
ಹುಬ್ಬಳ್ಳಿ: ‘ತಮಿಳುನಾಡಿನ ತಿರುಪಕುಂದ್ರಂ ಬೆಟ್ಟದಲ್ಲಿರುವ ದೀಪಸ್ತಂಭದಲ್ಲಿ ದೀಪ ಹಚ್ಚುವ ಕುರಿತು ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ವಾಗ್ದಾಂಡನೆ ಮತ್ತು ಪದಚ್ಯುತಿಗೆ ನಿರ್ಣಯ ಕೈಗೊಂಡಿರುವುದು ನ್ಯಾಯಾಂಗ ವ್ಯವಸ್ಥೆಗೆ ಧಮಕಿ ಹಾಕಿದಂತೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
‘ಭ್ರಷ್ಟಾಚಾರ ಆರೋಪ, ಹುದ್ದೆಯ ದುರುಪಯೋಗ ಮಾಡಿಕೊಂಡರೆ ಮಾತ್ರ ನ್ಯಾಯಮೂರ್ತಿಯನ್ನು ವಾಗ್ದಂಡನೆ ಅಥವಾ ಪದಚ್ಯುತಿಗೊಳಿಸಬಹುದು. ಆದರೆ, ತಮ್ಮ ತುಷ್ಟೀಕರಣದ ವಿರುದ್ಧ ತೀರ್ಪು ನೀಡಿದ್ದಾರೆ ಎಂದು ನ್ಯಾಯಮೂರ್ತಿಯನ್ನು ಶಿಕ್ಷೆಗೆ ಒಳಪಡಿಸುವ ನಿರ್ಣಯ ಸಂವಿಧಾನ ವಿರೋಧಿಯಾಗಿದೆ. ಇದು ದೇಶದ ಇತಿಹಾಸದಲ್ಲಿಯೇ ಮೊದಲನೆಯದಾಗಿದ್ದು, ಕಾಂಗ್ರೆಸ್ ನಡೆ ಖಂಡನೀಯವಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದ್ದು, ಕಾಂಗ್ರೆಸ್ ಜೊತೆ ಸೇರಿಕೊಂಡಿದೆ. ಬಹುಮತವಿದೆಯೆಂದು ಸಂವಿಧಾನ ವಿರೋಧಿ ಕೃತ್ಯ ಎಸಗಲು ಸಾಧ್ಯವಿಲ್ಲ. ಕೈಯ್ಯಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುವವರು, ಅದರ ಮೂಲ ಉದ್ದೇಶವನ್ನೇ ಗಾಳಿಗೆ ತೂರುತ್ತಿದ್ದಾರೆ. ಈಗಾಗಲೇ ಜನರು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಹೀಗಿದ್ದಾಗಲೂ ಅದು ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ದುರ್ದೈವದ ಸಂಗತಿ’ ಎಂದರು.
‘ಅವರ ಪರ ತೀರ್ಪು ಬಂದರೆ ನ್ಯಾಯಮೂರ್ತಿ, ನ್ಯಾಯಾಧೀಶರು ಹಾಗೂ ನ್ಯಾಯಾಲಯ ಉತ್ತಮವಾಗಿ ಕೆಲಸ ಮಾಡುತ್ತಿದೆ ಎನ್ನುತ್ತಾರೆ. ಸಂವಿಧಾನಬದ್ಧವಾಗಿ ನ್ಯಾಯಸಮ್ಮತ ತೀರ್ಪು ಬಂದರೆ ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಅಯೋಧ್ಯ ರಾಮಮಂದಿರ ತೀರ್ಪು ಬಂದಾಗಲೂ ನ್ಯಾಯಾಂಗ ಟೀಕೆ ಮಾಡಿದ್ದರು. ತಾವು ಹೇಳಿದಂತೆ ಕೇಳುವ, ತುಷ್ಟೀಕರಣದ ಪರವಾಗಿ ತೀರ್ಪು ನೀಡುವ ನ್ಯಾಯಮೂರ್ತಿಗಳು ಅವರಿಗೆ ಬೇಕು’ ಎಂದು ಕಿಡಿಕಾರಿದ ಜೋಶಿ, ‘ತೀರ್ಪು ವ್ಯತಿರಿಕ್ತ ಎಂದೆನಿಸಿದರೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಅದನ್ನು ಬಿಟ್ಟು ದೇಶದಲ್ಲಿ ವಿಶ್ವಾಸ ಇಟ್ಟುಕೊಂಡಿರುವ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸುವುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.