ADVERTISEMENT

ಕದನ ವಿರಾಮ: ಪ್ರಧಾನಿ ಮೋದಿಯಿಂದ ವಿಶ್ವಾಸ ದ್ರೋಹ; ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:55 IST
Last Updated 10 ಮೇ 2025, 14:55 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹುಬ್ಬಳ್ಳಿ: ‘ಎಪ್ಪತ್ತೆಂಟು ವರ್ಷಗಳವರೆಗೆ ಹಿಂದೂಗಳ ರಕ್ತ ಹರಿಸಿದ್ದ ಪಾಕಿಸ್ತಾನ ನಿರ್ನಾಮ ಆಗುವವರೆಗೆ ಭಾರತ ಕದನ ವಿರಾಮ ಘೋಷಿಸಬಾರದಿತ್ತು. ನೂರು ಕೋಟಿ ಹಿಂದೂಗಳ ವಿಶ್ವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.

‘ಭಾರತ ಕದನ ವಿರಾಮ ಘೋಷಿಸಿರುವುದನ್ನು ನಾವಂತೂ ಒಪ್ಪುತ್ತಿಲ್ಲ. ಇಷ್ಟು ವರ್ಷ ಪಾಕಿಸ್ತಾನ ನಡೆಸಿದ್ದ ಕ್ರೌರ್ಯ, ಭಯೋತ್ಪಾದನ ಕೃತ್ಯಕ್ಕೆ ತಕ್ಕ ಪಾಠ ಕಲಿಸಲೇಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪು ನಿರ್ಧಾರ ತೆಗೆದುಕೊಂಡಿದ್ದು, ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಈ ಹಿಂದೆಯೂ ಪಾಕಿಸ್ತಾನ ಕದನ ವಿರಾಮ ಎಂದು, ಎಷ್ಟೋ ಮಂದಿ ಭಾರತೀಯರನ್ನು ಸಾಯಿಸಿದೆ. ಈಗ ಮತ್ತೆ ಎಷ್ಟು ಮಂದಿ ಸಾಯಿಸಬೇಕೆಂದು ಮೋದಿ ನಿರ್ಧರಿಸಿದ್ದಾರೆ? ಒಬ್ಬನೇ ಒಬ್ಬ ಹಿಂದೂ ಸಾಯುಬಾರದು ಎಂದು ನಿಮ್ಮನ್ನು ಆಯ್ಕೆ ಮಾಡಿದ್ದು, ಪ್ರಧಾನಿ ಸ್ಥಾನದಲ್ಲಿ ಕುಳ್ಳಿರಿಸಿದ್ದು. ನಿಮ್ಮ ನಿರ್ಧಾರದ ವಿರುದ್ಧ ನಾವು ಹೋರಾಡುವುದು ನಿಶ್ಚಿತ’ ಎಂದರು.

ADVERTISEMENT

‘ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥವಾ ಆಂತರಿಕವಾಗಿ ಎಷ್ಟೇ ಒತ್ತಡ ಇದ್ದಿರಬಹುದು. ಆದರೆ, ಭಾರತದ ಸುರಕ್ಷತೆ ದೃಷ್ಟಿಯಿಂದ ಮೋದಿ ಅವರು, ಕದನ ವಿರಾಮ ಘೋಷಣೆಯ ನಿರ್ಣಯವನ್ನು ತಕ್ಷಣ ವಾಪಾಸ್‌ ತೆಗೆದುಕೊಳ್ಳಬೇಕು. ಪಾಕಿಸ್ತಾನದ ಭಯೋತ್ಪಾದನೆಗೆ ತಾರ್ಕಿಕ ಅಂತ್ಯ ಹಾಡಬೇಕು’ ಎಂದು ಆಗ್ರಹಿಸಿದರು.

‘ಭಾರತದ ಆಂತರಿಕ ವಿಷಯದಲ್ಲಿ ತಲೆ ಹಾಕಲು ಅಮೆರಿಕಾದ ಅಧ್ಯಕ್ಷ ಟ್ರಂಪ್‌ ಯಾರು? ಅವರಿಗೆ ಏನು ಸಂಬಂಧವಿದೆ? ನಮ್ಮ ದೇಶದ ಸುರಕ್ಷತೆಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ತೆಗೆದುಕೊಂಡ ಆಪರೇಷನ್‌ ಸಿಂಧೂರ ನಿರ್ಧಾರದಿಂದ, ಪಾಕಿಸ್ತಾನ ಮುಂದಿನ ನೂರು ವರ್ಷ ಭಾರತದ ವಿರುದ್ಧ ಉಸಿರು ಎತ್ತುವುದಿಲ್ಲ ಎಂದುಕೊಂಡಿದ್ದೆವು. ಆದರೆ, ಮೋದಿ ದೇಶದ ಜನತೆಗೆ ವಿಶ್ವಾಸ ದ್ರೋಹ  ಮಾಡಿದರು’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.