ದಿನಗಳ ಹಿದೆ ಪ್ರತಿಭಟನೆ ನಡೆಸಿ, ಜ.1ರ ಒಳಗೆ ಕಾನೂನು ಬಾಹಿರವಾಗಿ ನಿರ್ಮಿಸಿದ್ದ ಮಸೀದಿ ತೆರವು ಮಾಡಬೇಕು, ಇಲ್ಲದಿದ್ದರೆ ನಾವೇ ತೆರವು ಮಾಡುತ್ತೇವೆ’ ಎಂದು ಗಡುವು ವಿಧಿಸಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮೇಯರ್‌, ಉಪ ಮೇಯರ್‌ ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಎಂದು ತಿಳಿದು ಗೋಡೆ ತೆರವು ಮಾಡಿಸಿದ್ದಾರೆ. ಇನ್ನುಳಿದ ಭಾಗವನ್ನು ಒಂದು ವಾರದಲ್ಲಿ ತೆರವು ಮಾಡಬೇಕು’ ಎಂದು ಆಗ್ರಹಿಸಿದರು.

‘ಮನೆ ನಿರ್ಮಾಣ ಜಾಗದಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸುತ್ತಿರುವುದನ್ನು ಗಮನಿಸಿ ಪಾಲಿಕೆ ಅಂಟಿಸಿದ್ದ ನೋಟಸ್‌ ಹರಿದು ಹಾಕಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೋರಾಟದ ಕುರಿತು ಹಿಂದೂ ಕಾರ್ಯಕರ್ತರಿಗೆ ನೀಡಿದ್ದ ನೋಟಿಸ್‌ ತಕ್ಷಣ ಹಿಂಪಡೆಯಬೇಕು. ಇದು ಮೊದಲ ಹಂತದ ಹೋರಾಟವಾಗಿದ್ದು, ಕಾಲಮಿತಿಯಲ್ಲಿ ಬೇಡಿಕೆ ಈಡೇರದಿದ್ದರೆ ಎರಡನೇ ಹಂತದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮಂಜುನಾಥ ಕಾಟ್ಕರ್‌, ಅಪ್ಪಣ್ಣ ದೀವಟಗಿ, ಶ್ರೀಧರ ಕಲಬುರ್ಗಿ, ಮಂಜು ತೇರದಾಳ, ಶಿವಯ್ಯ ಹಿರೇಮಠ, ಮಾಲತೇಶ ಉಮ್ಮನವರ, ಬಸು ದುರ್ಗದ, ಬಸು ಗೌಡರ, ನಾಗರಾಜ, ಯಶೋಧ ತಾಂಬೆ, ಪೂರ್ಣಿಮಾ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್‌

ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ನಿರ್ಮಾಣ ಹಂತದಲ್ಲಿರುವ ಧಾರ್ಮಿಕ ಕಟ್ಟಡದ ಬಳಿ ಯಾರೂ ತೆರಳದಂತೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಬಂದೋಬಸ್ತ್‌ ಮೇಲುಸ್ತುವಾರಿ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.