
ಧಾರವಾಡ: ‘ದೇಶದ ಪ್ರತಿಯೊಬ್ಬ ಪ್ರಜೆಯು ಇಡೀ ಸಂವಿಧಾನವನ್ನು ಅಧ್ಯಯನ ಮಾಡಬೇಕೆ ಹೊರತು ಅದರ ಪೀಠಿಕೆ ಓದುವಿಕೆಗಷ್ಟೇ ಸೀಮಿತವಾಗಬಾರದು. ಸಂವಿಧಾನದ ಆಶಯ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ಗಾಂಧಿ ಭವನದಲ್ಲಿ ಶುಕ್ರವಾರ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ಸಂವಿಧಾನವೇ ಬೆಳಕು’ ಅಭಿಯಾನದಡಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ‘ಹೆಜ್ಜೆಯಿಡು ಹುಬ್ಬಳ್ಳಿ ಮತ್ತು ಧಾರವಾಡ ಸಂವಿಧಾನಕ್ಕಾಗಿ ನಡಿಗೆ (ವಾಕಥಾನ್) ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
‘ಸಂವಿಧಾನದ ಪೀಠಿಕೆಯು ದೇಶದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ ಅಂಶಗಳನ್ನು ತಿಳಿಪಡಿಸುತ್ತದೆ. ರಾಜ್ಯ ನಿರ್ದೇಶಕ ತತ್ವಗಳು ಸೇರಿ ದೇಶದ ನಾಗರಿಕನ ಮೂಲಭೂತ ಹಕ್ಕು, ಕರ್ತವ್ಯಗಳು ಸೇರಿ ಹಲವು ಅಂಶಗಳನ್ನು ಸಂವಿಧಾನವು ತಿಳಿಪಡಿಸುತ್ತದೆ’ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ವೈ.ಮಟ್ಟಿಹಾಳ ಮಾತನಾಡಿ, ‘ಸಂವಿಧಾನ ಜಾರಿಯಾಗಿ 77 ವರ್ಷಗಳಾದರೂ ಇಂದಿಗೂ ದೇಶದಲ್ಲಿ ಸಮಾನತೆಗಾಗಿ ನಿತ್ಯ ಹೋರಾಟ ನಡೆಯುತ್ತಲೇ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಗಾಂಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಶಿವಾನಂದ ಶೆಟ್ಟರ್ ಅವರು, ‘ಮಹಿಳೆಯರು, ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳು ತಡೆಯಲು ಸಂವಿಧಾನದ ಆಶಯಗಳನ್ನು ಪಾಲಿಸಬೇಕು’ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ ಮಾತನಾಡಿ, ‘ಸಂವಿಧಾನದಿಂದ ನಾವು ಏನು ಪಡೆದಿದ್ದೇವೆ. ನಮ್ಮ ಹೊಣೆಗಾರಿಕೆ ಏನು ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿತುಕೊಳ್ಳಬೇಕು’ ಎಂದರು.
‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೆಕ್ಕನ್‌ಹೆರಾಲ್ಡ್ ಬ್ಯುರೊ ಮುಖ್ಯಸ್ಥ ವೆಂಕಟರಾಜ್, ಟಿಪಿಎಂಎಲ್ ಸಂಸ್ಥೆಯ ಜಾಹೀರಾತು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ದಿವಾಕರ್ ಭಟ್ ಹಾಗೂ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂವಿಧಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಬೇರೆಯವರಿಗೂ ಅರಿವು ಮೂಡಿಸಬೇಕು. ಇಂತಹ ವಾಕಾಥಾನ್ ಆಗಾಗ ನಡೆಯಲಿಅನುರಾಧಾ ರಾಥೋಡ್ ವಿದ್ಯಾರ್ಥಿನಿ
ಸಂವಿಧಾನವೇ ಬೆಳಕು– ವಾಕಥಾನ್ ಅರ್ಥಪೂರ್ಣವಾಗಿ ನಡೆಯಿತು. ಇಂತಹ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.ಅಭಿಷೇಕ್ ರಾಮಲದಿನ್ನಿ ವಿದ್ಯಾರ್ಥಿ
ಖುಷಿ ಉತ್ಸಾಹ ಹೆಚ್ಚಿಸಿದ ನಡಿಗೆ
‘ಸಂವಿಧಾನಕ್ಕಾಗಿ ನಡಿಗೆ’ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕುಲಸಚಿವರ ಜೊತೆಗೆ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಧ್ಯಾಪಕರು ಬೋಧಕರು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ವಕೀಲರು ಅಲ್ಲದೇ ವಿವಿಧ ಸಂಘಟನೆಗಳು ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊದಲೇ ಹೆಸರು ನೋಂದಾಯಿಸಿಕೊಂಡಿದ್ದ ಪ್ರತಿಯೊಬ್ಬರಿಗೂ ಟಿ–ಶರ್ಟು ಮತ್ತು ಕ್ಯಾಪ್ ವಿತರಿಸಲಾಯಿತು. ಎಲ್ಲರೂ ಅವುಗಳನ್ನು ತೊಟ್ಟು ಖುಷಿಯಿಂದ ಹೆಜ್ಜೆ ಹಾಕಿದರು. ‘ಸಂವಿಧಾನವೇ ಬೆಳಕು’ ಎಂಬ ಶ್ವೇತ ಬಣ್ಣದ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ಬೆಳಗಾವಿ ಉತ್ತರ ಕನ್ನಡ ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನ ಬಂದಿದ್ದರು. ‘ಸಂವಿಧಾನ ಬೆಳಕು’ ಪ್ರದರ್ಶನದ ಫಲಕದ ಎದುರು ಹಲವರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಗ್ರೂಪ್ ಫೋಟೋ ತೆಗೆಸಿಕೊಂಡರು. ಸಂವಿಧಾನದ ಕುರಿತು ಇನ್ನಷ್ಟು ಅಧ್ಯಯನ ಮಾಡುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.