ಹುಬ್ಬಳ್ಳಿ: ‘ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದಲ್ಲಿ ನೈತಿಕ ಮತ್ತು ಮೌಲ್ಯ ಶಿಕ್ಷಣ ಅಳವಡಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
‘ಪ್ರತಿಯೊಬ್ಬ ವಿದ್ಯಾರ್ಥಿಗೆ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಅಗತ್ಯ ಇದೆ. ವಿದ್ಯಾರ್ಥಿ ಕೇವಲ ಪಠ್ಯದಲ್ಲಿನ ವಿಷಯ ತಿಳಿದುಕೊಂಡು ಜೀವನ ನಡೆಸಲು ಆಗದು. ಸಾಮಾನ್ಯ ಜ್ಞಾನವೂ ಬೇಕು’ ಎಂದು ತಿಳಿಸಿದ್ದಾರೆ.
‘ಪ್ರಸ್ತುತ ಸಮಾಜದಲ್ಲಿ ಅನ್ಯಾಯ, ಕ್ರೌರ್ಯ, ಅಸಹನೆ, ದುರಾಚಾರ, ಹೊಂದಾಣಿಕೆ ಇಲ್ಲದಿರುವುದನ್ನು ಕಾಣುತ್ತೇವೆ. ಇದಕ್ಕೆ ಈಗಿನ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಲ್ಲಿ ಮೌಲ್ಯದ ಕೊರತೆ, ಅತ್ಯಾದುನಿಕ ತಂತ್ರಜ್ಞಾನ ಬಳಕೆಯೇ ಕಾರಣ. ಉತ್ತಮ ಆಚಾರ, ವಿಚಾರ, ಸಂಸ್ಕಾರಕ್ಕೆ ಮೌಲ್ಯಯುತ ಶಿಕ್ಷಣ ನೀಡುವುದು ಅವಶ್ಯ’ ಎಂದು ತಿಳಿಸಿದ್ದಾರೆ.
‘ಈ ಹಿಂದಿನ ಪಠ್ಯಕ್ರಮದಲ್ಲಿ ನೀತಿ ಕಥೆಗಳಿರುತ್ತಿದ್ದವು. ಇದರಿಂದ ಮಕ್ಕಳು ಪ್ರಾಮಾಣಿಕತೆ, ಸಮಗ್ರತೆ, ಸಹಾನುಭೂತಿ, ದಯೆ, ಜವಾಬ್ದಾರಿ, ತಾಳ್ಮೆ, ಶಿಸ್ತು, ಭ್ರಾತೃತ್ವ ಗುಣಗಳನ್ನು ಬೆಳೆಸಿಕೊಂಡು ಸಾತ್ವಿಕ, ಆದರ್ಶಯುತ ಜೀವನ ನಡೆಸುತ್ತಿದ್ದರು. ಈಗಿನ ಮಕ್ಕಳಲ್ಲಿ ಈ ಅಂಶಗಳು ಕಾಣಸಿಗುವುದಿಲ್ಲ’ ಎಂದು ಹೇಳಿದ್ದಾರೆ.
‘ಆನ್‌ಲೈನ್ ಮೂಲಕ ಶಿಕ್ಷಣ ನೀಡುವುದು ಸರಿಯಾದ ಪದ್ಧತಿಯಲ್ಲ. ಎಲ್‌ಕೆಜಿಯಿಂದ ಪಿಯುಸಿವರೆಗೆ ಆನ್‌ಲೈನ್ ಶಿಕ್ಷಣವನ್ನು ರದ್ದುಗೊಳಿಸುವ ಕುರಿತು ಈಚೆಗೆ ನಡೆದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಚೈಲ್ಡ್ ಫಂಡ್ ಇಂಡಿಯಾದ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಉತ್ತಮ ಕ್ರಮ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.