
ಹುಬ್ಬಳ್ಳಿ: ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ನೆಲೆಗಟ್ಟು ಭದ್ರವಾಗಿದ್ದು, ಅದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ವಿದ್ಯಾನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಈಚೆಗೆ ನಡೆದ 27ನೇ ಪ್ರತಿಷ್ಠಾಪನಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯುವಸಮೂಹವು ಸಾಮಾಜಿಕ ಜಾಲತಾಣದಲ್ಲಿ ತಲ್ಲೀನವಾಗಿದೆ. ಎಲ್ಲರಿಗೂ ಸಂಸ್ಕಾರ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಕಲಿಸಬೇಕಿದೆ. ಈ ವಿಷಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ’ ಎಂದರು.
ಚಂದ್ರಶೃಂಗ ಪೂರ್ಣಶೇಖರ ಪ್ರತಿಷ್ಠಾನದ ಧರ್ಮದರ್ಶಿ ಶಾಕ್ಯಂ ಯುದಿಷ್ಠಿರ ಪ್ರಜ್ವಲ ಗುರೂಜಿ ಮಾತನಾಡಿ, ‘ತಾಯಿ ಗರ್ಭದಿಂದಲೇ ಮಕ್ಕಳಿಗೆ ಸಂಸ್ಕಾರ ಆರಂಭವಾಗುತ್ತದೆ. ಆನಂತರ ತಾಯಿ ನೀಡುವ ಸಂಸ್ಕಾರ ಮಕ್ಕಳ ಭವಿಷ್ಯ ರೂಪಿಸುತ್ತದೆ. ಇದು ದೇಶದ ಸಂಸ್ಕೃತಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.
‘ರಾಷ್ಟ್ರ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಬ್ಬರೂ ಇವುಗಳನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
ಲೇಖಕಿ ಶಾಂತಾ ಬಸವರಾಜ ರಚಿಸಿದ ‘ವಿಶ್ವಗುರು ಬಸವಣ್ಣ’ ಕೃತಿಯ 4ನೇ ಸಂಪುಟ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಬಿ.ಎಲ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬನಶಂಕರಿ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ರಂಗಯ್ಯ ಬಿಜ್ಜೂರ, ಆಡಳಿತ ಮಂಡಳಿಯ ಗೌರವಾಧ್ಯಕ್ಷ ಶಂಕರ ಮೂರ್ತಿ, ಶಾಂತಾ ಬಸವರಾಜ, ಅಜಿತ ರೋಖಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.