
ಹುಬ್ಬಳ್ಳಿ: ಹುಬ್ಬಳ್ಳಿ ವಾಣಿಜ್ಯ ಚಟುವಟಿಕೆಗಳಿಗೆ ಖ್ಯಾತಿಯಾಗಿದ್ದರೆ, ಧಾರವಾಡ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಸರುವಾಸಿ. ಈ ಎರಡೂ ನಗರದಲ್ಲಿ ರೌಡಿಗಳ ಚಟುವಟಿಕೆಗಳು ವ್ಯಾಪಕವಾಗಿದೆ.
ಅವಳಿನಗರದ ರೌಡಿಗಳಿಗೆ ಬಡವ-ಶ್ರೀಮಂತರೆನ್ನುವ ಭೇದವಿಲ್ಲ, ರಾಜಕಾರಣಿ-ಪೊಲೀಸ್ ಎನ್ನುವ ಹಿಂಜರಿಕೆಯಿಲ್ಲ, ಹಗಲು-ರಾತ್ರಿಯೆನ್ನುವ ಸಮಯದ ಮಿತಿಯೂ ಇಲ್ಲ. ಮಾಡಬೇಕಾದದ್ದು ಮಾಡುತ್ತಾರೆ, ತಲೆ ಮರೆಸಿಕೊಳ್ಳುತ್ತಾರೆ, ಅಗತ್ಯವಿದ್ದರೆ ಪೊಲೀಸರಿಗೆ ಶರಣಾಗುತ್ತಾರೆ. ಕೆಲವು ಸಂದರ್ಭದಲ್ಲಿ ಪೊಲೀಸರೇ ಅವರನ್ನು ಬಂಧಿಸುತ್ತಾರೆ. ಸ್ಟೇಷನ್ ಬೇಲ್ ಪಡೆದು ಮತ್ತೆ ವಾಪಸ್ಸಾಗುತ್ತಾರೆ. ಅವರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದಾದರೆ ಪೊಲೀಸರು ಸಹ ಯಾವ ಮುಲಾಜಿಲ್ಲದೆ ಅವರನ್ನು ಒಂದಷ್ಟು ತಿಂಗಳು ಗಡಿಪಾರು ಮಾಡುತ್ತಾರೆ. ಇಲ್ಲಾ, ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಸುತ್ತಾರೆ.
‘ಅವಳಿ ನಗರದಲ್ಲಿ ನಡೆಯುವ ಬಹುತೇಕ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ರೌಡಿಗಳ ನಂಟು ಇವೆ. ದೊಡ್ಡ ಉದ್ಯಮವೇ ಇರಲಿ, ಸಣ್ಣ ವ್ಯಾಪಾರವೇ ಇರಲಿ, ಬೀದಿಬದಿಯ ಟೀ ಅಂಗಡಿಯೇ ಇರಲಿ, ಅಲ್ಲೆಲ್ಲ ಅವರ ಹಸ್ತಕ್ಷೇಪವಿದೆ. ಕಂಡು ಕಾಣದ ಹಾಗೆ ತೆರೆಮರೆಯಲ್ಲಿ ವ್ಯವಹಾರ ನಡೆಯುತ್ತವೆ. ಉಳ್ಳವರು, ತಮ್ಮ ಅಕ್ರಮದ ವ್ಯವಹಾರಕ್ಕೆ ರೌಡಿಗಳಿಂದ ಸಮಸ್ಯೆಯಾಗದಿರಲಿ ಎಂದು ವ್ಯವಹರಿಸಿದರೆ, ಬಡವರು, ದಿನದ ಬದುಕು ನಡೆದರೆ ಸಾಕು ಎಂದು ಬೆದರುತ್ತ ಹಫ್ತಾ ನೀಡಿ, ರೌಡಿಗಳ ಜೊತೆ ವ್ಯವಹರಿಸುತ್ತಾರೆ’ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.
ಹುಬ್ಬಳ್ಳಿಯ ಸೆಟ್ಲಮೆಂಟ್, ಮಂಟೂರು ರಸ್ತೆ, ಗೂಡ್ಸ್‌ಶೆಡ್ ರಸ್ತೆ, ಗೋಪನಕೊಪ್ಪ, ಹೊಸೂರು, ನೇಕಾರನಗರ, ಆನಂದನಗರ ಹಾಗೂ ಧಾರವಾಡದ ಮಣಿಕಿಲ್ಲ, ಮಾಳಮಡ್ಡಿ, ಲಕ್ಷ್ಮಿಕೆರೆ, ಮಾದರಮಡ್ಡಿ, ಗೊಲ್ಲರ ಕಾಲೊನಿ ಹೀಗೆ ಕೆಲವು ಕಡೆ ರೌಡಿಗಳ ದೊಡ್ಡ ಪಡೆಯೇ ಇದೆ. ಒಂದೊಂದು ಗ್ಯಾಂಗ್‌ಗೆ ಒಂದೊಂದು ಹೆಸರು. ಕೆಲವು ರೌಡಿಗಳು ತಮ್ಮ ಮನೆತನದ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಪೊಲೀಸರು ಸಹ ಗ್ಯಾಂಗ್ ಹೆಸರಲ್ಲೇ ಅವರನ್ನು ಗುರುತಿಸುತ್ತಾರೆ. ಅವರಿಗೆ ಸಂಬಂಧಿಸಿ ಏನಾದರೂ ಗಲಾಟೆ, ಪ್ರಕರಣಗಳು ನಡೆದಾಗ ಮೊದಲು ವಿಚಾರಣೆ ನಡೆಸುವುದೇ ಆ ಗ್ಯಾಂಗ್‌ನ ಪ್ರಮುಖ ರೌಡಿಯನ್ನ!
ನಗರದ ಹಳೇ ಸಿಎಆರ್ ಮೈದಾನದಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿ ಆಗಾಗ ನಡೆಯುವ ರೌಡಿ ಪರೇಡ್‌ನಲ್ಲಿ ರೌಡಿಗಳ ಚಟುವಟಿಕೆಗಳು ಏನೆಂಬುದು ಬಹಿರಂಗವಾಗುತ್ತವೆ. ಇತ್ತೀಚೆಗೆ ಸಿಎಆರ್ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ಠಾಣಾ ಇನ್‌ಸ್ಪೆಕ್ಟರ್‌ಗಳು ರೌಡಿಗಳ ಆಟಾಟೋಪದ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ವಿವರಿಸಿದ್ದರು. ಹೋಟೆಲ್‌ನಲ್ಲಿ ಕೆಲಸ, ಆಟೊ ಚಾಲಕ, ಡೆಲಿವರಿ ಬಾಯ್, ಕಟ್ಟಡ ಕಾರ್ಮಿಕ, ವಿದ್ಯಾರ್ಥಿ, ಮಾಲಾಧಾರಿಗಳು, ವ್ಯಾಪಾರಸ್ಥರು ಹೀಗೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅಪರಾಧ ಕೃತ್ಯಗಳನ್ನು ಎಸಗಿ ರೌಡಿ ಪಟ್ಟಿಯಲ್ಲಿ ಸೇರ್ಪಡೆಯಾದವರು ಬಂದಿದ್ದರು.
ರೌಡಿಗಳ ವೇಷ ನೋಡಿಯೇ ಕಮಿಷನರ್ ಶಶಿಕುಮಾರ್ ಕೋಪಗೊಂಡಿದ್ದರು. ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡು ಶಿಸ್ತಿನಿಂದ ಇರುವಂತೆ ಎಚ್ಚರಿಕೆ ನೀಡಿದ್ದರು. ಚಪ್ಪಲಿ ಇಲ್ಲದೆ ಹರಿದ ಪ್ಯಾಂಟ್ ಧರಿಸಿ ನಿಂತಿರುವ ಬಡಕಲು ದೇಹದ ರೌಡಿ ನೋಡಿ ಹುಬ್ಬೇರಿಸಿದ್ದರು. ಬಾಚಣಿಕೆ ಕಾಣದ ತಲೆ, ನೀರು ನೋಡದ ದೇಹ, ಗಬ್ಬುನಾರುತ್ತಿರುವ ಬಟ್ಟೆ ಧರಿಸಿರುವ ರೌಡಿಗಳು ಸಹ ಅಲ್ಲಿದ್ದರು. ಅವರ ಹಾವ, ಭಾವ, ಭಂಗಿ, ಮುಖದಲ್ಲಿರುವ ಅಮಾಯಕತೆ ಕಂಡು ಇವರು ಯಾವ ಸೀಮೆ ರೌಡಿಗಳು ಎನ್ನುವಂತಿತ್ತು. ಆದರೆ, ಒಬ್ಬೊಬ್ಬರ ಮೇಲೆ ಏಳರಿಂದ ಇಪ್ಪತ್ತು, ಮೂವತ್ತು ಪ್ರಕರಣಗಳು ದಾಖಲಾಗಿವೆ. ಮಾದಕ ವಸ್ತುಗಳ ಮಾರಾಟ–ಸಾಗಾಟ, ಜೂಜು, ಮರಳು ಮಾಫಿಯಾ, ಹಲ್ಲೆ, ಬೆದರಿಕೆ, ಕೊಲೆ, ಗಲಭೆ, ಘರ್ಷಣೆ, ಕಳವು ಹೀಗೆ ಬೇರೆಬೇರೆ ಪ್ರಕರಣಗಳು ಒಬ್ಬೊಬ್ಬರ ವಿರುದ್ಧ ಇವೆ. ಪೊಲೀಸರಂತೂ ಇವರನ್ನು ಸಮಾಜಘಾತುಕ ಶಕ್ತಿಗಳು ಎಂದೇ ಕರೆಯುತ್ತಾರೆ.
‘ಇಲ್ಲಿಯ ರೌಡಿಗಳು ತಲ್ವಾರ್‌ನಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡು, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಾರೆ. ಕೆಲವು ರೌಡಿಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ, ತಮ್ಮ ಸ್ಟೈಲ್, ಲುಕ್, ರೈಡಿಂಗ್, ತಲ್ವಾರ್ ಹಿಡಿದ ಫೋಟೊ, ವಿಡಿಯೊಗಳಿಗೆ ಅಡಿ ಬರಹ ಬರೆದು ಪೋಸ್ಟ್ ಮಾಡಿ ಖ್ಯಾತಿ ಪಡೆಯಲು ಯತ್ನಿಸುತ್ತಾರೆ. ಕೆಲವರ ಪೋಸ್ಟ್‌ಗೆ ಅಸಭ್ಯವಾಗಿ ಕಮೆಂಟ್ ಮಾಡುತ್ತ, ಬೆದರಿಕೆ ಹಾಕುತ್ತ ತಮ್ಮ ಅಸ್ತಿತ್ವ ಹಾಗೂ ಇರುವಿಕೆ ಕಾಪಾಡಿಕೊಳ್ಳಲು ಹವಣಿಸುತ್ತಾರೆ. ಆದರೆ, ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಸಾಮಾಜಿಕ ಜಾಲತಾಣದ ನಿಯಂತ್ರಣ ಕೊಠಡಿಯಲ್ಲಿರುವ ಸಿಬ್ಬಂದಿ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡುತ್ತದೆ ಎಂದು ಪೊಲೀಸರು ಹೇಳುತ್ತಾರೆ.
ಹುಬ್ಬಳ್ಳಿ–ಧಾರವಾಡ ಮಹಾನಗರದ ರೌಡಿಗಳ ಮೇಲೆ ನಿಗಾ ಇರಿಸಿದ್ದೇವೆ. ಅವರ ಕುರಿತು ಮಾಹಿತಿ ಸಂಗ್ರಹಿಸುತ್ತೇವೆ. ಅನುಮಾನಾಸ್ಪದ ವಿಷಯಗಳಿಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ.ಎನ್.ಶಶಿಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ–ಧಾರವಾಡ
ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಾಗ ರೌಡಿ ಪರೇಡ್ ಮಾಡಿ ಎಚ್ಚರಿಕೆ ನೀಡಲಾಗುತ್ತದೆ. ಅವರ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತದೆ–ಮಹಾನಿಂಗ ನಂದಗಾವಿ ಡಿಸಿಪಿ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ
ಇಲ್ಲಿಯ ರೌಡಿಗಳ ಹೆಸರೂ ಭಿನ್ನ-ವಿಭಿನ್ನ ಹಾಗೂ ವಿಚಿತ್ರ. ಖಾರದಪುಡಿ ನಾಗ, ಬೆಕ್ಕಿನಕಣ್ಣಿನ ಮಲ್ಲ, ತಲ್ವಾರ್ ರಾಜ್, ಬಂಡೆ ಬಾಬು, ಟೈರ್ ಟೆಕ್ಕಿ, ಬಂದೂಕ ಬಾಷ, ಬಂದೂಕ ಬಾಬು, ಡಿಸ್ಕೌಂಟ್ ಧನು, ಸಿಲ್ಕ್ ಸಿಂಹ, ಬೆಂಕಿಕಡ್ಡಿ ಸೀನ, ಸೈಂಟಿಸ್ಟ್ ಮಂಜ್ಯಾ, ಟಿಸ್ ಮಂಜ್ಯಾ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಪರ್ಯಾಯ ಹೆಸರು. ಅದೇ ಹೆಸರಲ್ಲಿ ಕುಖ್ಯಾತಿಗೂ ಒಳಗಾಗಿದ್ದಾರೆ. ವಿಶೇಷವೆಂದರೆ ಪೊಲೀಸರು ಸಹ ಅವರನ್ನು ಅದೇ ಹೆಸರಿಂದ ಗುರುತಿಸುತ್ತಾರೆ. ಅಲ್ಲದೆ, ಅವರ ನಿಜ ಹೆಸರಿನ ಜೊತೆಗೆ ಅಲಿಯಾಸ್ ಸೇರಿಸಿ, ಪರ್ಯಾಯ ಹೆಸರಿನಲ್ಲಿ ಪ್ರಕರಣ ದಾಖಲಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.