ADVERTISEMENT

ಹುಬ್ಬಳ್ಳಿ: ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಪಟ್ಟು

ಸೌಲಭ್ಯ ಹೆಚ್ಚಿಸುವಂತೆ ಆಗ್ರಹ, ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 7:47 IST
Last Updated 17 ಆಗಸ್ಟ್ 2021, 7:47 IST
ಹುಬ್ಬಳ್ಳಿಯ ಉತ್ತರ ವಲಯದ ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘದವರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಉತ್ತರ ವಲಯದ ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘದವರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳು ವಿನಾಕಾರಣ ಅಲೆದಾಡಿಸುತ್ತಾರೆ. ಅವರನ್ನು ವರ್ಗಾವಣೆ ಮಾಡುವ ತನಕ ಹುಬ್ಬಳ್ಳಿಯ ಉತ್ತರದ ಕಚೇರಿಯಲ್ಲಿ ಯಾವುದೇ ದಾಖಲೆಗಳ ನೋಂದಣೆ ಮಾಡಿಸುವುದಿಲ್ಲ ಎಂದು ವಿವಿಧ ಸಂಸ್ಥೆಯವರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್), ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ವಾಸ್ತುಶಿಲ್ಪ ಸಂಘ, ಸಿವಿಲ್‌ ಎಂಜಿನಿಯರ್‌ಗಳ ಸಂಘ ಮತ್ತು ದಸ್ತಾವೇಜು ಬರಹಗಾರರ ಸಂಘದವರು ಉಪ ನೋಂದಣಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚು ಬರುತ್ತಿರುವುದರಿಂದ ನೋಂದಣಿಗೆ ದಾಖಲೆಗಳು ಸಹ ಸಾಕಷ್ಟು ಬರುತ್ತಿವೆ. ಹಿಂದಿನ ಆರೇಳು ತಿಂಗಳಿನಿಂದ ನಿತ್ಯ 80ರಿಂದ 85 ನೋಂದಣಿಯಾಗುತ್ತಿದ್ದವು. ಈಗ 50ರಿಂದ 55 ಆದರೆ ಅದೇ ಹೆಚ್ಚು ಎನ್ನುವಂತಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್‌ ಹಾಗೂ ಸಿಬ್ಬಂದಿ ಕೊರತೆಯಿದೆ. ನೋಂದಣಿಗೆ ಹೋದವರಿಗೆ ಕಿರಿಕಿರಿ ಮಾಡುತ್ತಾರೆ. ಕಚೇರಿ ಬಿಟ್ಟು ಬೇರೆ ಕೆಲಸಗಳಲ್ಲಿಯೇ ಹೆಚ್ಚು ತೊಡಗಿರುತ್ತಾರೆ. ಇದರಿಂದ ಕೋವಿಡ್‌ ಸಮಯದಲ್ಲಿಯೂ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಕ್ರೆಡಾಯ್‌ ಹುಬ್ಬಳ್ಳಿ–ಧಾರವಾಡ ಘಟಕದ ಅಧ್ಯಕ್ಷ ಸಾಜಿದ್‌ ಫರಾಷ್‌ ಮಾತನಾಡಿ ‘ಉತ್ತರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಿಂದಿನ ಮೂರು ವರ್ಷಗಳಲ್ಲಿ 13,644 ದಾಖಲೆಗಳು ನೋಂದಣಿಯಾಗಿದ್ದು, ಸರ್ಕಾರಕ್ಕೆ ಅಂದಾಜು ₹62.92 ಕೋಟಿ ರಾಜಸ್ವ ಬಂದಿದೆ. ಇದರಲ್ಲಿ ಅರ್ಧದಷ್ಟು ಹಣ ಕ್ರೆಡಾಯ್‌ ಹಾಗೂ ಡವಲಪರ್ಸ್‌ ಕಡೆಯಿಂದ ಬಂದಿದೆ. ಆದರೂ, ಈಗಿನ ನೋಂದಣಾಧಿಕಾರಿಗಳು ದಾಖಲೆಗಳು ಸರಿಯಿಲ್ಲ ಎಂದು ಪದೇ ಪದೇ ಅನಗತ್ಯವಾಗಿ ಅಲೆದಾಡಿಸುತ್ತಾರೆ’ ಎಂದು ಆರೋಪಿಸಿದರು.

ಆದ್ದರಿಂದ ಈಗಿರುವ ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡಲೇಬೇಕು. ಅಲ್ಲಿಯ ತನಕ ನಾವು ನೋಂದಣಿ ಮಾಡಿಸುವುದಿಲ್ಲ ಎಂದರು. ಈ ಕುರಿತು ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಸಲ್ಲಿಸುವುದಾಗಿಯೂ ತಿಳಿಸಿದರು.

ಕ್ರೆಡಾಯ್‌ನ ಪ್ರದೀಪ್ ಡಿ.ರಾಯ್ಕರ್ (ಪ್ರೆಸಿಡೆಂಟ್ ಎಲೆಕ್ಟ್), ದಸ್ತಾವೇಜು ಬರಹಗಾರರ ಸಂಘದ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತರಾಮ್‌ ಪೋಳ್‌, ಸಿವಿಲ್‌ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಶ್ರೀಕಾಂತ ವಿ. ಪಾಟೀಲ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಗುರುರಾಜ್‌ ಅಣ್ಣಿಗೇರಿ, ವಕೀಲರ ಸಂಘದ ಸದಸ್ಯ ಸದಾನಂದ ದೊಡ್ಡಮನಿ, ಗುರುರಾಜ ರಾಯ್ಕರ್‌, ಜಗನ್ನಾಥ ಚಾಟ್ನಿ, ನಾರಾಯಣ ಆಚಾರ್ಯ, ಸೂರಜ್‌ ಅಲಗುಂಡಿ, ಸಂದೀಪ್‌ ಮುನವಳ್ಳಿ ಸೇರಿದಂತೆ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.