ಹುಬ್ಬಳ್ಳಿ: ದೇಶದಲ್ಲೇ ಅತೀ ದೊಡ್ಡ ಸಾರಿಗೆ ವ್ಯವಸ್ಥೆ ಹೊಂದಿರುವ ರೈಲ್ವೆ ಇಲಾಖೆ, ಅತ್ಯಾಧುನಿಕ ಸೌಲಭ್ಯ, ತಂತ್ರಜ್ಞಾನ ಹೊಂದಿದ್ದರೂ ರೈಲು ಅಪಘಾತದಿಂದ ಪ್ರತಿವರ್ಷ ಸಂಭವಿಸುವ ಸಾವು– ನೋವಿನ ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ.
ನೈರುತ್ಯ ರೈಲ್ವೆ ವಿಭಾಗದ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಹಳಿಗೆ ಸಿಲುಕಿ 360ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಮೂರು ವರ್ಷಗಳಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಅಂದಾಜು 120ಕ್ಕೂ ಅಧಿಕ ಜನರ ಸಾವು ಸಂಭವಿಸುತ್ತಿವೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಇಂತಹ ಘಟನೆಗಳು ಹೆಚ್ಚುತ್ತಿರುವುದು ರೈಲ್ವೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ರೈಲು ಹಳಿಗಳಿಗೆ ಸಿಲುಕಿ ಸಾವನ್ನಪ್ಪುವವರಲ್ಲಿ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು. ಉಳಿದಂತೆ ಚಲಿಸುತ್ತಿರುವ ರೈಲಿಗೆ ಬೇಜವಾಬ್ದಾರಿಯಿಂದ ಸಿಲುಕಿ, ರೈಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ಹೆಚ್ಚುತ್ತಿವೆ.
‘ರೈಲಿಗೆ ಸಿಲುಕಿ ಮೃತಪಟ್ಟವರ ಪ್ರಕರಣಗಳಲ್ಲಿ ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಜೀವನದಲ್ಲಿ ಜುಗುಪ್ಸೆ, ಸಾಲದಂತಹ ಕಾರಣಗಳೇ ಹೆಚ್ಚು ಕೇಳಿಬಂದಿವೆ. ಇನ್ನುಳಿದಂತೆ ರೈಲ್ವೆ ಹಳಿಯಲ್ಲಿ ಮಲಗಿದಾಗ, ಕ್ರಾಸಿಂಗ್ ಇದ್ದರೂ ಹಳಿ ದಾಟುವಾಗ, ಇಯರ್ ಫೋನ್ ಹಾಕಿಕೊಂಡು ಹಳಿಯಲ್ಲಿ ನಡೆದುಕೊಂಡು ಹೋಗುವಾಗ, ರೈಲು ಬರುತ್ತಿರುವಾಗ ಹಳಿಯಲ್ಲಿ ನಿಂತು ಫೋಟೊ ತೆಗೆದುಕೊಳ್ಳುವುದು, ವಿಡಿಯೊ ಚಿತ್ರೀಕರಿಸುವುದು ಮಾಡುವಾಗ ರೈಲು ಹಾಯ್ದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸಾವಿನಿಂದ ಪಾರಾದರೂ, ತೀವ್ರ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.
‘ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಎಂಟು ಆಕಸ್ಮಿಕ ಹಾಗೂ ನಾಲ್ಕು ಅಸಹಜ ಸಾವುಗಳು ಸಂಭವಿಸಿವೆ. ಅದರಲ್ಲಿ ನಿರ್ಗತಿಕರು, ಭಿಕ್ಷುಕರು, ವಯೋವೃದ್ಧರೇ ಹೆಚ್ಚು. ಚಳಿಗಾಲದ ಸಂದರ್ಭದಲ್ಲಿ ಅಸಹಜ ಸಾವಿನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತವೆ. ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತ, ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದ ಮೂರು ವರ್ಷಗಳಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದವರು ಮೃತಪಟ್ಟರೇ, ಅವರ ಕುಟುಂಬಗಳಿಗೆ ರೈಲ್ವೆ ಇಲಾಖೆಯಿಂದ ಪರಿಹಾರ ಒದಗಿಸಲಾಗುತ್ತದೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರೈಲ್ವೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರಯಾಣಿಕರು ಜಾಗೃತಿವಹಿಸಬೇಕು. ನಿಯಮ ಉಲ್ಲಂಘಿಸುವವರಿಗೆ ತಿಳಿಹೇಳಬೇಕುರೈಲ್ವೆ ಪೊಲೀಸ್ ಅಧಿಕಾರಿ ಹುಬ್ಬಳ್ಳಿ ವಿಭಾಗ
ರೈಲು ಹಳಿಯಲ್ಲಿ ಓಡಾಡದಂತೆ ರೈಲ್ವೆ ಇಲಾಖೆಯಿಂದ ವರ್ಷವಿಡೀ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ. ಆದರೂ ನಿಯಮಗಳನ್ನು ಉಲ್ಲಂಘಿಸಿ ರೈಲು ಹಾಯ್ದು ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆಮಂಜುನಾಥ ಕನಮಡಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.